*  ಪಂಚರತ್ನ ಟೀಕಿಸಿದ್ದಕ್ಕೆ ಟ್ವೀಟ್‌ನಲ್ಲೇ ಮಾಜಿ ಸಿಎಂ ತರಾಟೆ*  ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ*  ಸದನದಲ್ಲೇ ನೀಲಿಚಿತ್ರ ನೋಡಿದ ರತ್ನಗಳು ಕೂಡ ಇವೆ ಅಲ್ಲವೇ? 

ಬೆಂಗಳೂರು(ಮೇ.19): ‘ಹೌದು. ಜೆಡಿಎಸ್‌ನಲ್ಲಿ ಪಂಚರತ್ನಗಳಿವೆ. ಬಿಜೆಪಿಯಲ್ಲಿ ಸೀಡಿರತ್ನಗಳು, 40% ಕಮಿಷನ್‌ ರತ್ನಗಳು, ಜನರ ಹಣದ ಲೂಟಿ ರತ್ನಗಳು, ಕಾಸಿಗಾಗಿ ಕೆಲಸ ಮಾರಿಕೊಳ್ಳುವ ರತ್ನಗಳು, ಪಿಎಸ್‌ಐ ಕಿಂಗ್‌ಪಿನ್‌ ರತ್ನಗಳು, ಮಾಧ್ಯಮಗಳ ವಿರುದ್ಧ ಕೋರ್ಟ್‌ ತಡೆಯಾಜ್ಞೆ ತಂದ ರತ್ನಗಳು, ಸದನದಲ್ಲೇ ನೀಲಿಚಿತ್ರ ನೋಡಿದ ರತ್ನಗಳು ಕೂಡ ಇವೆ ಅಲ್ಲವೇ?’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ರಾಜ್ಯ ಬಿಜೆಪಿಯ ಸರಣಿ ಟ್ವೀಟ್‌ಗೆ ಸಿಡಿಮಿಡಿಗೊಂಡಿರುವ ಅವರು, ‘ಕುಟುಂಬವಾದ, ಹೋದ ಕಡೆಯೆಲ್ಲ ಸುಖವಾದದಲ್ಲಿ ತೇಲಿ ತೆವಳುವ ಬಿಜೆಪಿಯ ಸುಖ ಸಿದ್ಧಾಂತಕ್ಕೆ ರಣರೋಚಕ ಇತಿಹಾಸವೇ ಇದೆ. ‘ಜೆಡಿಎಸ್‌ ನಲ್ಲಿ 1+2+3 ಸಂಖ್ಯಾಬಲ ಇದೆ, ಸರಿ. ಆದರೆ, ಭಾರೀ ಕುಳಗಳ ಬಿಜೆಪಿಯಲ್ಲಿ 1+2 / 1+2+3 ಲೆಕ್ಕವೇ ಇಲ್ಲ. ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ತುಮಕೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಅದರ ಗರ್ಭಗುಡಿಯಲ್ಲಿ 1+2 / 1+2+3ಗಳ ಕುಟುಂಬ ಶಿಶುಗಳೇ ತುಂಬಿವೆ ಎಂದು ಹರಿಹಾಯ್ದಿದ್ದಾರೆ.

ಜೆಡಿಎಸ್‌ಗೆ ಅಧಿಕಾರ ಸಿಕ್ಕರೆ ಕರ್ನಾಟಕದ ಚಿತ್ರಣವೇ ಬದಲು: ಕುಮಾರಸ್ವಾಮಿ

‘ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ. ಬಿಜೆಪಿ ಎಂಬ ಬುರುಡೆ ಪಾರ್ಟಿ ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್‌ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ. ಈ ತಿಂಗಳ 13ನೇ ತಾರೀಖು ಮುಗಿದ ಜಲಧಾರೆ ಸಮಾರೋಪ ಸಮಾವೇಶದ ಬಗ್ಗೆ ಆರು ದಿನ ಅಧ್ಯಯನ ಮಾಡಿ ಬಿಜೆಪಿ ಟ್ವೀಟ್‌ ಮಾಡಿದೆ ಬಿಜೆಪಿ. ಇನ್ನು ಆರಂಭವಾಗದ ಪಂಚರತ್ನ ಯಾತ್ರೆ ಬಗ್ಗೆ ಆಗಲೇ ಏರಿದೆ ಬೀಪಿ. ಮಿಷನ್‌ 123 ನಮ್ಮ ಗುರಿ. ನಿಮಗೆ ಯಾಕೆ ಉರಿ’ ಎಂದು ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

‘ಜೆಡಿಎಸ್‌ ನಲ್ಲಿ 1+2+3 ಸಂಖ್ಯಾಬಲ ಇದೆ, ಸರಿ. ಆದರೆ, ಭಾರೀ ಕುಳಗಳ ಬಿಜೆಪಿಯಲ್ಲಿ 1+2 / 1+2+3 ಲೆಕ್ಕವೇ ಇಲ್ಲ. ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ತುಮಕೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಅದರ ಗರ್ಭಗುಡಿಯಲ್ಲಿ 1+2 / 1+2+3ಗಳ ಕುಟುಂಬ ಶಿಶುಗಳೇ ತುಂಬಿವೆ. ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ನಿರಾಣಿ, ಜಾರಕಿಹೊಳಿ, ಜೊಲ್ಲೆ. ಒಂದಾ ಎರಡಾ? ಪಟ್ಟಿಮಾಡುತ್ತಾ ಹೋದರೆ ಅದೇ ಹನುಮನ ಬಾಲ. ಈಗ ಬಿಜೆಪಿಗರು ಹೇಳಬೇಕು 1+2 / 1+2+3 ಇರುವುದು ಎಲ್ಲಿ? ಈ ವಿಷಯದಲ್ಲಿ ಬಿಜೆಪಿಯದ್ದು ರಾಷ್ಟೀಯ ದಾಖಲೆ’ ಎಂದು ಹರಿಹಾಯ್ದಿದ್ದಾರೆ.

ಬೆಂಗ್ಳೂರಿನ ಜಲಮೂಲ ರಕ್ಷಣೆಗೆ ಜೆಡಿಎಸ್‌ ಬದ್ಧ: ಕುಮಾರಸ್ವಾಮಿ

‘ಕುಟುಂಬವಾದ, ಹೋದ ಕಡೆಯೆಲ್ಲ ಸುಖವಾದದಲ್ಲಿ ತೇಲಿ ತೆವಳುವ ಬಿಜೆಪಿಯ ಸುಖ ಸಿದ್ಧಾಂತಕ್ಕೆ ರಣರೋಚಕ ಇತಿಹಾಸವೇ ಇದೆ. ಬ್ರಿಟಿಷರ ಬಚ್ಚಲು ಬಾಚಿದ ಅವರಿಗೆ ತಮ್ಮ ಕಪಟ ನೀತಿಗೆ ವಿರುದ್ಧವಾಗಿದ್ದ ರಾಷ್ಟ್ರೀಯವಾದ ಎಂಬ ಏಣಿ ಹತ್ತಿ ತಾನು ರಕ್ಕಸರೂಪ ತಾಳಿದ್ದು ಮರೆತಿದೆಯಾ? ಜನತಾ ಪರಿವಾರ ದೇವೇಗೌಡ ಆಂಡ್‌ ಸನ್ಸ್‌ ಎನ್ನುವವರ ಕಣ್ಣುಗಳಿಗೆ ಕಾಮಾಲೆಯಾ? ಬಿಜೆಪಿಯಲ್ಲಿರುವ, ಬ್ರದರ್ಸ್‌ ಮತ್ತು ಫ್ಯಾಮಿಲಿ ಪಾಲಿಟಿಕ್ಸ್‌ ಬಗ್ಗೆ ಕುರುಡಾ?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.