ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಎಚ್‌.ಕಾಂತರಾಜು ಅವರು ಸಿದ್ಧಪಡಿಸಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವರದಿ ಜಾರಿಯಿಂದ ಅಸಮಾನತೆ ನಿವಾರಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟರು.

ಬೆಂಗಳೂರು (ಜು.24) :  ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಎಚ್‌.ಕಾಂತರಾಜು ಅವರು ಸಿದ್ಧಪಡಿಸಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವರದಿ ಜಾರಿಯಿಂದ ಅಸಮಾನತೆ ನಿವಾರಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟರು.

ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ದೇವಾಂಗ ಸಂಘ ಮತ್ತು ನೌಕರರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂತರಾಜು ನೇತೃತ್ವದ ಆಯೋಗವು ರಾಜ್ಯದಲ್ಲಿ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ್ದ ವರದಿಯನ್ನು ಅನುಷ್ಠಾನಗೊಳಿಸಿದರೆ ಸಮಾಜದಲ್ಲಿ ನಿರ್ಮಾಣವಾಗಿರುವ ಅಸಮಾನತೆ ತೊಡೆದು ಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

2,28,286 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ: ಸಚಿವ ಶಿವರಾಜ ತಂಗಡಗಿ

ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವರದಿ ಸಿದ್ಧವಾಗಿತ್ತು. ಆದರೆ ರಾಜಕೀಯ ಕಾರಣಗಳಿಂದ ವರದಿ ಸ್ವೀಕಾರವಾಗಲಿಲ್ಲ. ಬಳಿಕ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಂತರಾಜು ವರದಿ ಸ್ವೀಕಾರ ಮಾಡಲಿಲ್ಲ. ವರದಿ ಅನುಷ್ಠಾನದಿಂದ ಜಾತಿಗಳ ಸ್ಥಿತಿಗತಿ ಆಧರಿಸಿ ಶಿಕ್ಷಣ, ಉದ್ಯೋಗ ಸೇರಿ ನಾನಾ ವಲಯಗಳಲ್ಲಿ ಅವಕಾಶ ಮತ್ತು ಸೌಲಭ್ಯ ಸಿಗಲಿವೆ ಎಂದು ವಿವರಿಸಿದರು.

ದೇವಾಂಗ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಿಂದೆ ಉಮಾಶ್ರೀ ಅವರನ್ನು ಸಚಿವರನ್ನಾಗಿ ಸಿದ್ದರಾಮಯ್ಯ ಮಾಡಿದ್ದರು. ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಅವರು ಮಾತ್ರ. ಮುಂದೆಯೂ ಈ ಸಮಾಜಕ್ಕೆ ರಾಜಕೀಯ ಅವಕಾಶ ಕಲ್ಪಿಸಲಿದ್ದಾರೆ ಎಂದು ಭರವಸೆ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಚಿಪ್ಪು ಗ್ಯಾರಂಟಿ, ಸಚಿವ ಶಿವರಾಜ್ ತಂಗಡಗಿ

ಕಾರ್ಯಕ್ರಮದ ಸಾನಿಧ್ಯವನ್ನು ಹಂಪಿ ಹೇಮಕೂಟದ ಗಾಯತ್ರಿ ಪೀಠ ಮಹಾ ಸಂಸ್ಥಾನದ ದಯಾನಂದಪುರಿ ಸ್ವಾಮೀಜಿ ವಹಿಸಿದ್ದರು. ಸಂಸದ ತೇಜಸ್ವಿ ಸೂರ್ಯ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೇನಾರಾಯಣ, ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶ್ರೀನಿವಾಸ್‌ ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.