ಬೆಂಗಳೂರು (ಜೂ. 04): ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಈ ಹಂತದಲ್ಲಿ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ. ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ದೂರದರ್ಶನ, ಆಕಾಶವಾಣಿ ಸೇರಿದಂತೆ ಪರ್ಯಾಯ ಮಾಧ್ಯಮಗಳ ಮೂಲಕ ಪಠ್ಯ ಬೋಧನೆಯತ್ತ ಸರ್ಕಾರ ಗಮನ ಹರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರು, ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಏಕಾಏಕಿ ಶಾಲೆಗಳನ್ನು ಆರಂಭಿಸುವುದು ಸರಿಯಲ್ಲ. ಪ್ರಸ್ತುತ ಪಠ್ಯ ಕ್ರಮವನ್ನು ಮೂರು ಭಾಗವಾಗಿ ವಿಂಗಡಿಸಬೇಕು, ಮಕ್ಕಳು ಸ್ವಯಂ ಆಗಿ ಕಲಿಯುವ, ದೂರದರ್ಶನ, ಅಕಾಶವಾಣಿ ಮತ್ತಿತರ ಮಾಧ್ಯಮಗಳ ಮೂಲಕ ಕಲಿಸುವ ಹಾಗೂ ತರಗತಿಯಲ್ಲೇ ಕಲಿಸಬೇಕಾದ ಪಠ್ಯ ಎಂದು ವಿಂಗಡಿಸಬೇಕು.

ರಾಜ್ಯದಲ್ಲಿ ಕೊರೋನಾ ಸಂಕಷ್ಟದ ನಡುವೆ ಜುಲೈನಿಂದ ಶಾಲೆಗಳು ಪುನರಾರಂಭ..!

ಈ ರೀತಿ ವಿಂಗಡಿಸಿದ ಪಠ್ಯದಲ್ಲಿ ಮಕ್ಕಳೇ ಕಲಿಯಬಹುದಾದದ್ದನ್ನು ಅವರೇ ಮನೆಯಲ್ಲಿ ಓದಿಕೊಳ್ಳಲು ಅಥವಾ ತಮ್ಮ ಪೋಷಕರು, ಕುಟುಂಬದ ಬೇರೆ ಯಾರಿಂದಲಾದರೂ ಹೇಳಿಸಿಕೊಂಡರೂ ಸಾಕು. ಎರಡನೇ ಹಂತದ ಪಠ್ಯವನ್ನು ಶಿಕ್ಷಕರ ಮೂಲಕ ದೂರದರ್ಶನ, ಆಕಾಶವಾಣಿ ಸೇರಿದಂತೆ ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಮನೆಯಲ್ಲೇ ಮಕ್ಕಳಿಗೆ ಪಠ್ಯ ಬೋಧಿಸಲು ಕ್ರಮ ವಹಿಸಬೇಕು.

ಕೆಲವು ಪ್ರಾಯೋಗಿಕ ತರಗತಿಗಳು ಸೇರಿದಂತೆ ತರಗತಿಯಲ್ಲೇ ಕಲಿಯಬೇಕಾದ ಪಠ್ಯವನ್ನು ಕೊನೆಯಲ್ಲಿ ಅಂದರೆ ಇನ್ನೂ ಒಂದೆರಡು ತಿಂಗಳ ಬಳಿಕ ಅಥವಾ ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ಮಕ್ಕಳು ತರಗತಿಗೆ ಬರುವಂತಾದ ಮೇಲೆ ಬೋಧನೆ ಮಾಡಬಹುದು. ಇದರಿಂದ ಸಮಯವೂ ವ್ಯರ್ಥವಾಗದೆ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಪಠ್ಯವನ್ನೂ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಇಂತಹ ಪರ್ಯಾಯ ಆಲೋಚನೆಗಳು ಇಂದಿನ ಪರಿಸ್ಥಿತಿಯಲ್ಲಿ ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.

'ಸ್ಕೂಲ್ ಓಪನ್ ಮಾಡ್ಬೇಡಿ'; ಕೋವಿಡ್ ಆತಂಕದ ಮಧ್ಯೆ ಶಾಲೆ ಆರಂಭಕ್ಕೆ ವಿರೋಧ

3 ತಿಂಗಳು ಹೀಗೆ ನಡೆಯಲಿ:

 ಖ್ಯಾತ ವೈದ್ಯೆ ಡಾವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು, ‘ನಮ್ಮಲ್ಲಿ ಖಾಸಗಿ ಶಾಲೆಗಳು ಒಂದು ರೀತಿ ಆದರೆ, ಸರ್ಕಾರಿ ಶಾಲೆಗಳ ಸಮಸ್ಯೆಯೇ ಬೇರೆ. ಕೊರೋನಾ ನಿಯಂತ್ರಣಕ್ಕೆ ಶುಚಿತ್ವ ಮುಖ್ಯ. ಸಾಕಷ್ಟು ಶಾಲೆಗಳಲ್ಲಿ ಇಂದಿಗೂ ನೀರಿನ ಸೌಲಭ್ಯವೇ ಇಲ್ಲ. ಮಕ್ಕಳನ್ನು ದೂರ ಕೂರಿಸಿ ಕಲಿಸುವಷ್ಟುಕೊಠಡಿಗಳಿಲ್ಲ. ದೊಡ್ಡ ಮಟ್ಟದ ಶಿಕ್ಷಕರ ಕೊರತೆ ಇದೆ. ಆಟ ಆಡಿ ನಲಿಯುವ, ಕಲಿಯುವ ವಯಸ್ಸಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ಕೊರೋನಾ ನಿಯಂತ್ರಣ ದೃಷ್ಟಿಯಿಂದ ಮಾಸ್ಕ್‌ ಧರಿಸುವ, ಕೈ ತೊಳೆಯುವ ಬಗ್ಗೆ ಎಷ್ಟೇ ಸಲಹೆ ನೀಡಿದರೂ ಅವರು ಅಷ್ಟುಸುಲಭವಾಗಿ ಪಾಲಿಸುವುದಿಲ್ಲ. ಇಂತಹ ಪರಿಸ್ಥಿತಿಯಿರುವಾಗ ಕನಿಷ್ಠ ಮೂರು ತಿಂಗಳು ಮಕ್ಕಳಿಗೆ ಮನೆಯಲ್ಲೇ ಪಠ್ಯ ಬೋಧಿಸುವ ಅಗತ್ಯವಿದೆ’ ಎಂದು ಹೇಳಿದ್ದಾರೆ.