ಸಿಎಂ ಬೊಮ್ಮಾಯಿ ಸೇರಿ ಸರ್ಕಾರದ ಎಲ್ಲರೂ ಕಮಿಷನ್‌ ಕೇಳ್ತಾರೆ: ಗುತ್ತಿಗೆದಾರರ ಸಂಘ ಗಂಭೀರ ಆರೋಪ

ಇಷ್ಟೊಂದು ಭ್ರಷ್ಟ ಸರ್ಕಾರವನ್ನು ನನ್ನ ಜೀವನದಲ್ಲೇ ನೋಡಿಲ್ಲ. 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿದರೆ ಎಲ್ಲಾ ದಾಖಲೆ ನೀಡುತ್ತೇವೆ. ಸಾಬೀತುಪಡಿಸಲು ವಿಫಲವಾದರೆ ಯಾವ ಶಿಕ್ಷೆ ಅನುಭವಿಸಲೂ ಸಿದ್ಧವಿದ್ದೇವೆ ಎಂದು: ಕೆಂಪಣ್ಣ 

Everyone in the Government Including CM Bommai Ask for Commission Says Kempanna grg

ಬೆಂಗಳೂರು(ಆ.25):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲಾ ಸಚಿವರು, ಶಾಸಕರು ಸೇರಿ ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ. ಇಷ್ಟೊಂದು ಭ್ರಷ್ಟ ಸರ್ಕಾರವನ್ನು ನನ್ನ ಜೀವನದಲ್ಲೇ ನೋಡಿಲ್ಲ. 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿದರೆ ಎಲ್ಲಾ ದಾಖಲೆ ನೀಡುತ್ತೇವೆ. ಸಾಬೀತುಪಡಿಸಲು ವಿಫಲವಾದರೆ ಯಾವ ಶಿಕ್ಷೆ ಅನುಭವಿಸಲೂ ಸಿದ್ಧವಿದ್ದೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.

ತನ್ಮೂಲಕ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿರುವ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಕೆಂಪಣ್ಣ ನೇತೃತ್ವದಲ್ಲಿ ಬುಧವಾರ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವಂತೆ ಹಾಗೂ ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

40% Commission Row:ಸದ್ದಿಲ್ಲದೇ ಫೀಲ್ಡಿಗಿಳಿದ ಮೋದಿ ಟೀಂ: ಅಂದು ಆರೋಪಿಸಿದವರಿಗೆ ಈಗ ಸಾಕ್ಷಿ ಕೊಡುವ ಸಮಯ!

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ, 40 ಪರ್ಸೆಂಟ್‌ ಭ್ರಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಒಂದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ 15 ದಿನದಲ್ಲಿ ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸುತ್ತೇವೆ. ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಭ್ರಷ್ಟಾಚಾರ ದೇಶದ ಮೊದಲ ಶತ್ರು ಎಂದು ಹೇಳಿದ್ದೀರಿ. ಆದರೆ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಏಕೆ ಗಮನ ನೀಡಿಲ್ಲ ಎಂದು ಕೇಳುತ್ತೇವೆ ಎಂದರು.

ಭ್ರಷ್ಟಾಚಾರದಲ್ಲಿ ಎಲ್ಲರೂ ಫಸ್ಟ್‌ ರ‍್ಯಾಂಕ್‌:

ಭ್ರಷ್ಟಾಚಾರದಲ್ಲಿ ಯಾವ ಸಚಿವ ಫಸ್ಟ್‌ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ಸಚಿವರು, ಶಾಸಕರೂ ಫಸ್ಟ್‌ ರ‍್ಯಾಂಕ್‌ ಪಡೆಯುತ್ತಾರೆ. ಇಡೀ ವ್ಯವಸ್ಥೆಯೇ ಭ್ರಷ್ಟರ ಕೂಪವಾಗಿದೆ. ಬೊಮ್ಮಾಯಿಯೂ ಇದರಿಂದ ಹೊರತಾಗಿಲ್ಲ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಕೆಲವು ಕಡೆಯಂತೂ ಕೆಲಸ ಕೊಡುವುದಕ್ಕೆ ಮೊದಲೇ ಶೇ.10ರಷ್ಟು ಕಮಿಷನ್‌ಗೆ ಒತ್ತಾಯಿಸುತ್ತಿದ್ದಾರೆ. ಇಷ್ಟು ಭ್ರಷ್ಟಸರ್ಕಾರವನ್ನು ನಾವು ಎಂದೂ ನೋಡಿಲ್ಲ ಎಂದು ಕಿಡಿ ಕಾರಿದರು.

ಸಿಎಂ ಮಾತಿಗೆ ಕಿಮ್ಮತ್ತಿಲ್ಲ:

ಈ ಹಿಂದೆ ಮುಖ್ಯಮಂತ್ರಿಗಳು ಸಭೆ ನಡೆಸಿದಾಗ 1 ಕೋಟಿ ರು.ವರೆಗಿನ ಗುತ್ತಿಗೆಗಳನ್ನು ಪ್ಯಾಕೇಜ್‌ ಮಾಡಬೇಡಿ ಎಂದು ಕೇಳಿದ್ದೆವು. ಈ ಬಗ್ಗೆ ಟೆಂಡರ್‌ ಕರೆಯುವ ಪ್ರಕ್ರಿಯೆ ಬದಲಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದರೂ ಅಧಿಕಾರಿಗಳು ಕೇಳುತ್ತಿಲ್ಲ. ಮುಖ್ಯಮಂತ್ರಿಗಳ ಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆರೋಪಿಸಿದರು.

ಮುನಿರತ್ನ ವಿರುದ್ಧ ಆರೋಪ:

ಮೊದಲು ಶೇ.40ರಷ್ಟುಕಮಿಷನ್‌ ಇತ್ತು. ಈಗ ಕೆಲವು ಹಂತಗಳಲ್ಲಿ ಬದಲಾವಣೆ ಆಗಿದೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಕಲೆಕ್ಷನ್‌ ಮಾಡಿಕೊಂಡು ಬರಲು ಹೇಳಿದ್ದಾರೆ. ಇಲ್ಲದಿದ್ದರೆ ಕಾರ್ಯನಿರ್ವಾಹಕ ಎಂಜಿನಿಯರನ್ನು ಅಮಾನತು ಮಾಡುವುದಾಗಿ ಬೆದರಿಸಿದ್ದಾರೆ. ಉಸ್ತುವಾರಿ ಸಚಿವರೇ ಹೀಗಾದರೆ ಹೇಗೆ? ಇವರೂ ಗುತ್ತಿಗೆದಾರರಾಗಿ ಕೆಲಸ ಮಾಡಿದವರು. ಇವರಿಗೆ ನಮ್ಮ ಕಷ್ಟಗಳು ಗೊತ್ತಿಲ್ಲವೇ? ಎರಡು ಅವಧಿಯಲ್ಲಿ ರಾಜರಾಜೇಶ್ವರಿನಗರದಲ್ಲಿ 10 ಸಾವಿರ ಕೋಟಿ ರು. ಕೆಲಸ ಮಾಡಿಸಿದ್ದಾರೆ. ಏನು ಅಭಿವೃದ್ಧಿ ಆಗಿದೆ ಎಂದು ಕಿಡಿ ಕಾರಿದರು.

Karnataka Politics: ಬಿಜೆಪಿಯಲ್ಲಿ ಸೀಡಿ ರತ್ನ, ಕಮಿಷನ್‌ ರತ್ನ ಇವೆ: ಕುಮಾರಸ್ವಾಮಿ

ಯಾರಿಗೂ ದಾಖಲೆ ನೀಡಲ್ಲ:

ಸಿದ್ದರಾಮಯ್ಯ ಅವರಿಗೆ ಭ್ರಷ್ಟಾಚಾರದ ಬಗೆಗಿನ ಯಾವ ದಾಖಲೆಯನ್ನೂ ನೀಡಿಲ್ಲ. ಇಲಾಖಾವಾರು ಮಾಹಿತಿಯನ್ನೂ ನೀಡಿಲ್ಲ. ಹೋರಾಟಕ್ಕೆ ಬೆಂಬಲ ಕೇಳಿದ್ದೇವೆ. ಈಗಾಗಲೇ ದಾಖಲೆ ಸೋರಿಕೆಯಾಗಿ ದಾಖಲೆ ಒದಗಿಸಿರುವ ಆರೋಪದ ಮೇಲೆ ಇಬ್ಬರಿಗೆ ಗುತ್ತಿಗೆ ಕೆಲಸ ಸಿಗುತ್ತಿಲ್ಲ. ಗುತ್ತಿಗೆದಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಯಾರಿಗೂ ದಾಖಲೆ ನೀಡುವುದಿಲ್ಲ. ನ್ಯಾಯಾಂಗ ತನಿಖೆಗೆ ವಹಿಸಿದರೆ ಮಾತ್ರ ದಾಖಲೆಗಳನ್ನು ಒದಗಿಸುತ್ತೇವೆ. ಇಲ್ಲದಿದ್ದರೆ ದಾಖಲೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಕೆಲವು ಸಚಿವರು ನಮ್ಮ ಸಂಘಟನೆಯನ್ನೇ ಒಡೆಯುತ್ತಿದ್ದಾರೆ. ಲೋಕೋಪಯೋಗಿ ಸಚಿವರು ಒಡೆಯುವವರಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ದೂರಿದರು.

4 ತಿಂಗಳ ಹಿಂದೆ ಭಾರಿ ಸಂಚಲನ ಮೂಡಿಸಿದ್ದ 40 ಪರ್ಸೆಂಟ್‌ ಕಮಿಷನ್‌ ಆರೋಪ ಮತ್ತೆ ಧುತ್ತನೆ ಪ್ರತ್ಯಕ್ಷವಾಗಿದೆ. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬುಧವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಹೋರಾಟಕ್ಕೆ ಬೆಂಬಲ ಯಾಚಿಸಿದ್ದಾರೆ. ಇದೇ ವೇಳೆ, ಸರ್ಕಾರದಲ್ಲಿ ಎಲ್ಲರೂ ಭ್ರಷ್ಟರಿದ್ದಾರೆ, ಈ ಕುರಿತು ದಾಖಲೆ ಕೊಡಲೂ ಸಿದ್ಧ ಎಂದು ಗುಡುಗಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬೊಮ್ಮಾಯಿ, ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಸಡ್ಡು ಹೊಡೆದಿದ್ದಾರೆ.
 

Latest Videos
Follow Us:
Download App:
  • android
  • ios