ಸುಪ್ರೀಂ ಕೋರ್ಟ್ ಆದೇಶ ಹಾಗೂ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿಗಳಲ್ಲಿ ಶಿಕ್ಷಕರನ್ನು ರಜೆ, ಬೋಧಕೇತರ ದಿನ/ಸಮಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಬಹುದೆಂದು ತಿಳಿಸಲಾಗಿದೆ.
ಬೆಂಗಳೂರು (ಜು.05): ಸುಪ್ರೀಂ ಕೋರ್ಟ್ ಆದೇಶ ಹಾಗೂ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿಗಳಲ್ಲಿ ಶಿಕ್ಷಕರನ್ನು ರಜೆ, ಬೋಧಕೇತರ ದಿನ/ಸಮಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಬಹುದೆಂದು ತಿಳಿಸಲಾಗಿದೆ. ಶಿಕ್ಷಕರಿಗೆ ಈ ಕಾರ್ಯಗಳಿಂದ ಯಾವುದೇ ವಿನಾಯಿತಿ ನೀಡಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಇತ್ತೀಚೆಗೆ ಆಯೋಗಕ್ಕೆ ಪತ್ರ ಬರೆದು, ಸಾರ್ವಜನಿಕ ಹಿತದೃಷ್ಟಿ ಅಡಿಯಲ್ಲಿ ವಿವಿಧ ಶಾಲಾ ಶಿಕ್ಷಕರನ್ನು ಚುನಾವಣಾ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿಸಿರುವುದನ್ನು ಹಿಂಪಡೆಯುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳು/ಜಿಲ್ಲಾ ಚುನಾವಣಾಧಿಕಾರಿಗಳು, ಅಪರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್.ಯೋಗೇಶ್ವರ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಮತ್ತು ಆಯೋಗದ ನಿರ್ದೇಶನ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ. ಆ ಪ್ರಕಾರ, ಬಿಎಲ್‌ಒ ನೇಮಕಾತಿಗಾಗಿ ಗ್ರೂಪ್ ‘ಸಿ’ ದರ್ಜೆಯ ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಕಾಯಂ ನೌಕರರಿಗೆ ಮೊದಲನೇ ಪ್ರಾಶಸ್ತ್ಯ ನೀಡಬೇಕು. ಒಂದು ವೇಳೆ ಅಂತಹ ನೌಕರರು ಲಭ್ಯವಿಲ್ಲದಿದ್ದರೆ, ಅಂಗನವಾಡಿ, ಗುತ್ತಿಗೆ ಶಿಕ್ಷಕರು ಅಥವಾ ಕೇಂದ್ರ ಸರ್ಕಾರದ ನೌಕರರನ್ನು ಬಿಎಲ್‌ಒ ಆಗಿ ನೇಮಿಸಬೇಕು. ಶಿಕ್ಷಕರನ್ನು ರಜೆ, ಬೋಧನೇತರ ದಿನ/ಸಮಯದಲ್ಲಿ ಬಿಎಲ್‌ಒಗಳಾಗಿ ನೇಮಿಸಬಹುದು.
ಆದರೆ, ಅವರಿಗೆ ಯಾವುದೇ ವಿನಾಯಿತಿ ಅಲ್ಲ. ಬೋಧಕೇತರ ಸಿಬ್ಬಂದಿಯನ್ನು ಕಾನೂನಿನಲ್ಲಿ ಅವಕಾಶವಿದ್ದರೆ ಯಾವುದೇ ದಿನ ಅಥವಾ ಯಾವುದೇ ಸಮಯದಲ್ಲಿ ಕರ್ತವ್ಯಕ್ಕೆ ನಿಯೋಜಿಸಬಹುದು. ಹಾಗಾಗಿ ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಹಾಗೂ ವಿಧಾನಸಭಾ ಕ್ಷೇತ್ರಗಳ ಹಂತದಲ್ಲಿ ಬೂತ್‌ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಶಿಕ್ಷಕರನ್ನು ಒಳಗೊಂಡಂತೆ ಬಿಎಲ್‌ಒಗಳಾಗಿ ನೇಮಕಗೊಂಡಿರುವ ಎಲ್ಲ ನೌಕರರು ಕಡ್ಡಾಯವಾಗಿ ಹಾಜರಾಗಲು ಕ್ರಮಕೈಗೊಳ್ಳುವಂತೆ ಆಯೋಗ ಸೂಚಿಸಿದೆ.
