Asianet Suvarna News Asianet Suvarna News

ಕಾವೇರಿಗಾಗಿ ಹೋರಾಟ ಬರೀ ನಾಟಕ: ಮೊದಲು ಕೊಡಗಿನ ಪರಿಸರ ಉಳಿಸಿ ಎಂದ ಮುತ್ತಣ್ಣ

ರಾಜ್ಯದಲ್ಲಿ ಬರಗಾಲ ಎದುರಾಗಿದ್ದು ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗುವ ಸಾಧ್ಯತೆ ಇದೆ. ಅತ್ತ ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಿತ್ಯ ಸಾವಿರಾರು ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. 

Environmentalist Muttanna Reaction On Cauvery Water Issue At Kodagu gvd
Author
First Published Sep 27, 2023, 9:43 PM IST

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.27): ರಾಜ್ಯದಲ್ಲಿ ಬರಗಾಲ ಎದುರಾಗಿದ್ದು ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗುವ ಸಾಧ್ಯತೆ ಇದೆ. ಅತ್ತ ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಿತ್ಯ ಸಾವಿರಾರು ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಹೀಗಾಗಿ ಮಂಡ್ಯ, ಬೆಂಗಳೂರು ಸೇರಿದಂತೆ ಹಲವೆಡೆ ತೀವ್ರ ಹೋರಾಟ ನಡೆಯುತ್ತಿವೆ. ಆದರೆ ಈ ಹೋರಾಟಗಳೆಲ್ಲಾ ಬರೀ ನಾಟಕ ಅಷ್ಟೇ ಎಂದು ಪರಿಸರವಾದಿ ಕೊಡಗಿನ ಮುತ್ತಣ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ. ಹೌದು ಇಂದು ರಾಜ್ಯದಲ್ಲಿ ಬರಗಾಲ ಎದುರಾಗಿದೆ, ಅದು ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲೂ ಮಳೆಯ ತೀವ್ರ ಕೊರತೆಯಾಗಿದೆ. ಇದಕ್ಕೆ ಕಾರಣ ಕೊಡಗು ಜಿಲ್ಲೆಯ ಪರಿಸರ ಹಾಳಾಗುತ್ತಿದೆ ಎನ್ನುವುದು. 

ಕೆಆರ್ಎಸ್ ಗೆ ಶೇ 33 ರಷ್ಟು ಕೊಡಗು ಜಿಲ್ಲೆಯಿಂದಲೇ  ನೀರು ಹರಿದು ಹೋಗುತ್ತದೆ. ಆದರೆ ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಬೆಟ್ಟಗುಡ್ಡಗಳನ್ನು ಕೊರೆದು ರೆಸಾರ್ಟ್ ಮಾಡಲಾಗುತ್ತಿದೆ. ಭೂಪರಿವರ್ತನೆ ಮಾಡಿ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲೂ ಕೊಡಗಿನಲ್ಲಿ ದೊಡ್ಡ ದೊಡ್ಡ ಉದ್ಯಮ ನಡೆಸುತ್ತಿರುವವರೇ ಕೊಡಗಿನ ಬೆಟ್ಟ ಗುಡ್ಡಗಳನ್ನು ಕೊರೆದು ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ಅದಕ್ಕಾಗಿ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದ್ದು, ಪರಿಸರ ನಾಶವಾಗುತ್ತಿದೆ. ಇದರಿಂದಾಗಿ ವರ್ಷದ ಆರು ತಿಂಗಳು ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಈಗ ಎರಡು ತಿಂಗಳ ಕಾಲವೂ ಮಳೆ ಸುರಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಲವ್ ಜಿಹಾದ್‌ಗೆ ಹೆಣ್ಣು ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಿ: ಪೇಜಾವರ ಶ್ರೀ

ಕೊಡಗಿನಲ್ಲಿ ಬೆಟ್ಟಗುಡ್ಡಗಳು, ಜಮ್ಮಾಭೂಹಿಡುವಳಿ ಮತ್ತು ಕಾಫಿ ತೋಟಗಳನ್ನು ಭೂಪರಿವರ್ತನೆ ಮಾಡಬಾರದು ಎಂದು ರಾಜ್ಯ ಉಚ್ಛನ್ಯಾಯಾಲಯವೇ ಸ್ಪಷ್ಟವಾಗಿ ಆದೇಶ ಮಾಡಿದೆ. ಜಿಲ್ಲಾಧಿಕಾರಿ ಭೂಪರಿವರ್ತನೆಗೆ ಅವಕಾಶ ನೀಡಿದರೆ ಅದು ಮಾನ್ಯವಲ್ಲ. ಅವರು ಭೂಪರಿವರ್ತನೆಗೂ ಅವಕಾಶ ನೀಡಬಾರದು ಎಂದು ಸ್ಪಷ್ಟವಾಗಿ ಆದೇಶಿಸಿದೆ. ಇಷ್ಟೆಲ್ಲಾ ಆದರೂ ಕೊಡಗಿನಲ್ಲಿ ಭೂ ಪರಿವರ್ತನೆ ಮಾಡುತ್ತಿರುವುದೇ ಇಂದು ಕೊಡಗಿಗೂ ಬರಗಾಲದ ಪರಿಸ್ಥಿತಿ ಬಂದಿರುವುದಕ್ಕೆ ಕಾರಣ ಎಂದು ಮುತ್ತಣ್ಣ ಹೇಳಿದ್ದಾರೆ. ನಾವು ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದರೆ, ವಿವಿಧ ಜಿಲ್ಲೆಗಳ ಜನರು ಕಾವೇರಿ ನಮ್ಮದು ಎನ್ನುತ್ತಾರೆ. 

ಅತ್ತ ತಮಿಳುನಾಡು ನೀರು ಬೇಕೆಂದು ಕಾನೂನು ಹೋರಾಟವನ್ನೇ ಮಾಡುತ್ತದೆ. ಹಾಲಿಗಾಗಿ ಎಲ್ಲರೂ ಜಗಳವಾಡುತ್ತಾರೆ, ಇಲ್ಲಿ ಹಸುವೇ ಸಾಯುತ್ತಿರುವುದನ್ನು ಯಾರೂ ನೋಡುತ್ತಿಲ್ಲ ಎಂದು ಪರಿಸರವಾದಿ ಮುತ್ತಣ್ಣ ಕೊಡಗಿನ ಪರಿಸರ ಹಾಳಾಗಿ ಕಾವೇರಿ ಬತ್ತಿಹೋಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾವೇರಿ ಉಳಿವಿಗಾಗಿ, ಕೊಡಗಿನ ಉಳಿವಿಗಾಗಿ ಯಾರೂ ಗಮನ ಕೊಡುವುದಿಲ್ಲ ಎಂದಿದ್ದಾರೆ. 2018 ರಲ್ಲಿ ಕೊಡಗಿನಲ್ಲಿ ಭಾರೀ ಪ್ರಮಾಣದ ಭೂಕುಸಿತ, ಪ್ರವಾಹ ಎದುರಾದ ಬಳಿಕ ಜಿಲ್ಲೆಗೆ ಬಂದಿದ್ದ ಐಐಎಸ್ಸಿ ವಿಜ್ನಾನಿ ರಾಮಚಂದ್ರನ್ ಅವರು ಕೊಡಗಿನಲ್ಲಿ ಇದೇ ರೀತಿ ಭೂಪರಿವರ್ತನೆ, ಆದಲ್ಲಿ ಕೆಲವೇ ವರ್ಷಗಳಲ್ಲಿ ಕಾವೇರಿ ನದಿಯೇ ಉಳಿಯವುದಿಲ್ಲ ಎಂದು ವೈಜ್ನಾನಿಕ ಅಧ್ಯಯನದ ವರದಿ ನೀಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಲಿ: ಸಚಿವ ಭೋಸರಾಜ್

ಹೀಗಾಗಿಯೇ ತಮಿಳುನಾಡಿಗೆ ನೀರು ಬಿಡುತ್ತಿರುವುದಕ್ಕೆ ಬೆಂಗಳೂರು ಬಂದ್, ಕರ್ನಾಟಕ ಬಂದ್ ಎಂದು ಮಾಡುತ್ತಿರುವರಿಗೆ ಮುತ್ತಣ್ಣ ಮಾತಿನಲ್ಲೇ ತಿವಿದಿದ್ದಾರೆ. ಒಟ್ಟಿನಲ್ಲಿ ಬರಗಾಲ ಎದುರಾಗಿರುವುದರಿಂದ ಕಾವೇರಿ ಕೊಳ್ಳದಲ್ಲಿ ನೀರಿನ ಕೊರತೆ ಎದುರಾಗಿದ್ದು ಇದಕ್ಕೆ ಕೊಡಗಿನ ಪರಿಸರ ಹಾಳಾಗುತ್ತಿರುವುದೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇನ್ನಾದರೂ ಕೊಡಗಿನ ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕಾಗಿದೆ ಎನ್ನುವುದು ಪರಿಸರವಾದಿಗಳ ಆಗ್ರಹ.

Follow Us:
Download App:
  • android
  • ios