Asianet Suvarna News Asianet Suvarna News

ಜೈ ಶ್ರೀರಾಮ್‌ ಹೇಳುವಂತೆ ಅಂಧ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ, ಗಡ್ಡಕ್ಕೆ ಬೆಂಕಿ; ಕರ್ನಾಟಕದಲ್ಲೂ ಆರಂಭವಾಯ್ತು ಹೀನ ಕೃತ್ಯ!

ಜೈಶ್ರೀರಾಮ್‌ ಎನ್ನದ ವ್ಯಕ್ತಿಯ ಮೇಲೆ ಹಲ್ಲೆ, ಹಿಂದುಗಳ ಮನೆಯ ಮೇಲೆ ದಾಳಿ ಎನ್ನುವಂಥ ಪ್ರಕರಣಗಳು ಹೆಚ್ಚಾಗಿ ಉತ್ತರ ಭಾರತದಲ್ಲಿಯೇ ವರದಿ ಆಗುತ್ತಿದ್ದವು. ಆದರೆ, ಕಳದ ವಾರ ಕೊಪ್ಪಳದಲ್ಲಿ ನಡೆದಿರುವ ಘಟನೆ ಕರ್ನಾಟಕವೇ ತಲೆ ತಗ್ಗಿಸುವಂತೆ ಮಾಡಿದೆ.
 

Elderly Muslim man in Koppal district beaten up forced to chant Jai Shri Ram san
Author
First Published Dec 1, 2023, 7:11 PM IST

ಕೊಪ್ಪಳ (ಡಿ.1): ಆಘಾತಕಾರಿ ಘಟನೆಯಲ್ಲಿ 65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್‌ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಕುರಿತಂತೆ ವೃದ್ಧ ಹುಸೇನ್‌ಸಾಬ್‌ ನವೆಂಬರ್‌ 30 ರಂದು ಎಫ್‌ಐಆರ್‌ ಕೂಡ ದಾಖಲು ಮಾಡಿದ್ದಾರೆ. ಎಫ್‌ಐಆರ್‌ ವಿವರದ ಪ್ರಕಾರ, ನವೆಂಬರ್‌ 25ರ ರಾತ್ರಿ ಹೊಸಪೇಟೆಯಿಂದ ಗಂಗಾವತಿಗೆ ತಾವು ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ ಎಂದು ಹುಸೇನ್‌ಸಾಬ್‌ ದೂರು ನೀಡಿದ್ದಾರೆ. ಗಂಗಾವತಿಯಲ್ಲಿ ಒಂದು ಕಪ್‌ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಬಳಿಗೆ ಬಂದಿದ್ದರು. ಎಲ್ಲಿಗೆ ಹೋಗುತ್ತಿರುವುದಾಗಿ ನನ್ನನ್ನು ಕೇಳಿದ ಅವರು, ತಾವೇ ಡ್ರಾಪ್‌ ಮಾಡುವುದಾಗಿ ಹೇಳಿದ್ದರು ಎಂದು ಹುಸೇನ್‌ಸಾಬ್‌ ದೂರಿನಲ್ಲಿ ತಿಳಿಸಿದ್ದಾರೆ. ಬೈಕ್‌ ಹೊರಡಲು ಆರಂಭವಾದ ಬಳಿಕ ಇಬ್ಬರೂ ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಲ್ಲದೆ, ಅವಾಚ್ಯವಾಗಿ ನಿಂದಿಸಲು ಆರಂಭಿಸಿದರು ಎಂದಿದ್ದಾರೆ. 'ಇಬ್ಬರೂ ನನ್ನನ್ನು ಪಂಪಾನಗರ ಸಮೀಪದ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ, ಬೈಕ್‌ನಿಂದ ನನ್ನನ್ನು ತಳ್ಳಿದ್ದರು. ಈ ವೇಳೆ ನನಗೆ ಸರಿಯಾಗಿ ಕಣ್ಣು ಕಾಣೋದಿಲ್ಲ. ಬಿಟ್ಟುಬಿಡಿ, ನಾನು ಮನೆಗೆ ಹೋಗುತ್ತೇನೆ ಎಂದು ಅವರಿಗೆ ಹೇಳಿದ್ದೆ. ಈ ವೇಳೆ ಅವರು, ಜೈ ಶ್ರೀರಾಮ್‌ ಹೇಳುವಂತೆ ಒತ್ತಾಯ ಮಾಡಿದ್ದರು. ನಾನು ಜೈಶ್ರೀರಾಮ್‌ ಎಂದು ನಾನು ಹೇಳಿದರೂ ನನ್ನ ಮೇಲೆ ಹಲ್ಲೆ ಮಾಡೋದನ್ನು ಅವರು ಬಿಟ್ಟಿರಲಿಲ್ಲ' ಎಂದು ಹುಸೇನ್‌ಸಾಬ್‌ ಅಂದಿನ ದಿನವನ್ನು ನೆನಪಿಸಿಕೊಂಡಿದ್ದಾರೆ.

ದಾಳಿ ಮಾಡಿದ ವ್ಯಕ್ತಿಗಳು ನನ್ನ ಎದುರೇ ಬಿಯರ್‌ ಬಾಟಲಿಯನ್ನು ಒಡೆದರು. ಗ್ಲಾಸ್‌ನ ಚೂರಿನಿಂದ ನನ್ನ ಗಡ್ಡವನ್ನು ಕತ್ತರಿಸಲು ಪ್ರಯತ್ನ ಮಾಡಿದರು. ಆದರೆ, ಗಡ್ಡವನ್ನು ಕತ್ತರಿಸಲು ಸಾಧ್ಯವಾಗದ ಕಾರಣ, ಅವರಲ್ಲಿ ಒಬ್ಬ ವ್ಯಕ್ತಿ ಕಡ್ಡಿಪೆಟ್ಟಿಗೆಯನ್ನು ತೆಗೆದು ನನ್ನ ಗಡ್ಡಕ್ಕೆ ಬೆಂಕಿ ಇಟ್ಟಿದ್ದ. ಆ ಕ್ಷಣದಲ್ಲಿ ನಾನು ಸಾಯುತ್ತೇನೆ ಎಂದೇ ಅಂದುಕೊಂಡಿದ್ದೆ. ನನ್ನ ಮೇಲೆ ಹಲ್ಲೆ ಮಾಡುತ್ತಿರುವಾಗ ನಾನು ಅಳುತ್ತಿದ್ದೆ. ಈ ವೇಳೆ ಅಲ್ಲಿಗೆ ಬಂದ ವಾಚ್‌ಮನ್‌ಗಳು ನನ್ನನ್ನು ಕಾಪಾಡಿದರು ಎಂದು ಹುಸೇನ್‌ಸಾಬ್‌ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತಕ್ಷಣವೇ ಎಫ್‌ಐಆರ್‌ ದಾಖಲು ಮಾಡಿದ್ದು, ತನಿಖೆ ಆರಂಭ ಮಾಡಿದ್ದಾರೆ.  ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಹುಸೇನ್‌ಸಾಬ್‌ ಅವರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಮಾಡುವ ನಿರೀಕ್ಷೆಯಿದೆ. ಬಸ್ ನಿಲ್ದಾಣ, ಮುಖ್ಯರಸ್ತೆ, ಪಂಪಾನಗರದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸಂತ್ರಸ್ತ ಹುಸೇನಸಾಬ್ ತನ್ನ ಮಗಳೊಂದಿಗೆ ಗಂಗಾವತಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ. ದೃಷ್ಟಿ ಹೀನವಾಗುತ್ತಿರುವುದರಿಂದ ಕಳೆದ ಕೆಲ ತಿಂಗಳಿಂದ ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಲವೆಡೆ ಭಿಕ್ಷಾಟನೆ ನಡೆಸುತ್ತಿದ್ದಾರೆ. ಈ ಮಧ್ಯೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸದಸ್ಯರು ಗಂಗಾವತಿಯಲ್ಲಿರುವ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ.

ಸೋನಿಯಾಗಾಂಧಿಗೆ ತಲೆಬಾಗಲಿಲ್ಲವೆಂದು ಜೈಲಿಗೆ ಹೋಗಬೇಕಾಯ್ತು: ಜನಾರ್ದನ ರೆಡ್ಡಿ

''ನಮ್ಮ ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ನಿರುಪದ್ರವಿ ವೃದ್ಧನನ್ನು ಥಳಿಸಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಬಲವಂತ ಮಾಡಿರುವುದು ಕ್ರೂರತನ. ಸಂತ್ರಸ್ಥನ ಮೇಲೆ ಹಲ್ಲೆ ಮತ್ತು ಮಾನಸಿಕ ಹಿಂಸೆಗೆ ಕಾರಣರಾದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಹುಸೇನ್‌ಸಾಬ್‌ ಅವರ ಚಿಕಿತ್ಸಾ ವೆಚ್ಚವನ್ನು ಎಸ್‌ಡಿಪಿಐ ಭರಿಸಲು ನಿರ್ಧರಿಸಿದೆ ಎಂದು ಕೊಪ್ಪಳದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಲೀಂ ಹೇಳಿದ್ದಾರೆ.

ಗಂಗಾವತಿ: ಕರ್ನೂಲ್ ತಾತಾ ದರ್ಗಾ ಅಭಿವೃದ್ದಿಗೆ ಬದ್ಧ: ಶಾಸಕ ಜನಾರ್ದನ ರೆಡ್ಡಿ

Follow Us:
Download App:
  • android
  • ios