2021-22ನೇ ಶೈಕ್ಷಣಿಕ ಸಾಲಿಗೆ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸೇವಾಹಿರಿತನ, ವಯಸ್ಸು ಮತ್ತು ಯುಜಿಸಿ ನಿಗದಿತ ಅರ್ಹತೆ ಮೂರನ್ನೂ ಸಮಾನವಾಗಿ ಪರಿಗಣಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ತಿಳಿಸಿದ್ದಾರೆ.

ಬೆಂಗಳೂರು (ಫೆ.04): 2021-22ನೇ ಶೈಕ್ಷಣಿಕ ಸಾಲಿಗೆ ನಡೆಯುತ್ತಿರುವ ಅತಿಥಿ ಉಪನ್ಯಾಸಕರ (Guest Lecturers) ನೇಮಕಾತಿಯಲ್ಲಿ ಸೇವಾಹಿರಿತನ, ವಯಸ್ಸು ಮತ್ತು ಯುಜಿಸಿ ನಿಗದಿತ ಅರ್ಹತೆ ಮೂರನ್ನೂ ಸಮಾನವಾಗಿ ಪರಿಗಣಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ (P.Pradeep) ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಈವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂದಾಜು 14 ಸಾವಿರ ಮಂದಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಕಾರ್ಯಭಾರ ಮತ್ತು ವೇತನ ಎರಡನ್ನೂ ಸೂಕ್ತವಾಗಿ ನಿಗದಿಪಡಿಸಿ ಇವರ ಪೈಕಿ 10,600 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಹೀಗಾಗಿ 14 ಸಾವಿರ ಮಂದಿಯ ಪೈಕಿ ಕೇವಲ 3,400 ಮಂದಿ ಮಾತ್ರ ಆಯ್ಕೆ ಆಗುವುದಿಲ್ಲ. ಅತಿಥಿ ಉಪನ್ಯಾಸಕರ ಹುದ್ದೆಗೆ 60 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. 

ಇವರಲ್ಲಿ ಇದುವರೆಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದರವರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅತ್ಯಂತ ಕಡಿಮೆ ಅನುಭವ ಹೊಂದಿದವರಿಗೆ ಮಾತ್ರ ನೇಮಕಾತಿ ಕೈತಪ್ಪಲಿದೆ’ ಎಂದು ಅವರು ವಿವರಿಸಿದರು. ಇದುವರೆಗೂ ಅತಿಥಿ ಉಪನ್ಯಾಸಕರು ಗರಿಷ್ಠ ಅವಧಿ ಬೋಧನೆ ಮಾಡಿದರೂ ಅವರ ಮಾಸಿಕ ವೇತನ 13 ಸಾವಿರ ರು. ದಾಟುತ್ತಿರಲಿಲ್ಲ. ಆದರೆ, ಈಗ ನೇಮಕ ಆಗುತ್ತಿರುವವರಿಗೆ ಗರಿಷ್ಠ 32 ಸಾವಿರ ರು. ಗಳವರೆಗೆ ಹೆಚ್ಚಿಸಲಾಗಿದೆ.

Karnataka Guest Lecturers Protest: ದಯಾಮರಣ ಕೋರಿ ಅತಿಥಿ ಉಪನ್ಯಾಸಕರಿಂದ ಪತ್ರ

9881 ಜನರ ರಕ್ಷಣೆಗೆ ಬನ್ನಿ-ಸಿಎಂಗೆ ಎಚ್‌ಡಿಕೆ: ಅತಿಥಿ ಉಪನ್ಯಾಸಕರ ಪೈಕಿ 9,881 ಮಂದಿಯ ಉದ್ಯೋಗಕ್ಕೆ ಕುತ್ತು ಉಂಟಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಕ್ಷಣ ಕ್ರಮ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್‌ (Tweet) ಮಾಡಿರುವ ಅವರು, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಈ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರಕ್ಕೆ ಆರು ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು. 

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ ಗುಣಗಾನ ಇನ್ನೂ ನಿಂತಿಲ್ಲ. ಆದರೆ, 9,881 ಅತಿಥಿ ಉಪನ್ಯಾಸಕರು ಬೀದಿಗೆ ಬಿದ್ದಿದ್ದಾರೆ. ಒಳ್ಳೆಯದು ಮಾಡಿ ಎಂದು ಅಲವತ್ತುಕೊಂಡರೆ, ಏಕಾಏಕಿ ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ ಎಂದು ಪ್ರಶ್ನಿಸಿದ್ದಾರೆ.

ಹಿರಿತನಕ್ಕೆ ದಾಖಲೆ ಕೊಡದವರ ಅರ್ಜಿ ತಿರಸ್ಕಾರ: ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ದಾಖಲಿಸಿರುವ ಸೇವಾ ಹಿರಿತನಕ್ಕೆ ಅಗತ್ಯದಷ್ಟುಅಧಿಕೃತ ಪ್ರಮಾಣ ಪತ್ರ ನೀಡದ ಅಭ್ಯರ್ಥಿಗಳ ಅರ್ಜಿಯನ್ನು ಸರ್ಕಾರ ತಿರಸ್ಕರಿಸುತ್ತಿರುವುದಕ್ಕೆ ಅನೇಕ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಕ್ರಮ ಸರಿಯಲ್ಲ. ಕನಿಷ್ಠ ಪಕ್ಷ ಅಭ್ಯರ್ಥಿಗಳು ಎಷ್ಟುವರ್ಷದ ಅನುಭವ ಪ್ರಮಾಣ ಪತ್ರ ಸಲ್ಲಿಸುತ್ತಾರೋ ಅಷ್ಟನ್ನಾದರೂ ಪರಿಗಣಿಸಿ ಅರ್ಜಿ ಮಾನ್ಯತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Guest Lecturers: ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್

ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷ ಆನ್‌ಲೈನ್‌ನಲ್ಲಿ ಬೋಧಿಸಿದ ಅನುಭವವನ್ನೂ ದಾಖಲಿಸಲಾಗಿದೆ. ಆದರೆ, ವಿವಿಧ ಕಾಲೇಜುಗಳು ಆನ್‌ಲೈನ್‌ ಬೋಧನೆಗೆ ಅನುಭವ ಪ್ರಮಾಣ ಪತ್ರ ನೀಡುತ್ತಿಲ್ಲ. ಇನ್ನು ಕೆಲವರು ಹಿಂದೆ ಬೇರೆ ಬೇರೆ ಕಾಲೇಜುಗಳಲ್ಲಿ ಸಲ್ಲಿಸಿದ ಸೇವೆಯನ್ನು ಆಧರಿಸಿ ಅರ್ಜಿಯಲ್ಲಿ ಸೇವಾ ಹಿರಿತನ ದಾಖಲಿಸಿರುತ್ತಾರೆ. ಆದರೆ, ಇದಕ್ಕೆ ಪೂರಕ ದಾಖಲೆಗಳನ್ನು ಹೊಂದಿರುವುದಿಲ್ಲ. 

ಹಾಗಾಗಿ ಅರ್ಜಿ ಸಲ್ಲಿಸುವಾಗ ಕೆಲವೊಂದು ಲೋಪಗಳಾಗಿವೆ. ಆದರೆ, ಈ ಲೋಪಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆಯು ಅರ್ಜಿಗಳನ್ನೇ ಅಮಾನ್ಯಗೊಳಿಸುತ್ತಿರುವುದು ಸಂವಿಧಾನ ಬಾಹಿರ. ಕನಿಷ್ಠ ಪಕ್ಷ ಎಷ್ಟುವರ್ಷದ ಸೇವಾ ಪ್ರಮಾಣ ಪತ್ರ ಸಲ್ಲಿಸುತ್ತಾರೋ ಅಷ್ಟನ್ನೇ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸಲು ಇಲಾಖೆ ಕ್ರಮ ವಹಿಸಬೇಕು ಎಂದು ಅನೇಕ ಅಭ್ಯರ್ಥಿಗಳು ‘ಕನ್ನಡಪ್ರಭ’ದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.