Bengaluru| 300 ಎಲೆಕ್ಟ್ರಿಕ್ ಬಸ್ ಖರೀದಿಗೆ BMTC ಹಸಿರು ನಿಶಾನೆ
* ಗೈರು ಹಾಜರಿ ಪ್ರವೃತ್ತಿಯ ನೌಕರರ ಪುನರ್ ನೇಮಕಕ್ಕೆ ಮಂಡಳಿ ನಕಾರ
* ಅಶೋಕ್ ಲೈಲ್ಯಾಂಡ್ ಕಂಪನಿಗೆ ಬಸ್ ಪೂರೈಸಲು ಕಾರ್ಯಾದೇಶ
* ಬಿಎಂಟಿಸಿ ನೌಕರರ ಪುನರ್ ನೇಮಕ ಇದೀಗ ಮತ್ತಷ್ಟು ಕಠಿಣ
ಬೆಂಗಳೂರು(ಅ.09): ಬಿಎಂಟಿಸಿ(BMTC) ಆಡಳಿತ ಮಂಡಳಿ ಸಭೆಯಲ್ಲಿ ಕೇಂದ್ರದ ಫೇಮ್-2 ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಡಿ ಪಡೆಯುವ 300 ಎಲೆಕ್ಟ್ರಿಕ್ ಬಸ್(Electric Bus) ಟೆಂಡರ್‌ಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ಬಿಎಂಟಿಸಿ ಅಧಿಕಾರಿಗಳು ಇನ್ನೊಂದು ವಾರದೊಳಗೆ ಟೆಂಡರ್ ಪಡೆದಿರುವ ಅಶೋಕ್ ಲೈಲ್ಯಾಂಡ್ ಕಂಪನಿಗೆ ಬಸ್ ಪೂರೈಸಲು ಕಾರ್ಯಾದೇಶ ನೀಡಲಿದೆ. ಆರು ತಿಂಗಳೊಳಗೆ ಹಂತ ಹಂತವಾಗಿ 300 ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ.
ಬಿಎಂಟಿಸಿ ಗುತ್ತಿಗೆ ಮಾದರಿಯಡಿ ಹವಾ ನಿಯಂತ್ರಣ ರಹಿತ 300 ಎಲೆಕ್ಟ್ರಿಕ್ ಬಸ್ ಪಡೆಯುವ ಸಂಬಂಧ ಐದನೇ ಬಾರಿ ಟೆಂಡರ್(Tender) ಕರೆದು ಯಶಸ್ವಿಯಾಗಿ ಮುಗಿಸಿತ್ತು. ಟೆಂಡರ್‌ನಲ್ಲಿ ಪಾಲ್ಗೊಂಡಿದ್ದ ಒಟ್ಟು ಐದು ಕಂಪನಿಗಳ ಪೈಕಿ ಅತಿ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿದ್ದ ಅಶೋಕ ಲೈಲ್ಯಾಂಡ್ ಕಂಪನಿ(Ashok Leyland) (ಪ್ರತಿ ಕಿ.ಮೀ.ಗೆ .48.95) ಟೆಂಡರ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಆ ಟೆಂಡರ್‌ಗೆ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಈ ಎಲೆಕ್ಟ್ರಿಕ್ ಬಸ್‌ಗಳು 43 ಆಸನ ಸಾಮರ್ಥ್ಯ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿವೆ.
ರಾಜ್ಯಕ್ಕೆ ಬಂತು ಮೊದಲ ಎಲೆಕ್ಟ್ರಿಕ್ ಬಸ್: ಒಮ್ಮೆ ಚಾರ್ಜ್ ಮಾಡಿದ್ರೆ ಎಷ್ಟು ಕಿಮಿ ಓಡುತ್ತೆ?
300 ಬಸ್ ಖರೀದಿ ಸಂಬಂಧ ಟೆಂಡರ್ ಅಂತಿಮಗೊಂಡಿರುವ ಬಗ್ಗೆ ಕನ್ನಡಪ್ರಭ(Kannada Prabha) ಸೆ.30ರಂದು ವರದಿ ಮಾಡಿತ್ತು.
ವಜಾಗೊಂಡಿದ್ದ ಬಿಎಂಟಿಸಿ ನೌಕರರ ಪುನರ್ ನೇಮಕ ಮತ್ತಷ್ಟು ಕಠಿಣ
ನಿಯಮ ಬಾಹಿರ ಸಾರಿಗೆ ಮುಷ್ಕರದಲ್ಲಿ(KSRTC Strike) ಪಾಲ್ಗೊಂಡಿದ್ದ ಆರೋಪದಡಿ ಸೇವೆಯಿಂದ ವಜಾಗೊಂಡಿದ್ದ ಬಿಎಂಟಿಸಿ ನೌಕರರ ಪುನರ್ ನೇಮಕ ಇದೀಗ ಮತ್ತಷ್ಟು ಕಠಿಣವಾಗಿದೆ. ಏಕೆಂದರೆ, ಸೇವೆಗೆ ಆಗಾಗ ಗೈರು ಹಾಜರಾಗುವ ಪ್ರವೃತಿ ಹೊಂದಿರುವ ನೌಕರರನ್ನು ಸೇವೆಗೆ ಪುನರ್ ನೇಮಕ ಮಾಡಿಕೊಳ್ಳದಿರಲು ಬಿಎಂಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬಿಎಂಟಿಸಿಯಲ್ಲಿ ಮೂರು ಸಾವಿರಕ್ಕೂ ಅಧಿಕ ನೌಕರರು ಸೇವೆಯಿಂದ ವಜಾಗೊಂಡಿದ್ದು(Dismissed), ಪುನರ್ ನೇಮಕಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಸಾರಿಗೆ ಸಚಿವ ಶ್ರೀರಾಮುಲು(B Sriramulu) ಅವರು ನೌಕರರಿಗೆ ಪುನರ್ ನೇಮಕದ ಭರವಸೆ ನೀಡಿದ್ದರು. ಆದರೆ, ಶುಕ್ರವಾರ ನಡೆದ ಬಿಎಂಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ಪದೇ ಪದೇ ಗೈರುಹಾಜರಾಗುತ್ತಿದ್ದ ನೌಕರರನ್ನು ಸೇವೆಗೆ ಪುನರ್ ನೇಮಕ ಮಾಡದಿರಲು ನಿರ್ಣಯ ಕೈಗೊಳ್ಳಲಾಗಿದೆ.
ಉಳಿದ ನೌಕರರನ್ನು ಕಾನೂನು ಮೂಲಕ ಪುನರ್ ನೇಮಿಸಿಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ(Basavaraj Bommai) ಅವರ ಅಂತಿಮ ತೀರ್ಮಾನಕ್ಕೆ ಬಿಡಲಾಗಿದೆ ಎಂದು ಬಿಎಂಟಿಸಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.