ಉಡುಪಿ (ಫೆ.01):  ಬೆಂಗಳೂರಿನಲ್ಲಿ 350 ಎಲೆಕ್ಟ್ರಿಕ್‌ ಬಸ್ಸುಗಳ ಪ್ರಾಯೋಗಿಕ ಸಂಚಾರ ಇದೇ ತಿಂಗಳಿನಿಂದ ಆರಂಭಗೊಳ್ಳಲಿದೆ. ನಂತರ ರಾಜ್ಯದ ಉಳಿದ ನಗರಗಳಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ ಆರಂಭಿಸುವ ಯೋಜನೆ ಇದೆ ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. 

ನಗ​ರ​ದಲ್ಲಿ 3.95 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ನಗರ ಸಾರಿಗೆ ಬಸ್‌ ನಿಲ್ದಾಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜನ ನೀಡುವುದಕ್ಕಾಗಿ ಅಂತಹ ವಾಹನಗಳ ರಸ್ತೆ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 2,6000ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ವಾಹನಗಳಿವೆ ಎಂದವರು ಹೇಳಿದರು.

'ರಾಜ್ಯ​ದಲ್ಲಿ ಶೀಘ್ರವೇ 300 ಎಲೆಕ್ಟ್ರಿಕ್ ಬಸ್‌ ರಸ್ತೆಗೆ'

ಬಸ್‌ ಬೆಲೆ 2 ಕೋಟಿ: ಒಂದು ಎಲೆಕ್ಟ್ರಿಕ್‌ ಬಸ್‌ನ ಬೆಲೆ 2 ಕೋಟಿ  ರು. ಇದ್ದು, ಕೇಂದ್ರ ಸರ್ಕಾರವು 55 ಲಕ್ಷ ರು., ರಾಜ್ಯ ಸರ್ಕಾರ 33 ಲಕ್ಷ ರು. ಸಬ್ಸಿಡಿ, ಸೇರಿ ಒಟ್ಟು 88 ಲಕ್ಷ ರು. ಸಬ್ಸಿಡಿ ನೀಡಲಿದೆ. ಇದರಿಂದ ಮಾಲಿನ್ಯ ನಿಯಂತ್ರಣದ ಜತೆಗೆ ಉದ್ಯಮಕ್ಕೂ ಲಾಭವಾಗಲಿದೆ. ಬೆಂಗಳೂರಿನಲ್ಲಿ 350 ಬಸ್‌ಗಳ ಪ್ರಾಯೋಗಿಕ ಓಡಾಟದ ನಂತರ ರಾಜ್ಯದ ಎಲ್ಲ ನಗರಗಳಲ್ಲೂ ಬಸ್‌ ಓಡಾಟ ಆರಂಭಿ​ಸ​ಲಿದೆ ಎಂದು  ಸವದಿ ಹೇಳಿದರು.