ಕೊರೋನಾ ಎಫೆಕ್ಟ್: ಇದೇ ಮೊದಲ ಬಾರಿಗೆ ಇ-ಲೋಕ ಅದಾಲತ್
ಕೊರೋನಾ ಹಿನ್ನೆಲೆಯಲ್ಲಿ ಕಕ್ಷಿದಾರರು ನ್ಯಾಯಾಲಯಗಳಿಗೆ ಬರುವ ಅಗತ್ಯವಿಲ್ಲ| ಮನೆಯಲ್ಲಿದ್ದು, ಅಥವಾ ತಮ್ಮ ವಕೀಲರ ಕಚೇರಿಗಳ ಮೂಲಕವೇ ಆನ್‌ಲೈನ್ ಕಲಾಪದಲ್ಲಿ ಭಾಗಿಯಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಬಹುದು| ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಇಚ್ಛಿಸುವ ಕಕ್ಷಿದಾರರು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು|
ಬೆಂಗಳೂರು(ಆ.29): ಕೊರೋನಾ ಕಾರಣ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ದೇಶದಲ್ಲಿ ಇದೇ ಮೊದಲ ಬಾರಿ ರಾಜ್ಯಾದ್ಯಂತ ಸೆ.19ರಂದು ಇ-ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಹೈಕೋರ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದಕುಮಾರ್, ಕೊರೋನಾ ಹಿನ್ನೆಲೆಯಲ್ಲಿ ಕಕ್ಷಿದಾರರು ನ್ಯಾಯಾಲಯಗಳಿಗೆ ಬರುವ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲಿದ್ದು, ಅಥವಾ ತಮ್ಮ ವಕೀಲರ ಕಚೇರಿಗಳ ಮೂಲಕವೇ ಆನ್‌ಲೈನ್ ಕಲಾಪದಲ್ಲಿ ಭಾಗಿಯಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಬಹುದು. ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಇಚ್ಛಿಸುವ ಕಕ್ಷಿದಾರರು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.
ಜಡ್ಜ್‌ಗೆ ಕೊರೋನಾ ಬರಲಿ: ವಕೀಲನಿಂದ ಶಾಪ!
ಇ-ಲೋಕ ಅದಾಲತ್ ನಡೆಸುವ ಸಂಬಂಧ ನಾಲ್ಕು ಸಭೆಗಳನ್ನು ನಡೆಸಿದ್ದೇವೆ. ವಕೀಲರ, ವಿಮಾ ಕಂಪೆನಿಗಳ ಹಿರಿಯ ಅಧಿಕಾರಿಗಳೊಂದಿದೆ ಚರ್ಚೆ ನಡೆಸಿದ್ದೇವೆ. ಅಪಘಾತ ಪ್ರಕರಣಗಳಲ್ಲಿ 8-10 ವರ್ಷಗಳ ಕಾಲ ಪರಿಹಾರ ಸಿಗದಿದ್ದರೆ ಸಂತ್ರಸ್ತರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಲೋಕ ಅದಾಲತ್ ಮೂಲಕ ಅಪಘಾತ ಪ್ರಕರಣಗಳು, ರಾಜಿ ಮೂಲಕ ಇತ್ಯರ್ಥಪಡಿಸಬಹುದಾದ ಹಣಕಾಸು, ಕೌಟುಂಬಿಕ, ಸಿವಿಲ್ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮುಂದಾಗಿದ್ದೇವೆ ಎಂದರು.
ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ನ್ಯಾ. ಅಲೋಕ್ ಆರಾಧೆ ಮಾತನಾಡಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮೂಲ ಉದ್ದೇಶ ಸರ್ವರಿಗೂ ನ್ಯಾಯ ಸಿಗಬೇಕು. ಜಾತಿ, ಧರ್ಮ, ವರ್ಗ, ಆರ್ಥಿಕ ಸ್ಥಿತಿ ಯಾವುದೇ ಇದ್ದರೂ ಜನತಾ ನ್ಯಾಯಾಲಯದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬುದೇ ಆಗಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಜನತಾ ನ್ಯಾಯಾಲಯಗಳಲ್ಲಿ ಸಂಧಾನ ನಡೆಸಲು ಮುಂದಾಗಿದೆ ಎಂದರು.