Asianet Suvarna News Asianet Suvarna News

ಕೈಗಾರಿಕಾ ಇಲಾಖೆಯಲ್ಲಿ ಇ-ಕಚೇರಿ ವ್ಯವಸ್ಥೆ ಕಡ್ಡಾಯ: ಸಚಿವ ನಿರಾಣಿ

ಮುಂದಿನ ತಿಂಗಳು 15ರೊಳಗೆ ವಾಣಿಜ್ಯ ಕೈಗಾರಿಕಾ ಇಲಾಖೆ ವ್ಯಾಪ್ತಿಗೊಳಪಡುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳನ್ನು ಇ-ಕಚೇರಿ ವ್ಯವಸ್ಥೆಗಳನ್ನಾಗಿ ಪರಿವರ್ತನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಸೂಚನೆ ನೀಡಿದ್ದಾರೆ.

e office system is mandatory in industries department says murugesh nirani gvd
Author
Bangalore, First Published Jul 3, 2022, 4:55 PM IST

ಬೆಂಗಳೂರು (ಜು.03): ಮುಂದಿನ ತಿಂಗಳು 15ರೊಳಗೆ ವಾಣಿಜ್ಯ ಕೈಗಾರಿಕಾ ಇಲಾಖೆ ವ್ಯಾಪ್ತಿಗೊಳಪಡುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳನ್ನು ಇ-ಕಚೇರಿ ವ್ಯವಸ್ಥೆಗಳನ್ನಾಗಿ ಪರಿವರ್ತನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಸೂಚನೆ ನೀಡಿದ್ದಾರೆ. 

ಶನಿವಾರ ವಿಕಾಸಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರು, ಕೆಎಸ್‌ಎಸ್‌ಐಡಿಸಿ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಒಂದು ವೇಳೆ ಆ.15ರೊಳಗೆ ಜಿಲ್ಲಾಮಟ್ಟದ ಕಚೇರಿಗಳನ್ನು ಇ-ಕಚೇರಿ ವ್ಯವಸ್ಥೆಗಳನ್ನಾಗಿ ಪರಿವರ್ತನೆ ಮಾಡದಿದ್ದರೆ ಮುಖ್ಯ ಕಚೇರಿಗೆ ಬರುವ ಭೌತಿಕ ಕಡತಗಳನ್ನು ಸ್ವೀಕಾರ ಮಾಡುವುದಿಲ್ಲ. ಸಿಬ್ಬಂದಿ ಇಲ್ಲ, ಕಂಪ್ಯೂಟರ್‌ ಇಲ್ಲ ಸೇರಿದಂತೆ ಇತರೆ ಸಬೂಬುಗಳನ್ನು ಹೇಳಬಾರದು. ಇದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. 

ಕಲಬುರಗಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್ ಕನಸು ಬಿತ್ತಿದ ಸಚಿವ ನಿರಾಣಿ

ಇಲ್ಲದಿದ್ದರೆ ಜಿಲ್ಲಾ ಮತ್ತು ತಾಲೂಕು ಮಟ್ಟದಿಂದ ಬರುವ ಭೌತಿಕ ಕಡತಗಳನ್ನು ಹಿಂದಕ್ಕೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಣ್ಣಪುಟ್ಟ ದೋಷಗಳನ್ನು ಮುಂದಿಟ್ಟುಕೊಂಡು ಕಡತ ವಿಲೇವಾರಿಯನ್ನು ವಿಳಂಬ ಮಾಡಬಾರದು. ಒಂದು ವೇಳೆ ವಿಳಂಬ ಮಾಡಿದರೆ ಉದ್ದಿಮೆದಾರರು ಕರ್ನಾಟಕಕ್ಕೆ ಬರಲು ಸಾಧ್ಯವೆ? ವಿಳಂಬವಾದಷ್ಟು ಉದ್ಯಮಿಗಳು ಬೇರೆ ರಾಜ್ಯದೆಡೆ ಗಮನಹರಿಸುತ್ತಾರೆ. ಇದಕ್ಕೆ ಅವಕಾಶ ನೀಡಬೇಡಿ. ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಉದ್ದೇಶಗಳಿಗೆ ಅನೇಕ ವರ್ಷಗಳಿಂದ ಜಮೀನು ಪಡೆದವರು ಅದನ್ನು ಸದ್ಬಳಕೆ ಮಾಡಿಕೊಂಡಿಲ್ಲ. 

ಈ ಬಗ್ಗೆ ಸಾಕಷ್ಟುದೂರುಗಳು ಬಂದಿದ್ದು, ಎಲ್ಲೆಲ್ಲಿ ಜಮೀನನ್ನು ಬಳಕೆ ಮಾಡಿಲ್ಲವೋ ಅದನ್ನು ತಕ್ಷಣವೇ ಆಡಿಟ್‌ ಮಾಡುವಂತೆ ನಿರ್ದೇಶನ ನೀಡಿದರು. ಸಭೆಯಲ್ಲಿ ಸಣ್ಣ ಕೈಗಾರಿಕಾ ಸಚಿವ ಎಂ.ಟಿ.ಬಿ.ನಾಗರಾಜ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ್ಣರೆಡ್ಡಿ, ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಭಿವೃದ್ಧಿ ಕಾಮಗಾರಿಗೆ ನಿರಾಣಿ ಚಾಲನೆ: ಭಾಗದಲ್ಲಿನ ವಿವಿಧ ರಸ್ತೆ ಅಭಿವೃದ್ದಿ ಹಾಗು ಡಾಂಬರೀಕರಣ ಕಾಮಗಾರಿಗಳಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಭೂಮಿಪೂಜೆ ನೆರವೇರಿಸಿದರು. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಬೆಂಗಳೂರು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್‌ ಇಲಾಖೆ ಯೋಜನಾ ವಿಭಾಗ ಬಾಗಲಕೋಟೆ, ನಮ್ಮ ಗ್ರಾಮ ನಮ್ಮ ರಸ್ತೆ ಹಂತ 4, ಶಾಸಕ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಖಜ್ಜಿಡೋಣಿ ಗ್ರಾಮದಲ್ಲಿ, .35 ಕೋಟಿ ಮೊತ್ತದಲ್ಲಿ ಖಜ್ಜಿಡೋಣಿಯಿಂದ ಕಲಾದಗಿ ಮುಖ್ಯ ಕೂಡು ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ, ಹಾಗೂ .11.7 ಕೋಟಿ ಮೊತ್ತದಲ್ಲಿ ಖಜ್ಜಿಡೋಣಿಯಿಂದ ಕಾಡರಕೊಪ್ಪ ಬಾಗಲಕೋಟೆ ತಾಲೂಕು ಸರಹದ್ದುವರೆಗೆ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. 

ಶಾಸಕರು ಅವರಾಗೇ ಬಂದಾಗ ಸುಮ್ಮನಿರಲು ಬಿಜೆಪಿ ಸನ್ಯಾಸಿ ಅಲ್ಲ: ಸಚಿವ ಮುರುಗೇಶ್‌ ನಿರಾಣಿ

ಇದೇ ಸಂದರ್ಭದಲ್ಲಿ .16.50 ಲಕ್ಷ ಮೊತ್ತದಲ್ಲಿ ಉದಗಟ್ಟಿಕೆರೆ ಬಳಿ ನಿರ್ಮಿಸಲಾಗಿರುವ ನೂತನ ಸ್ವಚ್ಛ ಸಂಕೀರ್ಣ ಘಟಕದ ಉದ್ಘಾಟನೆಯನ್ನು ಮಾಡಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ನಾರಾಯಣಾಸಾ ಬಾಂಡಗೆ, ಜಿಪಂ ಮಾಜಿ ಸದಸ್ಯ ಹೂವಪ್ಪ ರಾಠೋಡ, ಖಜ್ಜಿಡೋಣಿ ಗ್ರಾ.ಪಂ ಅಧ್ಯಕ್ಷ ಗುರುಪಾದಪ್ಪ ಕಲ್ಲೊಳ್ಳಿ, ಉಪಾಧ್ಯಕ್ಷ ಕಲಾವತಿ ಚಂದ್ರಪ್ಪ ಪಾಟೀಲ, ಮಾಜಿ ಉಪಾಧ್ಯಕ್ಷೆ, ಸದಸ್ಯೆ ಅಂಬಿಕಾ ಸಾಬನ್ನವರ್‌, ಸದಸ್ಯ ಪ್ರವೀಣ ಅರಕೇರಿ, ಮುದುಕಪ್ಪ ಕೆಂಜೋಡಿ, ಭಾರತೀ ಮಂಟೂರು, ರುಕ್ಮೀಣಿ ಶಿರೋಳ ಇನ್ನಿತರು ಇದ್ದರು.

Follow Us:
Download App:
  • android
  • ios