ನೀತಿ ಸಂಹಿತೆ ಸೋಷಿಯಲ್ ಮೀಡಿಯಾಗೂ ಅನ್ವಯ, ಉಲ್ಲಂಘಿಸಿದರೆ ಕಾನೂನು ಕ್ರಮ: ಆಯೋಗ, ಸ್ಟಾರ್ ಪ್ರಚಾರಕರ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಇಲ್ಲ, ಜಾಹೀರಾತಲ್ಲಿ ವೈಯಕ್ತಿಕ ನಿಂದನೆ ಮಾಡುವಂತಿಲ್ಲ: ಎ.ವಿ.ಸೂರ್ಯಸೇನ್
ಬೆಂಗಳೂರು(ಏ.07): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗವು ನಿಗಾ ಇಟ್ಟಿದ್ದು, ನೀತಿ ಸಂಹಿತೆ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮಾಧ್ಯಮ ವಿಭಾಗದ ವಿಶೇಷ ಅಧಿಕಾರಿ ಎ.ವಿ.ಸೂರ್ಯಸೇನ್ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಾರ್ತಾ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚುನಾವಣಾ ನೀತಿ ಸಂಹಿತೆಯ ಅನೇಕ ವಿಷಯಗಳು ಸಾಮಾಜಿಕ ಮಾಧ್ಯಮಗಳಿಗೂ ಅನ್ವಯವಾಗಲಿವೆ. ಫೇಸ್‌ಬುಕ್, ಇನ್ಸಾ$್ಟಗ್ರಾಂ, ಟ್ವಿಟ್ಟರ್ ಮೇಲೂ ನಿಗಾ ಇಡಲಾಗುವುದು. ವಾಟ್ಸಾಪ್ ವೈಯಕ್ತಿಕ ಅಪ್ಲಿಕೇಷನ್ ಆಗಿದ್ದು, ಸಾಮಾಜಿಕ ಮಾಧ್ಯಮ ಎಂಬ ಬಗ್ಗೆ ಒಂದಷ್ಟುಗೊಂದಲವಿದೆ. ಆದರೆ ವಾಟ್ಸಪ್‌ನ ಗ್ರೂಪ್ ಅಡ್ಮಿನ್‌ಗಳ ಬಗ್ಗೆ ಸುಪ್ರೀಂ ಕೋರ್ಚ್ ಮಾರ್ಗಸೂಚಿಯಂತೆ ಒಂದಷ್ಟುಸ್ಪಷ್ಟತೆ ಇದೆ. ಇದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗಾವಿ: ಮನೆಯಿಂದಲೇ 1.4 ಲಕ್ಷಕ್ಕೂ ಅಧಿಕ ಮತದಾರರ ಮತದಾನ!
ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಮಾತನಾಡಿ, ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಪಾರದರ್ಶಕವಾಗಿ ಬಳಸಲಾಗುವುದು. ಪ್ರತಿ ಹಂತದಲ್ಲೂ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಗುತ್ತದೆ. ಮತದಾನ ಆರಂಭವಾಗುವುದಕ್ಕೂ ಮುನ್ನ ಮತ ಕೇಂದ್ರಗಳಲ್ಲಿ ಅಭ್ಯರ್ಥಿಗಳು, ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಲಾಗುವುದು. ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಬಳಿಕ ಮತದಾನಕ್ಕೆ ಅವಕಾಶ ನೀಡಲಾಗುವುದು. ಒಂದೊಮ್ಮೆ ಯಾವುದಾದರೂ ಇವಿಎಂಗಳು ಕೈಕೊಟ್ಟರೆ ಬದಲಾಯಿಸಲು ಬದಲಿ ಇವಿಎಂಗಳ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಿಸಿ ಕ್ಯಾಮೆರಾ ನಿಗಾ:
ಮತದಾನ ಮುಗಿದ ಬಳಿಕ ಏಜೆಂಟರ ಸಮ್ಮುಖದಲ್ಲೇ ಸೀಲ್ ಮಾಡಿ ಬಳಿಕ ಸ್ಟ್ರಾಂಗ್ ರೂಂಗೆ ಇವಿಎಂ ಸಾಗಿಸಲಾಗುವುದು. ಇಲ್ಲಿ ಮೂರು ಹಂತದ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು. ಸಿಸಿ ಕ್ಯಾಮೆರಾ ವ್ಯವಸ್ಥೆಯೂ ಇದ್ದು ಸ್ಟ್ರಾಂಗ್ ರೂಂ ಹತ್ತಿರದಲ್ಲೇ ಠಿಕಾಣಿ ಹೂಡಿದ ರಾಜಕೀಯ ಪಕ್ಷಗಳ ಮುಖಂಡರು ಇದನ್ನು ವೀಕ್ಷಿಸಬಹುದಾಗಿದೆ ಎಂದು ವಿವರಿಸಿದರು.
ಇವಿಎಂಗಳ ವಿಶ್ವಾಸಾರ್ಹತೆ ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಬ್ಯಾಲೆಟ್ ಪೇಪರ್ ಬಳಕೆಗೆ ಅವಕಾಶ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿಗಳನ್ನೂ ಸುಪ್ರೀಂ ಕೋರ್ಚ್ ವಜಾಗೊಳಿಸಿದೆ. ರಾಜಕೀಯ ಪಕ್ಷಗಳು ನೀಡುವ ಜಾಹೀರಾತಿನಲ್ಲಿ ವೈಯಕ್ತಿಕ ನಿಂದನೆ, ಜಾತಿ, ಧರ್ಮ ಸೂಚಿಸುವ ಉಲ್ಲೇಖ ಇರಬಾರದು. ತಾರಾ ಪ್ರಚಾರಕರ ಚಲನಚಿತ್ರ ಪ್ರದರ್ಶನಕ್ಕೆ ನಿರ್ಬಂಧವಿಲ್ಲ. ಆದರೆ ರಾಜಕೀಯ ವಿಚಾರಗಳಿದ್ದು, ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು. ಇ-ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಪಡೆದಿರಬೇಕು ಎಂದು ಹೇಳಿದರು.
ಕರ್ನಾಟಕ ಚುನಾವಣೆ ಮೂಲಕ ಕ್ರಾಂತಿ ಬರೆದ ಆಯೋಗ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ!
ಕಾರ್ಯಾಗಾರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್, ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ, ವಾರ್ತಾ ಇಲಾಖೆ ನಿರ್ದೇಶಕ ಡಿ.ಪಿ.ಮುರಳೀಧರ್, ಬಿಬಿಎಂಪಿಯ ಚುನಾವಣೆಗಳ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಗೋಷ್, ಹಿರಿಯ ಪತ್ರಕರ್ತ ಎಸ್.ಕೆ.ಶೇಷಚಂದ್ರಿಕ ಉಪಸ್ಥಿತರಿದ್ದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿದ್ದ ಮಾಧ್ಯಮ ಕಾರ್ಯಾಗಾರಕ್ಕೆ ಆಗಮಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಇಲಾಖೆ ನಿರ್ದೇಶಕ ಡಿ.ಪಿ.ಮುರಳೀಧರ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್, ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ, ಚುನಾವಣಾಧಿಕಾರಿ ಕಚೇರಿಯ ಮಾಧ್ಯಮ ವಿಶೇಷ ಅಧಿಕಾರಿ ಎ.ವಿ.ಸೂರ್ಯಸೇನ್ ಉಪಸ್ಥಿತರಿದ್ದರು.
