ದುಬಾರೆ ಸಾಕಾನೆ ಶಿಬಿರದಿಂದ ನಾಡಹಬ್ಬ ದಸರಾಕ್ಕೆ ಹೊರಟ ಕೊಡಗಿನ ಗಜಪಡೆ
ನಾಡಹಬ್ಬ ದಸರಾ ಎಂದ ಕೂಡಲೇ ಎಲ್ಲರ ಮನ ಮನೆಗಳು ಸಂಭ್ರಮಗೊಳ್ಳುತ್ತವೆ. ಈ ನಾಡದೇವಿಯ ಅದ್ದೂರಿ ಅಂಬಾರಿ ಮೆರವಣಿಗೆಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಗುರುವಾರ ಗಜಪಡೆ ಪಯಣ ಬೆಳಸಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.31): ನಾಡಹಬ್ಬ ದಸರಾ ಎಂದ ಕೂಡಲೇ ಎಲ್ಲರ ಮನ ಮನೆಗಳು ಸಂಭ್ರಮಗೊಳ್ಳುತ್ತವೆ. ಈ ನಾಡದೇವಿಯ ಅದ್ದೂರಿ ಅಂಬಾರಿ ಮೆರವಣಿಗೆಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಗುರುವಾರ ಗಜಪಡೆ ಪಯಣ ಬೆಳಸಿದೆ. ವೀರನಹೊಸಹಳ್ಳಿಗೆ ಪ್ರಯಾಣಿಸಬೇಕಾಗಿದ್ದ ನಾಲ್ಕು ಆನೆಗಳಿಗೆ ಗುರುವಾರ ಬೆಳಿಗ್ಗೆಯೇ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ಹೂವುಗಳಿಂದ ಸಿಂಗರಿಸಲಾಗಿತ್ತು. ನಂತರ ದುಬಾರೆಯ ಸಾಕಾನೆ ಶಿಬಿರದಲ್ಲಿ ಇರುವ ಗಣೇಶ ಮೂರ್ತಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಹಣ್ಣು ಕಾಯಿ ಇಟ್ಟು ಗಣೇಶನಿಗೆ ಪೂಜೆ ಸಲ್ಲಿಸಿದರು.
ದುಬಾರೆ ಸಾಕಾನೆ ಶಿಬಿರದಿಂದ ಹೊರಟಿದ್ದ ಗೋಪಿ, ಧನಂಜಯ ಮತ್ತು ಕಂಜನ್ ಆನೆಗಳಿಗೂ ಪೂಜೆ ಸಲ್ಲಿಸಲಾಯಿತು. ಮಾವುತರ ಮುಖಂಡ ದೊರೆ ಸೇರಿದಂತೆ ಇನ್ನಿತರರು ಆನೆಗಳಿಗೂ ಕುಂಕುಮ ಅಕ್ಷತೆ ಇಟ್ಟು ಹೂವು ಮುಡಿಸಿ ಬಳಿಕ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಕೆಯಾಗುತ್ತಿದ್ದಂತೆ ಮೂರು ಆನೆಗಳು ಒಂದೇ ವೇಳೆಗೆ ಸೊಂಡಿಲನ್ನು ಮೇಲೆತ್ತಿ ವಿಘ್ನ ವಿನಾಯಕನಿಗೆ ನಮಸ್ಕರಿಸುವ ರೀತಿಯಲ್ಲಿ ನಿಂತವು. ಹೀಗೆ ಪೂಜೆ ವೇಳೆ ಮೂರು ಆನೆಗಳು ಸೊಂಡಿಲನ್ನು ಮೇಲೆತ್ತುತ್ತಿದ್ದಂತೆ ಅಲ್ಲಿ ನೆರೆದಿದ್ದ ಮಾವುತರು ಕವಾಡಿಗರು, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ನೂರಾರು ಪ್ರವಾಸಿಗರು ಕೈಮುಗಿದು ನಮಸ್ಕರಿಸಿ ಕೃತಾರ್ಥರಾದೆವು ಎನ್ನುವಂತೆ ವಂದಿಸಿದರು.
ರಾಜೀವ್‌ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ
ನಂತರ ಆನೆಗೆ ಬಾಳೆಹಣ್ಣು, ಬೆಲ್ಲ ತೆಂಗಿನ ಕಾಯಿ ಸೇರಿದಂತೆ ವಿವಿಧ ತಿನಿಸುಗಳ ಕೊಟ್ಟರು. ಬಳಿಕ ಮೂರು ಆನೆಗಳು ಗಣೇಶ ಮೂರ್ತಿಯನ್ನು ಮೂರು ಸುತ್ತು ಸುತ್ತಿ ಮೈಸೂರಿನತ್ತ ತಮ್ಮ ಪ್ರಯಾಣ ಆರಂಭಿಸಿದವು. ಸಾಂಪ್ರಾಯಿಕವಾಗಿ ಪೂಜೆ ಸಲ್ಲಿಸಿ ಆನೆಗಳನ್ನು ಬೀಳ್ಕೊಡುತ್ತಿದ್ದ ವೇಳೆ ಜನರಲ್ಲಿ ಭಕ್ತಿ ಭಾವ ಕಾಣಿಸುತಿತ್ತು. ಈ ಸಂದರ್ಭ ಮಾತನಾಡಿದ ಕುಶಾಲನಗರ ಆರ್ಎಫ್ಓ ಶಿವರಾಂ ಅವರು ಮೈಸೂರು ದಸರಾಕ್ಕೆ ಮೊದಲ ಸುತ್ತಿನಲ್ಲಿ ನಾಲ್ಕು ಆನೆಗಳನ್ನು ಕಳುಹಿಸಿ ಕೊಡಲಾಗುತ್ತಿದೆ. ಧಯಂಜಯ, ಗೋಪಿ, ವಿಜಯ, ಮತ್ತು ಕಂಜನ್ ನಾಲ್ಕು ಆನೆಗಳನ್ನು ಕಳುಹಿಸಲಾಗುತ್ತಿದೆ. ಇವುಗಳನ್ನು ವೀರನಹೊಸಹಳ್ಳಿಯಲ್ಲಿ ಸ್ವಾಗತಿಸಲಿದ್ದಾರೆ.
ಎರಡನೆ ಹಂತದಲ್ಲಿ ಮತ್ತೆ ನಾಲ್ಕು ಆನೆಗಳನ್ನು ಕಳುಹಿಸಲಾಗುತ್ತಿದೆ. ಅವುಗಳಲ್ಲಿಯೂ ಈಗಾಗಲೇ ಎರಡು ಆನೆಗಳನ್ನು ಆಯ್ಕೆ ಮಾಡಲಾಗಿದೆ. ಇನ್ನು ಎರಡು ಆನೆಗಳನ್ನು ಆಯ್ಕೆ ಮಾಡಿ ನಾಲ್ಕು ಆನೆಗಳನ್ನು ಕಳುಹಿಸಿಕೊಡಲಾಗುವುದು. ಒಟ್ಟಿನಲ್ಲಿ ದುಬಾರೆ ಸಾಕಾನೆ ಶಿಬಿರದಿಂದ ಎಂಟು ಆನೆಗಳನ್ನು ಕಳುಹಿಸಿ ಕೊಡಲಾಗುತ್ತದೆ ಎಂದಿದ್ದಾರೆ. ಎಲ್ಲಾ ಆನೆಗಳನ್ನು ಪ್ರತ್ಯೇಕವಾಗಿ ಲಾರಿಗಳ ಮೂಲಕ ವೀರನಹೊಸಹಳ್ಳಿಗೆ ಕಳುಹಿಸಿ ಕೊಡಲಾಗಿದೆ. ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಅವುಗಳ ಬಗ್ಗೆ ವರದಿಯನ್ನು ಕೊಡಲಾಗಿದೆ ಎಂದಿದ್ದಾರೆ. ಇನ್ನು ದಸರಾಕ್ಕೆ ಆನೆಗಳನ್ನು ಕರೆದೊಯ್ಯುತ್ತಿರುವ ಮಾವುತ ಭಾಸ್ಕರ್ ನಾಡದೇವಿಯ ಸೇವೆ ಮಾಡುವುದೆಂದರೆ ನಮ್ಮ ಪುಣ್ಯ. ಹೀಗಾಗಿ ದಸರಾಕ್ಕೆ ತೆರಳುತ್ತಿರುವುದು ತೀವ್ರ ಸಂತೋಷ ತರುತ್ತಿದೆ.
ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಸ್ಥಳಾಂತರ: ಸೆ.8ಕ್ಕೆ ರಾಮನಗರ ಬಂದ್
ನಾಳೆಯಿಂದ ಮೈಸೂರಿನಲ್ಲಿ ಆನೆಗಳಿಗೆ ತಾಲೀಮು ನಡೆಯಲಿದೆ. ಲಕ್ಷಾಂತರ ಜನರು ಬರುವುದರಿಂದ ಅವರ ನಡುವೆಯೂ ಯಾವುದೇ ಗೊಂದಲಕ್ಕೆ ಒಳಗಾಗದೆ ಆನೆಗಳು ಅಂಬಾರಿ ಹೊತ್ತು ಸಾಗುವುದಕ್ಕೆ ತಾಲೀಮು ನಡೆಯಲಿದೆ. ಮಾವುತರು ಮತ್ತು ಕವಾಡಿಗರು ತೆರಳುತ್ತಿದ್ದು ನಾವು ಅರಮನೆ ತಲುಪಿದ ಬಳಿಕ ನಮ್ಮ ಹೆಂಡತಿ ಮಕ್ಕಳು, ಮರಿ ಎಲ್ಲರೂ ಅಲ್ಲಿಗೆ ಬರಲಿದ್ದಾರೆ. ಬಳಿಕ ಎರಡು ತಿಂಗಳು ಅಲ್ಲಿಯೇ ಇರಲಿದ್ದೇವೆ. ದಸರಾಕ್ಕೆ ಹೋಗುತ್ತಿರುವುದು ಅತ್ಯಂತ ಸಂಭ್ರಮ ಸಡಗರ ತಂದಿದೆ ಎಂದಿದ್ದಾರೆ.