ಮೊಟ್ಟೆ ಕೊಡ್ತಿರೋದು ಹೇಳೊಲ್ಲ; ಕನ್ನಡ ಬರೊಲ್ಲ ಅಂತಾ ಟ್ರೋಲ್ ಮಾಡ್ತೀರಾ? ಮಾಧ್ಯಮಗಳ ವಿರುದ್ಧ ಮಧು ಬಂಗಾರಪ್ಪ ಗರಂ!
ಕನ್ನಡ ಬರೊಲ್ಲ ಅನ್ನೋ ವಿಚಾರವಾಗಿ ನೀವೇಷ್ಟೇ ಟ್ರೋಲ್ ಮಾಡಿದ್ರೂ ನಾನು ಹೆದರೊಲ್ಲ ಮಾಧ್ಯಮಗಳ ವಿರುದ್ಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ ಆದ ಘಟನೆ ನಡೆಯಿತು.
ಬೆಂಗಳೂರು (ನ.22): ಕನ್ನಡ ಬರೊಲ್ಲ ಅನ್ನೋ ವಿಚಾರವಾಗಿ ನೀವೇಷ್ಟೇ ಟ್ರೋಲ್ ಮಾಡಿದ್ರೂ ನಾನು ಹೆದರೊಲ್ಲ. ಸುಮ್ಮನೆ ಇಲ್ಲದೆ ಇರೋದು ತರಬೇಡಿ. ಪದೇ ಪದೇ ಇದನ್ನ ತರೋದು ಮಾಧ್ಯಮಗಳು ನಿಲ್ಲಿಸಬೇಕು. ಮಕ್ಕಳಿಗೆ ಮೊಟ್ಟೆ ಕೊಟ್ಟಿರೋ ವಿಚಾರ ಹೇಳೊಲ್ಲ. ಆದರೆ ಶಿಕ್ಷಣ ಸಚಿವರಿಗೆ ಕನ್ನಡ ಬರೊಲ್ಲ ಅನ್ನೋದನ್ನ ಹಾಕ್ತೀರಾ? ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತೆ ಮಾಧ್ಯಮಗಳ ಮೇಲೆ ಗರಂ ಆದರು.
ಕಾನ್ಫರೆನ್ಸ್ ಸಂವಾದದಲ್ಲಿ ವಿದ್ಯಾರ್ಥಿಯೊಬ್ಬ 'ಸಚಿವರಿಗೆ ಕನ್ನಡ ಬರೊಲ್ಲ' ಎಂದು ಅಪಹಾಸ್ಯ ಮಾಡಿದ್ದ ವಿದ್ಯಾರ್ಥಿ ಮೇಲೆ ಕೆರಳಿ ಕೆಂಡವಾಗಿ ಕ್ರಮಕ್ಕೆ ಸೂಚಿಸಿದ್ದಾರೆ ಎನ್ನಲಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿದ್ಯಾರ್ಥಿ ವಿರುದ್ದ ಕ್ರಮ ತೆಗೆದುಕೊಳ್ಳಿ ಅಂತ ನಾನು ಹೇಳಿಲ್ಲ. ಹೆಡ್ ಮಾಸ್ಟರ್,ಬಿಇಒ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದೆ. ಮಕ್ಕಳ ಮೇಲೆ ಆಕ್ಷನ್ ತಗೊಳ್ಳೋಕೆ ನಮಗೆ ಅಧಿಕಾರ ಇಲ್ಲ. ನಿಮ್ಮ ಮಕ್ಕಳನ್ನ ಹತೋಟಿಯಲ್ಲಿ ಇಡಬೇಕು ಅಂತಾ ಹೆಡ್ ಮಾಸ್ಟರ್, ಬಿಇಒಗೆ ಸೂಚನೆ ನೀಡಿದ್ದೇನೆ. ನಾನು ಶಿಕ್ಷಣ ಸಚಿವ ನಾನು ಹೇಳಿದ್ದೇನೆ. ನಿಮ್ಮ ಮಗ ಹಾಗೆ ಮಾತಾಡಿದ್ರೆ ನೀವು ಏನ್ ಮಾಡ್ತಿದ್ರಿ? ನಾನಾಗಿದ್ರೆ ನನ್ನ ಮಗನ ಜೊತೆ ಮಾತಾಡುತ್ತಿದ್ದೆ. 60-70 ಸಾವಿರ ಮಕ್ಕಳು ಇದ್ದಾಗ ಮಕ್ಕಳು ಆ ರೀತಿ ಮಾತಾಡೋದು ಸರಿಯಲ್ಲ. ಇದನ್ನ ಶಾಲೆಯಲ್ಲಿ ಡಿಸಿಪ್ಲೀನ್ ತರೋಕೆ ಆಗುತ್ತಾ ಹೀಗೆ ಮಾತಾಡಿದ್ರೆ? ಸಚಿವನಾಗಿ ಅಲ್ಲ, ನಾನೊಬ್ಬ ತಂದೆಯಾಗಿ ಇದನ್ನ ಹೇಳುತ್ತಿದ್ದೇನೆ ಎಂದು ಮತ್ತೆ ಗರಂ ಆದರು.
ಶೀಘ್ರ 10,000 ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ
ನೀವು ಟ್ರೋಲ್ ಮಾಡಿದ್ರೆ ಪುಗ್ಸಟ್ಟೆ ನನಗೇನು ಆಗಬೇಕಿದೆ? ಯಾವತ್ತೂ ಮಧು ಬಂಗಾರಪ್ಪ ಮಧು ಬಂಗಾರಪ್ಪನೇ ಆಗಿರುತ್ತಾನೆ. ನಾಗೇಶ್ ಅವರು ಮಧು ಬಂಗಾರಪ್ಪಗೆ ಇಲಾಖೆ ಬಗ್ಗೆ ಏನೂ ಗೊತ್ತಿಲ್ಲ ಅಂದರು. ಅದಕ್ಕೆ ನಮ್ಮಂತ ದಡ್ಡರನ್ನ ಜನರು ಹೈಲೀಡ್‌ನಲ್ಲಿ ಗೆಲ್ಲಿಸಿದ್ರು, ಅವರನ್ನ ಸೋಲಿಸಿದ್ರು ಎಂದು ತಿರುಗೇಟು ನೀಡಿದ ಸಚಿವರು ಮುಂದುವರಿದು, ಸಭಾಪತಿ ಹೊರಟ್ಟಿ ಅವರು ನನಗೆ ಕರೆ ಮಾಡಿ ಒಳ್ಳೆ ಕೆಲಸ ಮಾಡಿದ್ದೀಯಾ ಅಂದರು. ನನ್ನ ಜವಾಬ್ದಾರಿ ನಾನು ಮಾಡಿದ್ದೇನೆ. ಟ್ರೋಲ್ ಮಾಡಿದವರು ನಿಮ್ಮ ಮಕ್ಕಳು ಹೀಗೆ ಮಾಡಿದ್ರೆ ಏನು ಮಾಡ್ತೀರಿ ಯೋಚನೆ ಮಾಡಿ. ಸಿಎಂ ಸಿದ್ದರಾಮಯ್ಯ ಅವರು ನನಗೆ ಕೊಟ್ಟಿರೋ ಜವಾಬ್ದಾರಿ. ನಾನು ನನ್ನ ಮಕ್ಕಳನ್ನು ನೋಡಿಕೊಂಡಂತೆ ಶಾಲಾ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ. ಆದರೆ ಈ ರೀತಿ ಟ್ರೋಲ್ ಮಾಡೋದು ಒಳ್ಳೇದಲ್ಲ. ನನ್ನ ವಿರುದ್ಧ ಕಳೆದ ಏಳೆಂಟು ತಿಂಗಳಿಂದ ಈ ರೀತಿ ಟ್ರೋಲ್ ಮಾಡಲಾಗುತ್ತಿದೆ. ಆದರೆ ಹೀಗೆ ಮಾಡೋದ್ರಿಂದ ನಾನು ಬಗ್ಗುತ್ತೇನೆ ಅನ್ನೋದು ಬಿಟ್ಟುಬಿಡಿ. ನಾನು ಇಂಥದ್ದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಮೇಲೆ ಇದೆಲ್ಲ ರಬ್ಬಿಶ್ ಅನ್ನ ನಿಲ್ಲಿಸಿ ಸಾಕು ಇದು ಸರಿಯಲ್ಲ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.
ಮಕ್ಕಳನ್ನ ಸರಿದಾರಿಗೆ ತರಬೇಕು:
ಮಕ್ಕಳನ್ನ ಸರಿದಾರಿಗೆ ತರಬೇಕು. ಇಲ್ಲದೆ ಹೋದ್ರೆ ಕಷ್ಟ.ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಅಂಥ ಕಾರ್ಯಕ್ರಮದಲ್ಲಿ ಹಾಗೆ ಮಾತನಾಡಿದ್ರೆ ಹೇಗೆ ಹೇಳಿ? ನಾಳೆ ಸಿಎಂ, ನ್ಯಾಯಾಧೀಶರ ಕಾರ್ಯಕ್ರಮದಲ್ಲಿ ಇದ್ದಾಗ ಹಾಗೆ ಹೇಳಿದ್ರೆ? ತಲೆಯಲ್ಲಿ ಏನಾದ್ರೂ ಇದ್ರೆ ತೆರಿಗೆ ಹಣವನ್ನು ಮಕ್ಕಳಿಗಾಗಿ ಖರ್ಚು ಮಾಡುತ್ತಿದ್ದೇವೆ ಅದನ್ನ ಹೇಳಿ ಅದುಬಿಟ್ಟು ನನಗೆ ಕನ್ನಡ ಬರೊಲ್ಲ ಅಂದರೆ ನೀವು ಹೇಳಿಕೊಟ್ರೆ ನಾನೇನು ಉದ್ದಾರ ಆಗೊಲ್ಲ. ನನ್ನ ಲಿಮಿಟೇಷನ್ ಇಷ್ಟೇ. ನನ್ ರಕ್ತದಲ್ಲಿ ಕನ್ನಡ ಇದೆ. ನಾವು ಚಿಕ್ಕವರಿದ್ದಾಗ ನಮಗೆ ಹೇಳಿಕೊಟ್ಟಿದ್ದೇ ಇಷ್ಟು. ನಾನು ನಿಮಗೆ ಎಕ್ಸಾಂ ಮಾಡ್ತೀನಿ ಫಸ್ಟ್ ರಾಂಕ್‌ನಿಂದ 30 ರಾಂಕ್ ಬರ್ತಿರ, 30 ರಾಂಕ್ ಇರೋನು ಕೆಟ್ಟೋನು ಕನ್ನಡ ಬರದೋನು ಅಂತೀರಾ? ಇನ್ಮುಂದೆ ಇದೆ ಬಿಡಬೇಕು ಎಂದರು.
ಶಿಕ್ಷಕರ ಬೋಧನೆ, ಮಕ್ಕಳ ಕಲಿಕೆ ವೃದ್ಧಿಗೆ ಎಐ ಆ್ಯಪ್: ಸಚಿವ ಮಧು ಬಂಗಾರಪ್ಪ
ಘಟನೆ ಹಿನ್ನೆಲೆ
ಬುಧವಾರ ಬೆಳ್ಗೆ ವಿಡಿಯೋ ಶಿಕ್ಷಣ ಸಚಿವ ಕಾನ್ಫರೆನ್ಸ್ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಅಪಹಾಸ್ಯ ಮಾಡಿದ್ದು ವೈರಲ್ ಆಗಿತ್ತು. 'ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕನ್ನಡ ಬರಲ್ಲ' ಎಂದು ಸಂವಾದದಲ್ಲಿ ವಿದ್ಯಾರ್ಥಿ ಹೇಳಿದ್ದ. ಇದನ್ನು ಕೇಳಿ ಕೆರಳಿ ಕೆಂಡವಾಗಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು, ' ಯಾರೋ ಅದು ಹೇಳಿದ್ದು , ಏನಂತ ಹೇಳಿದ್ರು..ನಾನೇನು ಉರ್ದು ಮಾತಾಡಿದ್ನಾ.. ಈಗ ಕನ್ನಡದಲ್ಲೇ ಮಾತಾಡಿದ್ದು..' ಎಂದಿದ್ದರು. ಅದೇ ವೇಳೆ ತಕ್ಷಣವೇ ಪಕ್ಕದಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ 'ಯಾರು ಅದು ನೋಡಿ ರೆಕಾರ್ಡ್ ಮಾಡಿ' ಉದ್ದಟತನ ತೋರಿದ ವಿದ್ಯಾರ್ಥಿ ಮೇಲೆ ಕ್ರಮ ಜರುಗಿಸಿ ಎಂದು ಸೂಚಿಸಿದ್ದರು ಎಂಬುದು ವಿವಾದಕ್ಕೆ ಕಾರಣವಾಗಿತ್ತು.