* 2-3 ದಿನ ರಜೆ ಘೋಷಿಸಲು ಶಿಕ್ಷಣ ಇಲಾಖೆ ಸೂಚನೆ\* 10ಕ್ಕಿಂತ ಹೆಚ್ಚು ಮಕ್ಕಳಿಗೆ ಕೋವಿಡ್‌ ಬಂದರೆ ಶಾಲೆಗೆ ರಜೆ* ಕೆಲವೇ ಮಕ್ಕಳಿಗೆ ಸೋಂಕು ತಗಲಿದರೆ ಅವರಿಗಷ್ಟೇ ರಜೆ* ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮಾರ್ಗಸೂಚಿ ಪ್ರಕಟ* ಮಕ್ಕಳಲ್ಲಿ ಕೋವಿಡ್‌ ಲಕ್ಷಣ ಕಂಡುಬಂದರೆ ತಪಾಸಣೆ

ಬೆಂಗಳೂರು(ಜೂ.17): ರಾಜ್ಯದ ಯಾವುದೇ ಶಾಲೆಗಳಲ್ಲಿ ಕೆಲ ಮಕ್ಕಳಿಗೆ ಕೋವಿಡ್‌ ಸೋಂಕು ಕಂಡುಬಂದರೆ ಅವರಿಗೆ ಮಾತ್ರ ರಜೆ ನೀಡಬೇಕು, 10ಕ್ಕಿಂತ ಹೆಚ್ಚು ಮಕ್ಕಳಲ್ಲಿ ಸೋಂಕು ಕಂಡುಬಂದರೆ ತಕ್ಷಣ ಇಡೀ ಶಾಲೆಗೆ ಮುಂದಿನ ಎರಡು​-ಮೂರು ದಿನ ರಜೆ ಘೋಷಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಮಾರ್ಗಸೂಚಿ ರೂಪಿಸಿ ಸುತ್ತೋಲೆ ಹೊರಡಿಸಿರುವ ಇಲಾಖೆಯು, ಪ್ರತಿ ಶಾಲೆಯಲ್ಲೂ ಇವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಎಲ್ಲಾ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ಕ್ರಮ ವಹಿಸಬೇಕೆಂದು ಸೂಚಿಸಿದೆ.

ಯಾವುದೇ ಶಾಲೆಯಲ್ಲಿ ಮಕ್ಕಳಿಗೆ ಕೋವಿಡ್‌ ಲಕ್ಷಣಗಳು ಕಂಡುಬಂದರೆ ಪೋಷಕರ ಉಪಸ್ಥಿತಿಯಲ್ಲಿ ಆರೋಗ್ಯ ಇಲಾಖೆಯ ಸ್ಥಳೀಯ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಬೇಕು. ಸೋಂಕು ದೃಢಪಟ್ಟರೆ ಅವರಿಗೆ ಕೆಲ ದಿನಗಳ ಕಾಲ ಭೌತಿಕ ತರಗತಿಗೆ ಬರದಂತೆ ರಜೆ ನೀಡಿ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಬೇಕು. ಒಂದು ವೇಳೆ ಯಾವುದೇ ಶಾಲೆಯಲ್ಲಿ 10ಕ್ಕಿಂತ ಹೆಚ್ಚಿನ ಮಕ್ಕಳಿಗೆ ಕೋವಿಡ್‌ ಸೋಂಕು ಲಕ್ಷಣ ಕಂಡು ಬಂದಲ್ಲಿ ಅಥವಾ ಸೋಂಕು ದೃಢಪಟ್ಟಲ್ಲಿ ಕೂಡಲೇ ಅಂತಹ ಶಾಲಾ ಮುಖ್ಯೋಪಾಧ್ಯಾಯರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಉಪನಿರ್ದೇಶಕರ ಅನುಮತಿ ಪಡೆದು ಮುಂದಿನ ಎರಡು ಮೂರು ದಿನ ಶಾಲೆಗೆ ರಜೆ ಘೋಷಿಸಬೇಕು ಎಂದು ಸೂಚಿಸಲಾಗಿದೆ.

12ರಿಂದ 14 ವರ್ಷದೊಳಗಿನ ಮಕ್ಕಳು ಕೋವಿಡ್‌ ಲಸಿಕೆ ಪಡೆದಿರುವುದನ್ನು ಪರಿಶೀಲಿಸಬೇಕು. ಪಡೆಯದೆ ಇರುವ ಮಕ್ಕಳಿಗೆ ಸ್ಥಳೀಯ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಲಸಿಕೆ ಪಡೆಯಲು ಕ್ರಮ ವಹಿಸಬೇಕು ಎಂದು ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ನಿರ್ದೇಶಿಸಿದ್ದಾರೆ.

ರಜೆ ನೀಡಿದ ಶಾಲೆಗಳನ್ನು ಆರೋಗ್ಯ ಇಲಾಖೆಯ ಸ್ಥಳೀಯ ಸಿಬ್ಬಂದಿ ಘಟಕ, ಜಿಲ್ಲಾಡಳಿತದ ಮೂಲಕ ಸಂಪೂರ್ಣ ಸ್ಯಾನಿಟೈಸ್‌ ಮಾಡಿಸುವುದು ಸೇರಿದಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಈ ರಜಾ ದಿನಗಳಲ್ಲಿ ನಡೆಯಬೇಕಿದ್ದ ಪಾಠ ಪ್ರವಚನಗಳನ್ನು ಮುಂದಿನ ಸರ್ಕಾರಿ ರಜಾ ದಿನಗಳಲ್ಲಿ ಸರಿದೂಗಿಸಬೇಕು ಎಂದು ತಿಳಿಸಿದೆ.

ಅಲ್ಲದೆ, ಮನೆ ಹಾಗೂ ಶಾಲೆಯಲ್ಲಿ ಅನುಸರಿಸಬೇಕಾದ ಕೋವಿಡ್‌ ಸುರಕ್ಷತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿ ದಿನ ಶಿಕ್ಷಕರು ಅರಿವು ಮೂಡಿಸಬೇಕು. ಮಕ್ಕಳ ಪೋಷಕರಿಗೆ ತಿಳುವಳಿಕೆ ನೀಡಬೇಕು. ಮಕ್ಕಳು ಮನೆಯಿಂದಲೇ ಕುಡಿಯಲು ಬಿಸಿ ನೀರು ತರಲು ಸೂಚಿಸಬೇಕು. ಶಾಲೆಯಲ್ಲಿ ಎಲ್ಲ ಶಿಕ್ಷಕರು ಸಿಬ್ಬಂದಿ ಕಡ್ಡಾಯವಾಗಿ ಮಾಸ್‌್ಕ ಧರಿಸಬೇಕು. ಎಲ್ಲರು ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಯಾರಿಗಾದರೂ ಕೋವಿಡ್‌ ಲಕ್ಷಣಗಳು ಕಂಡುಬಂದರೆ ತಪಾಸಣೆ ಮಾಡಿಸಿಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ನಿರ್ದೇಶಕ ನೀಡಿದ್ದಾರೆ.