ಸಂತೋಷ್ ಆತ್ಮಹತ್ಯೆ ಕೇಸ್: ಈಶ್ವರಪ್ಪರ ತನಿಖೆ ನಡೆಸದೇ ಕ್ಲೀನ್‌ಚಿಟ್, ರಮಾನಾಥ ರೈ
ಈಶ್ವರಪ್ಪ ಅವರನ್ನು ಒಮ್ಮೆಯೂ ತನಿಖೆಗೆ ಒಳಪಡಿಸದೇ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ. ಇದರ ಹಿಂದೆ ರಾಜಕೀಯ ಒತ್ತಡ ಕೆಲಸ ಮಾಡಿದೆ: ರೈ
ಮಂಗಳೂರು(ಜು.24): ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರನ್ನು ತನಿಖೆಗೆ ಒಳಪಡಿಸದೇ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ. ಆದ್ದರಿಂದ ಈ ಪ್ರಕರಣ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಶೇ.40 ಕಮಿಷನ್ ಬಗ್ಗೆ ಆರೋಪ ಮಾಡಿದ್ದರು. ಆತ ಆತ್ಮಹತ್ಯೆಗೆ ಮಾಡಿಕೊಂಡ ಬಳಿಕ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಕೇವಲ ಪೊಲೀಸರ ತನಿಖೆಯಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಸಂತೋಷ್‌ನ ಪತ್ನಿ ಹೇಳಿದ್ದರು. ಈಗ ಈಶ್ವರಪ್ಪ ಅವರನ್ನು ಒಮ್ಮೆಯೂ ತನಿಖೆಗೆ ಒಳಪಡಿಸದೇ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ. ಇದರ ಹಿಂದೆ ರಾಜಕೀಯ ಒತ್ತಡ ಕೆಲಸ ಮಾಡಿದ್ದು, ಇದರಿಂದ ಮೃತನ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಹುಸಿಯಾಗಿದೆ. ಹಾಗಾಗಿ ಈಶ್ವರಪ್ಪ ಪ್ರಕರಣ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಆಗ್ರಹಿಸಿದ್ದಾರೆ ಎಂದರು.
40% ಕಮಿಷನ್ : ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲೀನ್‌ಚಿಟ್, ಮುಂದೇನು?
ಮುಖಂಡರಾದ ಶಶಿಧರ ಹೆಗ್ಡೆ, ಸುರೇದ್ರ ಕಂಬಳಿ, ಪ್ರಕಾಶ್ ಸಾಲಿಯಾನ್, ಅಬ್ದುಲ್ ರವೂಫ್, ಅಪ್ಪಿ, ಸಾಹುಲ್ ಹಮೀದ್, ನೀರಜ್‌ಚಂದ್ರ ಪಾಲ್, ಟಿ.ಕೆ.ಸುಧೀರ್, ನಝೀರ್ ಬಜಾಲ್ ಇದ್ದರು.
ಸುಳ್ಯದಲ್ಲಿ ಅಮಾಯಕನ ಕೊಲೆ
ದ.ಕ.ದಲ್ಲಿ ಬಿಜೆಪಿ ಕೊಲೆಗಡುಕರ ಪಕ್ಷ ಎನಿಸಿದೆ. ಇತ್ತೀಚೆಗೆ ಸುಳ್ಯದ ಕಳಂಜದಲ್ಲಿ ಮಸೂದ್ ಎಂಬ ಅಮಾಯಕನ ಕೊಲೆ ನಡೆದದೆ. ಇಂತಹ ಅನೇಕ ಹತ್ಯೆಗಳು ಜಿಲ್ಲೆಯಲ್ಲಿ ನಡೆದಿದೆ. ಆದರೆ ಈವರೆಗೆ ಕಾಂಗ್ರೆಸ್‌ನ ಒಬ್ಬನೇ ಒಬ್ಬ ಕಾರ್ಯಕರ್ತನ ವಿರುದ್ಧ ಇಂತಹ ಕೊಲೆ ಕೇಸ್‌ಗಳಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಜಿಲ್ಲೆಯಲ್ಲಿ ಎರಡು ಮತೀಯ ಸಂಘಟನೆಗಳ ಮೇಲೆ ಶಾಂತಿ ಕದಡುವ ಆರೋಪ ಇದೆ. ಮೃತ ಮಸೂದ್ ಮನೆಗೆ ಸುಳ್ಯದವರೇ ಆದ ಸಚಿವ ಅಂಗಾರ ಅಥವಾ ಸಂಸದರು ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಕಾಂಗ್ರೆಸ್ ಎಂದಿಗೂ ಹಿಂಸೆಗೆ ಪ್ರಚೋದನೆ ಮಾಡುವುದಿಲ್ಲ. ಇವರ ಕುಟುಂಬಕ್ಕೂ 25 ಲಕ್ಷ ರು. ಪರಿಹಾರ ನೀಡಲಿ ಎಂದು ರಮಾನಾಥ ರೈ ಹೇಳಿದರು.