'ರಾಜ್ಯದಲ್ಲಿ ಶೀಘ್ರವೇ 300 ಎಲೆಕ್ಟ್ರಿಕ್ ಬಸ್ ರಸ್ತೆಗೆ'
ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 50 ಬಸ್ಗಳು ಹಾಗೂ ಹುಬ್ಬಳ್ಳಿ ವಿಭಾಗಕ್ಕೆ 10 ಬಸ್| ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಣೆ| ಎಲೆಕ್ಟ್ರಿಕ್ ಬಸ್ ಸೇವೆ ಪ್ರಾರಂಭಿಸುವುದರಿಂದ ಪರಿಸರ ರಕ್ಷಣೆ, ಮಾಲಿನ್ಯ ಕಡಿಮೆ| ಮುಖ್ಯವಾಗಿ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗೆ ಡೀಸೆಲ್ ಹೊರೆ ಕಡಿಮೆ|
ಗದಗ(ಜ.25): ರಾಜ್ಯದಲ್ಲಿ 300 ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿವೆ ಎಂದು ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಭಾನುವಾರ ರಾತ್ರಿ ಇಲ್ಲಿ ಬಸ್ ನಿಲ್ದಾಣದ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 50 ಬಸ್ಗಳು ಹಾಗೂ ಹುಬ್ಬಳ್ಳಿ ವಿಭಾಗಕ್ಕೆ 10 ಬಸ್ಗಳನ್ನು ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು, ಎಲೆಕ್ಟ್ರಿಕ್ ಬಸ್ ಸೇವೆ ಪ್ರಾರಂಭಿಸುವುದರಿಂದ ಪರಿಸರ ರಕ್ಷಣೆ, ಮಾಲಿನ್ಯ ಕಡಿಮೆಯಾಗುತ್ತದೆ. ಮುಖ್ಯವಾಗಿ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗೆ ಡೀಸೆಲ್ ಹೊರೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಬಿಎಂಟಿಸಿಗೆ ಶೀಘ್ರ 90 ಎಲೆಕ್ಟ್ರಿಕ್ ಬಸ್ ಸೇರ್ಪಡೆ
ಸಾರಿಗೆ ಸಂಸ್ಥೆಯ ಚಾಲಕರಿಗೆ ಉತ್ತಮ ತರಬೇತಿ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಶೀಘ್ರವೇ 3 ವಿಶೇಷ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಕೊರೋನಾದಿಂದಾಗಿ ಸಾರಿಗೆ ಸಂಸ್ಥೆ ಸಾಕಷ್ಟುನಷ್ಟ ಅನುಭವಿಸಿದ್ದು, ಮೊದಲೇ 2 ಸಾವಿರ ಕೋಟಿಯಷ್ಟು ಹಾನಿಯಲ್ಲಿದ್ದ ಸಂಸ್ಥೆ ಮತ್ತಷ್ಟು ತೊಂದರೆಗೆ ಸಿಲುಕಿದೆ. ನಾನು ಈ ಇಲಾಖೆಯ ಜವಾಬ್ದಾರಿ ಹೊತ್ತುಕೊಂಡ ನಂತರ, ಸೋರಿಕೆ, ಪಾರದರ್ಶಕತೆ ತರುವ ಮೂಲಕ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಪ್ರಯತ್ನಿಸಿದ್ದೇನೆ. ಆದರೆ ಕೊರೋನಾ ಸಂಕಷ್ಟದ ಮಧ್ಯೆಯೇ ನೌಕರರು ಯಾರದೋ ಮಾತು ಕೇಳಿ ಏಕಾಏಕಿ ಪ್ರತಿಭಟನೆಗೆ ಮುಂದಾಗಿದ್ದು ಬಹಳ ನೋವಿನ ಸಂಗತಿ. ಇದಕ್ಕಿಂತ ನನಗೆ ಬೇಸರ ತಂದ ಘಟನೆ ಎಂದರೆ ನಮ್ಮ ಸಿಬ್ಬಂದಿಯೇ ನಮ್ಮ ಬಸ್ಗಳಿಗೆ ಕಲ್ಲು ಹೊಡೆದಿದ್ದು. ಅನ್ನ ಹಾಕುವ ಬಸ್ಗಳಿಗೆ ನೌಕರರೇ ಕಲ್ಲು ಹೊಡೆದರೆ ಹೇಗೆ? ಎಂದು ಬೇಸರ ವ್ಯಕ್ತಪಡಿಸಿದ ಸವದಿ, ಪರೋಕ್ಷವಾಗಿ ಹೋರಾಟಕ್ಕೆ ಕುಮ್ಮುಕ್ಕು ನೀಡಿದವರಿಗೆ ತಮ್ಮ ಮಾತಿನ ಮೂಲಕ ತಿವಿದರು
ಲಾಕ್ಡೌನ್ ವೇಳೆ ಬಸ್ಗಳು ರಸ್ತೆಗೆ ಇಳಿಯದೇ ಇದ್ದಾಗ ನಮ್ಮ ಸಿಬ್ಬಂದಿಗೆ ವೇತನ ಕೊಡುವುದೂ ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಕುಟುಂಬದ ಚಾಲಕ, ನಿರ್ವಾಹಕರು ಸೇರಿದಂತೆ ಎಲ್ಲ ಸಿಬ್ಬಂದಿ ವೇತನಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಅನುದಾನ ನೀಡಿದ್ದನ್ನು ಇಲಾಖೆ ಸಿಬ್ಬಂದಿ ನೆನಪಿನಲ್ಲಿಡಬೇಕು. ಸಾರಿಗೆ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಗಳು ಚಾಲಕರು ಮತ್ತು ನಿರ್ವಾಹಕರಿಗೆ ವಿಪರೀತ ಕಿರುಕುಳ ನೀಡುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ. ಚಾಲಕರ ಕೈಯಲ್ಲಿ 50 ಜನರ ಜೀವವಿರುತ್ತದೆ. ಅವರು ಸಮಚಿತ್ತದಿಂದ ಇದ್ದರೆ ನಮ್ಮ ಸಂಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ. ಈ ರೀತಿ ಕಿರುಕುಳ ನೀಡುವ ದೂರುಗಳು ನನ್ನ ಬಳಿ ಬಂದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇನೆ. ಹಿರಿಯ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಣ್ಣ ಪುಟ್ಟಬೇಡಿಕೆಗೆ ಸ್ಪಂದಿಸಿ, ಸಾರಿಗೆ ನಿಗಮ ನಿಮ್ಮ ಬದುಕಿಗೆ ತೊಂದರೆಯಾಗದಂತೆ ನಾನು ಇಲಾಖೆ ಸಚಿವನಾಗಿ ಕೆಲಸ ಮಾಡುತ್ತೇನೆ. ಧೈರ್ಯದಿಂದ ಇರಿ ಎಂದು ಸಾರಿಗೆ ನೌಕರರಿಗೆ ಅಭಯ ನೀಡಿದರು.