ಕ್ಷತ್ರಿಯ ನಿಗಮ ಸ್ಥಾಪನೆ ಪರಿಶೀಲನೆ: ಸಿಎಂ ಬಸವರಾಜ ಬೊಮ್ಮಾಯಿ
ಕ್ಷತ್ರಿಯ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಕ್ಷತ್ರಿಯ ನಿಗಮ ಸ್ಥಾಪನೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡಲಾಗುವುದು. ನಗರದಲ್ಲಿ ಸಮುದಾಯಕ್ಕೆ ಸೂಕ್ತ ಭೂಮಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಬೆಂಗಳೂರು (ಜ.30) : ಕ್ಷತ್ರಿಯ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಕ್ಷತ್ರಿಯ ನಿಗಮ ಸ್ಥಾಪನೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡಲಾಗುವುದು. ನಗರದಲ್ಲಿ ಸಮುದಾಯಕ್ಕೆ ಸೂಕ್ತ ಭೂಮಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಭಾನುವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಕ್ಷತ್ರಿಯ ಒಕ್ಕೂಟ’ದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲೂ ದೇಶಕ್ಕೆ ಕ್ಷತ್ರಿಯರ ಕೊಡುಗೆ ಮಹತ್ತರವಾಗಿದೆ. ಕ್ಷತ್ರಿಯ ನಿಗಮ ಸ್ಥಾಪನೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಕ್ಷತ್ರಿಯ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು. ಸಮುದಾಯದ ಅಭಿವೃದ್ಧಿಗೆ ಪೂರಕವಾಗುವಂತೆ ರಾಜಧಾನಿಯಲ್ಲಿ ಭೂಮಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕ್ಷತ್ರಿಯ ಸಮುದಾಯ ಇಲ್ಲದಿದ್ದರೆ ಒಗ್ಗಟ್ಟು ಇರುತ್ತಿರಲಿಲ್ಲ: ಸಿಎಂ ಬೊಮ್ಮಾಯಿ
ಕ್ಷತ್ರಿಯ ಸಮಾಜದ 38 ಪಂಗಡಗಳನ್ನು ಒಂದೆಡೆ ಸೇರಿಸಿ ಬೃಹತ್ ಸಮಾವೇಶ ಆಯೋಜಿಸಿರುವ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಕಾರ್ಯ ಶ್ಲಾಘನೀಯ. ಕ್ಷತ್ರಿಯರು ವಿವಿಧ ಉಪ ಕಸುಬುಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಮುಂದಿನ ಜನಾಂಗಕ್ಕೆ ಭವ್ಯ ಭವಿಷ್ಯ ನೀಡಲು ಚಂತನೆ ನಡೆಸುತ್ತಿದ್ದಾರೆ. ಐದು ಬೆರಳುಗಳು ಸೇರಿದರೆ ಮುಷ್ಠಿಯಾಗಲಿದ್ದು ನೀವು ಒಗ್ಗಟ್ಟಾಗಿರುವುದು ಶುಭದ ಸಂಕೇತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದೂಗಳ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ:
ದೇಶದಲ್ಲಿ ಹಿಂದೂ ಸಮಾಜ ಸುರಕ್ಷಿತವಾಗಿರಲು ಕ್ಷತ್ರಿಯರು ಮೂಲ ಕಾರಣರಾಗಿದ್ದಾರೆ. ಕ್ಷತ್ರಿಯ ಸಮಾಜ ಇಲ್ಲದಿದ್ದರೆ ಭಾರತೀಯರು ಒಗ್ಗಟ್ಟಿನಿಂದ ಇರಲು ಸಾಧ್ಯವಾಗುತ್ತಿರಲಿಲ್ಲ. ಕ್ಷತ್ರಿಯರಿಗೆ ಯುದ್ಧಕ್ಕಾಗಿ ಕತ್ತಿ ಹಿಡಿಯುವುದು ಗೊತ್ತಿದೆ. ಹಾಗೆಯೇ ಜ್ಞಾನಕ್ಕಾಗಿಯೂ ಕತ್ತಿ ಹಿಡಿಯುವುದು ತಿಳಿದಿದೆ. ಶ್ರೀರಾಮ, ಶ್ರೀಕೃಷ್ಣ, ಅಶೋಕ, ರಾಣಾ ಪ್ರತಾಪ್ ಸಿಂಗ್, ಶಿವಾಜಿ ಮಹರಾಜ್ ಮತ್ತಿತರ ಧೀರರು ಆಳ್ವಿಕೆ ನಡೆಸಿದ್ದಾರೆ. ಸ್ವಾಮಿ ವಿವೇಕಾನಂದರೂ ಕ್ಷತ್ರಿಯರಾಗಿದ್ದು ಜಗತ್ತಿಗೇ ಜ್ಞಾನದ ಬೆಳಕನ್ನು ನೀಡಿದ್ದಾರೆ ಎಂದು ಬಣ್ಣಿಸಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಉಪ ಪಂಗಡಗಳು ಒಂದಾಗಿ ಬೃಹತ್ ಸಮಾವೇಶ ಆಯೋಜಿಸಿರುವುದು ಶ್ಲಾಘನೀಯ. ಸ್ವಾತಂತ್ರ್ಯಾ ನಂತರ ಭಾರತ ಗಣತಂತ್ರವಾಗಲು ರಾಜ ಮಹಾರಾಜರ ಕೊಡುಗೆ ಬಹಳಷ್ಟಿದೆ. ಧರ್ಮ ರಕ್ಷಣೆಗೆ ಕ್ಷತ್ರಿಯರು ಸಾಕಷ್ಟುಕೊಡುಗೆ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಒತ್ತಾಸೆಯಿಂದಾಗಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಮಾತನಾಡಿ, ದೇಶ, ಧರ್ಮಕ್ಕಾಗಿ ಕ್ಷತ್ರಿಯರು ಬಹಳಷ್ಟುತ್ಯಾಗ, ಬಲಿದಾನ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲಕ್ಕೆ ಮಾತ್ರ ಮನ್ನಣೆ ಸಿಗುವುದರಿಂದ 38 ಉಪ ಪಂಗಡಗಳನ್ನು ಒಂದುಗೂಡಿಸಿ ಸಮಾವೇಶ ಆಯೋಜಿಸಲಾಗಿದೆ. ಸಮುದಾಯವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು ಸರ್ಕಾರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಮಂಟೇಸ್ವಾಮಿ ಮಠದ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್, ಪಂಡರಾಪುರದ ಏಕನಾಥ ತುಲಸಿದಾಸ ಮಹಾರಾಜ ನಾಮದಾಸ್, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಬಂಡೆಪ್ಪ ಕಾಶಂಪೂರ್, ಕೃಷ್ಣ ಪಾಲೇಮಾರ್, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ.ಮೂಳೆ ಮತ್ತಿತರರು ಹಾಜರಿದ್ದರು.
ಕ್ಷತ್ರಿಯರೆಲ್ಲರೂ ಒಗ್ಗೂಡಿದರೆ ಶಕ್ತಿವೃದ್ಧಿ: ಬಾವಾಜಿ
ನಮ್ಮ ಧರ್ಮ, ಭಾಷೆ ಹಾಗೂ ಭೂಪ್ರದೇಶದ ರಕ್ಷಣೆಗೆ ಕೊಡುಗೆ ನೀಡಿರುವ ಕ್ಷತ್ರಿಯರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದೆ. ಕ್ಷತ್ರಿಯರ ನಡೆ, ರಾಜಧಾನಿಯ ಕಡೆ ಎಂಬ ಘೋಷವಾಕ್ಯದೊಂದಿಗೆ ಈ ಸಮಾವೇಶ ನಡೆಯುತ್ತಿದೆ. ಇದನ್ನೂ ಮೀರಿ ವಿಧಾನಸೌಧದ ಒಳಗೆ ಮುಂದುವರಿಯಬೇಕು.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ