ಮೈಸೂರು ದಸರಾದಲ್ಲಿ 7 ಬಾರಿ ಅಂಬಾರಿ ಹೊತ್ತ ಅರ್ಜುನ ಆನೆ ವೀರಮರಣ: ಮಾವುತನ ಪ್ರಾಣಕ್ಕಾಗಿ ತನ್ನ ಜೀವ ಬಲಿದಾನ
ಮೈಸೂರು ದಸರಾ ಅಂಬಾರಿಯನ್ನು 7 ಬಾರಿ ಹೊತ್ತಿದ್ದ ಹಾಗೂ ಕಾಡಾನೆಗಳ ಸೆರೆಯ ಕ್ಯಾಪ್ಟನ್ ಆಗಿದ್ದ ಅರ್ಜುನ ಆನೆ ಅರಣ್ಯ ಸಿಬ್ಬಂದಿ ಹಾಗೂ ಮಾವುತನ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದೆ.
ಹಾಸನ (ಡಿ.04): ಮೈಸೂರು ದಸರಾ ಅಂಬಾರಿಯನ್ನು 7 ಬಾರಿ ಹೊತ್ತಿದ್ದ ಹಾಗೂ ಕಾಡಾನೆಗಳ ಸೆರೆಯ ಕ್ಯಾಪ್ಟನ್ ಆಗಿದ್ದ ಅರ್ಜುನ ಆನೆ ಅರಣ್ಯ ಸಿಬ್ಬಂದಿ ಹಾಗೂ ಮಾವುತನ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದೆ.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 7 ಬಾರಿ ಅಂಬಾರಿಯನ್ನು ಹೊತ್ತು ಜನಮನ ಗೆದ್ದಿದ್ದ ಅರ್ಜುನ ಆನೆ ಇಲ್ಲಿಲ್ಲವಾಗಿದೆ. ಚಿಕ್ಕಮಗಳೂರಿನ ಸಕಲೇಶಪುರದ ಬಾಳೆಕೆರೆ ಪ್ರದೇಶದಲ್ಲಿ ಕಾಡಿನಲ್ಲಿ ಕಾಡಾನೆಯನ್ನು ಸರೆಹಿಡಿಯುವ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾಗೂ ಮಾವುತನ ಪ್ರಾಣ ರಕ್ಷಣೆಗಾಗಿ ಒಬ್ಬಂಟಿಯಾಗಿ ಕಾದಾಟಕ್ಕಿಳಿದ ಅರ್ಜಿನ ಆನೆ ಎಲ್ಲರ ಪ್ರಾಣವನ್ನು ರಕ್ಷಿಸಿ ತನ್ನ ಪ್ರಾಣವನ್ನು ತ್ಯಾಗ ಮಾಡಿದೆ.
ಕಾಡಾನೆ ಕಾರ್ಯಾಚರಣೆ ವೇಳೆ ಸಾಕಾನೆ ಅರ್ಜುನನ್ನು ಕಾಡಾನೆ ಸಾಯಿಸಿದೆ. ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್ ನಲ್ಲಿ ಘಟನೆ ನಡೆದಿದೆ. ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡುವ ಹಿನ್ನೆಲೆಯಲ್ಲಿ ಕಾಡಿನಲ್ಲಿ ಆನೆಗಳ ಕಾರ್ಯಾಚರಣೆ ಮಾಡುವ ವೇಳೆ ಅರ್ಜುನ ಆನೆಯ ನೇತೃತ್ವದಲ್ಲಿ ಕೆಲವು ಆನೆಗಳನ್ನು ಅರಣ್ಯದೊಳಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ, ಆನೆಯ ಮೇಲಿದ್ದ ಮಾವುತರು ಎಲ್ಲರೂ ಕಾಡಿನಲ್ಲಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲು ಮುಂದಾಗಿದ್ದರು. ಈ ವೇಳೆ ಒಂಟಿ ಸಲಗ ಎಲ್ಲರ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಮೊದಲನೆಯದಾಗಿ ಸಾಕಾನೆಗಳ ಮೇಲೆ ದಾಳಿ ಆರಂಭಿಸಿದಾಗ ಇತರೆ ಸಾಕಾನೆಗಳು ಹೆದರಿ ಅಲ್ಲಿಂದ ಕಾಲ್ಕೀಳುತ್ತವೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆಯ ಮೇಲಿದ್ದ ಮಾವುತರ ಪ್ರಾಣಕ್ಕೂ ಸಂಚಕಾರ ಎದುರಾಗಿರುತ್ತದೆ. ಆದರೆ, ಎಂದಿಗೂ ಕಾದಾಟವೇ ಆಗಿರಲಿ ಅಥವಾ ಎಂತಹದ್ದೇ ಕಾರ್ಯವಾಗಿರಲಿ ಎಂದಿಗೂ ಹಿಂದೇಟು ಹಾಕದ ಅರ್ಜುನ ಆನೆ ಕಾಡಾನೆಯೊಂದಿಗೆ ಒಬ್ಬಂಟಿಯಾಗಿಯೇ ಕಾದಾಟವನ್ನು ಮುಂದುವರೆಸಿದೆ.
ಮಾಜಿ ಸಚಿವ ಸಿಪಿ ಯೋಗೇಶ್ವರ್ ಭಾವ ಮಹದೇವಯ್ಯ ಕೊಲೆಯಾದ್ರಾ? ದಟ್ಟ ಕಾಡೊಳಗೆ ಮೂಟೆಯಲ್ಲಿ ಶವ ಪತ್ತೆ!
ಈ ವೇಳೆಗಾಗಲೇ ಎಲ್ಲ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತ ಎಲ್ಲರೂ ಸುರಕ್ಷಿತ ಸ್ಥಳಕ್ಕೆ ಸೇರಿಕೊಂಡಿದ್ದಾರೆ. ಆಗ ಕಾದಾಟ ಮುಂದುವರೆಸಿದ ಆರ್ಜುನ ಆನೆಯ ಹೊಟ್ಟೆ ಭಾಗಕ್ಕೆ ತಿವಿದ ಕಾಡಾನೆ ತೀವ್ರ ಘಾಸಿಗೊಳಿಸಿದೆ. ತುಂಬಾ ಸಮಯದವರೆಗೆ ಕಾದಾಡಿದ ಅರ್ಜುನ ತನನ್ನನ್ನು ನಂಬಿಕೊಂಡು ಬಂದಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದಾದ ಮೇಲೆ ಕುಸಿದು ಬಿದ್ದಿದೆ. ಇದಾದ ನಂತರವೂ ಕಾಡಾನೆ ಅಲ್ಲಿಯೇ ನಿಂತುಕೊಂಡು ಸಿಬ್ಬಂದಿಯ ಬಲಿಗೆ ಕಾದಿತ್ತು. ಆದರೆ, ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಅಲ್ಲಿಂದ ಓಡಿಸಿದ್ದಾರೆ. ನಂತರ, ಅರ್ಜುನ ಆನೆಯ ಬಳಿ ಹೋಗಿ ನೋಡಿದಾಗ ತೀವ್ರ ಘಾಸಿಗೊಳಗಾದ ಅರ್ಜುನ ವೀರ ಮರಣ ಹೊಂದಿರುವುದು ಕಂಡುಬಂದಿದೆ.
ಅರ್ಜುನನ್ನು ಬಿಗಿದಪ್ಪಿ ಅತ್ತ ಮಾವುತ- ನಾನು ಅನಾಥನಾದೆ ಎಂದು ಗೋಳಾಟ: ದೈತ್ಯ ದೇಹ, ತೀಕ್ಷ್ಣ ಬುದ್ಧಿಯನ್ನು ಹೊಂದಿದ್ದ ಅರ್ಜುನ ಮಾವುತನ ಪ್ರೀತಿಯ ಆನೆಯಾಗಿತ್ತು. ಎಂದಿಗೂ ಉದ್ಧಟತನ ಮಾಡದ ಅರ್ಜುನ ಕಾದಾಟದ ಕಲಿಯಾಗಿದ್ದನು. ಆದರೆ, ಇಂದು ಕಾಡಾನೆ ಕಾರ್ಯಾಚರನೆಯಲ್ಲಿ ಅರ್ಜುನನ ಮೃತಪಟ್ಟಿದ್ದರಿಂದ ಆನೆಯ ಮಾವುತ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಪ್ರತಿನಿತ್ಯ ತನ್ನನ್ನು ಮನೆಯವರಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಆನೆ ಅರ್ಜುನನ ಸಾವಿನ ನಂತರ ಆನೆಯನ್ನು ತಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ನೀನಿಲ್ಲದೇ ನಾನು ಅನಾಥನಾಗಿದ್ದೇನೆ, ಇನ್ಯಾರು ನನಗೆ ಗತಿ ಎಂದು ಬಿಕ್ಕಳಿಸಿದ್ದಾನೆ. ಇನ್ನು ಆನೆ ಸಾವಿನ ದುಃಖವನ್ನು ತಡೆದುಕೊಳ್ಳಲಾಗದೇ ಮಾವುತ ಕೂಡ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಂಬುಲೆನ್ಸ್ ಕರೆಸಿ ಅಲ್ಲಿಂದ ಆಸ್ಪತ್ರೆಗೆ ರವಾನಿಸಲಾಗಿದೆ.
ತಮಿಳುನಾಡಲ್ಲಿ ಭೋರ್ಗರೆಯುತ್ತಿದೆ ಮೈಚುಂಗ್ ಮಳೆ ಪ್ರವಾಹ: ಇನ್ನಾದ್ರೂ ನಿಲ್ಲುತ್ತಾ ಕಾವೇರಿ ನೀರಿನ ದಾಹ
ಅರ್ಜುನನ ಆತ್ಮಕ್ಕೆ ಶಾಂತಿ ಕೋರಿದ ಮಾಜಿ ಸಿಎಂ ಕುಮಾರಸ್ವಾಮಿ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು. ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ. ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ. ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ ವನ್ಯಮೃಗಗಳ ಜೀವಕ್ಕೆ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ.ಅರ್ಜುನನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.