ಆನ್‌ಲೈನ್ ಗೇಮಿಂಗ್ ಆ್ಯಪ್ 'ರಮ್ಮಿ ಕಲ್ಚರ್' ಮೂಲಕ ನಡೆದಿದೆ ಎನ್ನಲಾದ ವಂಚನೆ ಕೇಸಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೆಂಗಳೂರು ಮತ್ತು ದೆಹಲಿಯ 16 ಕಡೆಗಳಲ್ಲಿ ದಾಳಿ ನಡೆಸಿದೆ. ದೆಹಲಿಯಲ್ಲಿ ದಾಖಲಾದ ಎಫ್‌ಐಆರ್‌ ಆಧರಿಸಿ, ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಈ ತನಿಖೆ ಕೈಗೊಳ್ಳಲಾಗಿದೆ.

ಬೆಂಗಳೂರು (ಮೇ 07): ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೂಲಕ ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ಜನ ಸಾಮಾನ್ಯರಿಗೆ ವಂಚಿಸುತ್ತಿದ್ದ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ED) ಸಮರ ಸಾರಿದೆ. ಜನಪ್ರಿಯ ಆನ್‌ಲೈನ್ ಗೇಮಿಂಗ್ ಆ್ಯಪ್ ಆದ 'ರಮ್ಮಿ ಕಲ್ಚರ್' (Rummy Culture) ಮೂಲಕ ನಡೆದಿದೆ ಎನ್ನಲಾದ ಬೃಹತ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ದೆಹಲಿಯ ಹಲವು ಕಡೆಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

16 ಕಡೆಗಳಲ್ಲಿ ತಪಾಸಣೆ:

ಸೋಮವಾರ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿರುವ ಇಡಿ ಅಧಿಕಾರಿಗಳು, ಬೆಂಗಳೂರಿನ 12 ಕಡೆ ಹಾಗೂ ದೆಹಲಿಯ 4 ಕಡೆ ಸೇರಿದಂತೆ ಒಟ್ಟು 16 ಸ್ಥಳಗಳಲ್ಲಿ ಜಾಲಿಯಾಡುತ್ತಿದ್ದಾರೆ. ರಮ್ಮಿ ಕಲ್ಚರ್ ಆ್ಯಪ್‌ನ ವ್ಯವಹಾರಗಳಿಗೆ ಸಂಬಂಧಿಸಿದ ಕಚೇರಿಗಳು ಹಾಗೂ ಈ ಆ್ಯಪ್‌ನ ಪ್ರಮುಖ ನಿರ್ವಾಹಕರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ದೆಹಲಿ ಎಫ್‌ಐಆರ್ ಆಧರಿಸಿ ಕ್ರಮ:

ಮೂಲಗಳ ಪ್ರಕಾರ, ರಮ್ಮಿ ಕಲ್ಚರ್ ಆ್ಯಪ್ ಮೂಲಕ ಹಣ ಕಳೆದುಕೊಂಡ ಸಂತ್ರಸ್ತರು ದೆಹಲಿಯಲ್ಲಿ ನೀಡಿದ ದೂರುಗಳ ಅನ್ವಯ ಅಲ್ಲಿನ ಪೊಲೀಸರು ನಾಲ್ಕು ಪ್ರತ್ಯೇಕ ಎಫ್‌ಐಆರ್ (FIR) ದಾಖಲಿಸಿದ್ದರು. ಈ ಎಫ್‌ಐಆರ್‌ಗಳಲ್ಲಿನ ಗಂಭೀರ ಆರೋಪಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಪ್ರಕರಣ ದಾಖಲಿಸಿಕೊಂಡು ಈ ಬೃಹತ್ ಕಾರ್ಯಾಚರಣೆ ಕೈಗೊಂಡಿದೆ.

ಹೇಗೆ ನಡೆಯುತ್ತಿತ್ತು ವಂಚನೆ?

ರಮ್ಮಿ ಕಲ್ಚರ್ ಆ್ಯಪ್ ಮೂಲಕ ಆರಂಭದಲ್ಲಿ ಬಳಕೆದಾರರಿಗೆ ಲಾಭದ ಆಸೆ ತೋರಿಸಲಾಗುತ್ತಿತ್ತು. ಒಮ್ಮೆ ಬಳಕೆದಾರರು ದೊಡ್ಡ ಮೊತ್ತದ ಹಣವನ್ನು ಆಟಕ್ಕೆ ತೊಡಗಿಸಿದ ನಂತರ, ತಾಂತ್ರಿಕ ಕೈಚಳಕದ ಮೂಲಕ ಅಥವಾ ವಂಚನೆಯ ಮಾರ್ಗಗಳನ್ನು ಬಳಸಿ ಹಣವನ್ನು ಗುಳುಂ ಮಾಡಲಾಗುತ್ತಿತ್ತು ಎಂಬ ದೂರುಗಳಿವೆ. ಈ ಹಣವನ್ನು ವಿದೇಶಗಳಿಗೆ ಅಥವಾ ಬೇರೆ ಬೇರೆ ಬೇನಾಮಿ ಖಾತೆಗಳಿಗೆ ವರ್ಗಾಯಿಸಲಾಗಿದೆಯೇ ಎಂಬ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ತೀವ್ರಗೊಂಡ ತಪಾಸಣೆ:

ಈ ವಂಚನೆ ಜಾಲದ ಕಚೇರಿಗಳು ಮತ್ತು ಪ್ರಮುಖ ವ್ಯವಹಾರಗಳು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಸಿಲಿಕಾನ್ ಸಿಟಿಯ 12ಕ್ಕೂ ಹೆಚ್ಚು ಕಡೆಗಳಲ್ಲಿ ಇಡಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಡಿಜಿಟಲ್ ಪುರಾವೆಗಳು, ಬ್ಯಾಂಕ್ ಖಾತೆಗಳ ಮಾಹಿತಿ ಹಾಗೂ ಹೂಡಿಕೆಯ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.