ಬೆಂಗಳೂರು[ಜ.14]: ಜಿಹಾದಿ ಗ್ಯಾಂಗ್‌ ಬಂಧನದ ಬೆನ್ನಲ್ಲೇ ತಲೆಮರೆಸಿಕೊಂಡಿರುವ ರಾಜ್ಯದಲ್ಲಿ ಐಸಿಸ್‌ ಸೇನೆ ಕಟ್ಟುವ ತಂಡದ ‘ಕಮಾಂಡರ್‌’ ಎನ್ನಲಾದ ಬೆಂಗಳೂರಿನ ಸದ್ದುಗುಂಟೆಪಾಳ್ಯದ ಮೆಹಬೂಬ್‌ ಪಾಷ ಪತ್ತೆಗೆ ಸಿಸಿಬಿ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಆತ ದೇಶದ ಗಡಿ ದಾಟಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತಪಡಿಸಿದೆ.

ದೆಹಲಿಯಲ್ಲಿ ತಮಿಳುನಾಡು ಮೂಲದ ಜಿಹಾದಿ ಗ್ಯಾಂಗ್‌ ತಂಡದ ಪ್ರಮುಖ ನಾಯಕ ಖಾಜಾ ಮೊಹಿದ್ದೀನ್‌ ಹಾಗೂ ಬೆಂಗಳೂರಿನಲ್ಲಿ ಆತನ ಸಹಚರರು ಸೆರೆಯಾಗಿದ್ದರು. ಈ ವಿಚಾರಣೆ ವೇಳೆ ಕರ್ನಾಟಕದಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆಗೆ ಹೊಸ ಸದಸ್ಯರ ನೇಮಕಾತಿ ಹೊಣೆಗಾರಿಕೆಯನ್ನು ಮೆಹಬೂಬ್‌ ಪಾಷ ಹೊತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ತನ್ನ ಸಹಚರರ ಬಂಧನ ವಿಷಯ ತಿಳಿದ ಕೂಡಲೇ ಬೆಂಗಳೂರು ತೊರೆದಿರುವ ಆತನಿಗಾಗಿ ಹೊರ ರಾಜ್ಯಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಐಸಿಸ್‌ ನಂಟು: ಕೋಲಾರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

ಕೇಂದ್ರ ಗುಪ್ತಚರ, ತಮಿಳುನಾಡು ಹಾಗೂ ಸಿಸಿಬಿ ಪೊಲೀಸರು, ಮೆಹಬೂಬ್‌ ಪಾಷ ಬೆನ್ನತ್ತಿದ್ದಾರೆ. ಜಿಹಾದಿ ಗ್ಯಾಂಗ್‌ನಲ್ಲಿ ಖಾಜಾ ಮೊಹಿದ್ದೀನ್‌ ಬಳಿಕ ಮೆಹಬೂಬ್‌ ಪಾಷ ಪ್ರಮುಖ ನೇತಾರನಾಗಿದ್ದು, ಆತನಿಗೆ ಬೆಂಗಳೂರು ಮಾತ್ರವಲ್ಲದೆ ಚಾಮರಾಜನಗರ, ಕೋಲಾರ ಸೇರಿ ರಾಜ್ಯ ವ್ಯಾಪಿ ಸಂಪರ್ಕ ಜಾಲವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖಾಜಾ ಬಂಧನ ವಿಷಯ ತಿಳಿದ ನಂತರ ಜಾಗ್ರತನಾದ ಮೆಹಬೂಬ್‌, ಐಸಿಸ್‌ ಹಿತೈಷಿಗಳ ಸಹಕಾರ ಪಡೆದು ದೇಶದ ಗಡಿ ದಾಟಿರಬಹುದು ಎಂಬ ಅನುಮಾನವಿದೆ. ಆದರೆ ಹೊರ ರಾಜ್ಯಗಳಲ್ಲಿ ಆತ ಆಶ್ರಯ ಪಡೆದಿರುವ ಬಗ್ಗೆ ಕೆಲ ಮಾಹಿತಿಗಳು ಬಂದಿವೆ. ಹೀಗಾಗಿ ಪಾಷ ಗಡಿ ದಾಟಿದ್ದಾನೆ ಎಂಬುದು ಖಚಿತವಾಗಿಲ್ಲ. ಈಗಾಗಲೇ ಗಡಿ ಸುರಕ್ಷತಾ ಪಡೆಗಳಿಗೆ ಪಾಷ ಕುರಿತು ವಿವರ ಕಳುಹಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಸಹ ನಿಗಾ ವಹಿಸಲಾಗಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಇಬ್ಬರು ವಶಕ್ಕೆ

ಬೆಂಗಳೂರಿನಲ್ಲಿ ಮತ್ತೆ ಮೆಹಬೂಬ್‌ ಪಾಷನ ಇಬ್ಬರು ಸಹಚರರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಮೆಹಬೂಬ್‌ ಜತೆ ಅವರು ನಿರಂತರ ಸಂಪರ್ಕದಲ್ಲಿದ್ದರು. ಹಾಗೆಯೇ ಪಾಷನ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಕೂಡಾ ಇಬ್ಬರು ಪಾಲ್ಗೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸದ್ದುಗುಂಟೆಪಾಳ್ಯ ಸಮೀಪ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ.

ಉಗ್ರ ನಂಟು: ಗುಂಡ್ಲುಪೇಟೆ ಮೌಲ್ವಿ ಸೇರಿ ಇಬ್ಬರು ವಶಕ್ಕೆ!

ತಾವು ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿಲ್ಲ. ಮೆಹಬೂಬ್‌ನ ಪರಿಚಯವಿದೆ. ಆದರೆ ಆತನ ಹಿತಾಸಕ್ತಿಗೆ ನಾವು ಬಲಿಯಾಗಿಲ್ಲ ಎಂದು ವಿಚಾರಣೆ ವೇಳೆ ಇಬ್ಬರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕುರಿತು ಸತ್ಯಾಸತ್ಯ ಪರಿಶೀಲನೆ ನಡೆದಿದೆ ಎಂದು ತಿಳಿಸಿವೆ