Asianet Suvarna News Asianet Suvarna News

ಕರಾವಳಿಯ ಶಿಕ್ಷಣ ಕ್ಯಾಂಪಸ್‌ಗಳ ಸುತ್ತಮುತ್ತ ಮಾದಕದ್ರವ್ಯ ಘಾಟು..!

ದ.ಕ.ಜಿಲ್ಲೆಯ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಶಿಕ್ಷಣ ಕೇಂದ್ರಗಳಿವೆ. ಈ ಶಿಕ್ಷಣ ಕೇಂದ್ರಗಳ ಕ್ಯಾಂಪಸ್‌ ವ್ಯಾಪ್ತಿಯಲ್ಲಿ ಮಾದಕ ದ್ರವ್ಯಗಳ ಅಡ್ಡೆ ಕಾರ್ಯಾಚರಿಸುತ್ತಿರುವುದು ಪೊಲೀಸ್‌ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿ ಶೈಕ್ಷಣಿಕ ಕ್ಯಾಂಪಸ್‌ಗಳು ಮಾದಕ ದ್ರವ್ಯಗಳ ಕಾರಸ್ಥಾನವಾಗುತ್ತಿರುವ ಆತಂಕ ಎದುರಾಗಿದೆ.

Drugs smoke around coastal education campuses at dakshina kannada rav
Author
First Published Jul 21, 2023, 12:51 PM IST

ವಿಶೇಷ ವರದಿ

ಮಂಗಳೂರು (ಜು.21) :  ಶಿಕ್ಷಣದ ಕಾಶಿ ಎಂದೇ ಕರೆಸಿಕೊಳ್ಳುತ್ತಿರುವ ಕರಾವಳಿ ಜಿಲ್ಲೆಯ ಕ್ಯಾಂಪಸ್‌ಗಳ ಸುತ್ತಮುತ್ತ ಈಗ ಅಮಲಿನ ಘಾಟು ಹಬ್ಬಲಾರಂಭಿಸಿದೆ. ಶಿಕ್ಷಣ ಪಡೆದು ಹೊರಬಂದು ಸಮಾಜಕ್ಕೆ ಆದರ್ಶರಾಗಬೇಕಾದ ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ಪದೇ ಪದೇ ಪೊಲೀಸ್‌ ಕಾರ್ಯಾಚರಣೆ ನಡೆಯುತ್ತಿದ್ದರೂ ಮಾದಕದ್ರವ್ಯ ಜಾಲ ಅಲ್ಲಲ್ಲಿ ಕಾಣಿಸುತ್ತಲೇ ಇರುವುದು ಇಲಾಖೆಗೂ ದೊಡ್ಡ ಸವಾಲಾಗಿದೆ. ಈಗ ಮಾದಕ ದ್ರವ್ಯಗಳ ಸಾಲಿಗೆ ಇ-ಸಿಗರೇಟ್‌ ಹಾಗೂ ಅಮಲು ಪದಾರ್ಥದ ಬಾಂಗ್‌ ಚಾಕಲೇಟ್‌ ಹೊಸ ಸೇರ್ಪಡೆಯಾಗಿದೆ.

ದ.ಕ.ಜಿಲ್ಲೆಯ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಶಿಕ್ಷಣ ಕೇಂದ್ರಗಳಿವೆ. ಈ ಶಿಕ್ಷಣ ಕೇಂದ್ರಗಳ ಕ್ಯಾಂಪಸ್‌ ವ್ಯಾಪ್ತಿಯಲ್ಲಿ ಮಾದಕ ದ್ರವ್ಯಗಳ ಅಡ್ಡೆ ಕಾರ್ಯಾಚರಿಸುತ್ತಿರುವುದು ಪೊಲೀಸ್‌ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿ ಶೈಕ್ಷಣಿಕ ಕ್ಯಾಂಪಸ್‌ಗಳು ಮಾದಕ ದ್ರವ್ಯಗಳ ಕಾರಸ್ಥಾನವಾಗುತ್ತಿರುವ ಆತಂಕ ಎದುರಾಗಿದೆ.

 

ದಕ್ಷಿಣ ಕನ್ನಡ: ಮಾದಕ ವಸ್ತು ಮಿಶ್ರಿತ 100 ಕೆ.ಜಿ.ಚಾಕೊಲೆಟ್‌ ವಶ

ಕಳೆದ ನಾಲ್ಕೈದು ವರ್ಷಗಳಿಂದ ಮಂಗಳೂರಿನಲ್ಲಿ ಮಾದಕದ್ರವ್ಯ ಜಾಲವನ್ನು ಪೊಲೀಸರು ಬೇಧಿಸಿದ್ದರು. ಮಾದಕದ್ರವ್ಯ ವ್ಯಸನಿಗಳ ಪತ್ತೆಹಚ್ಚಿ ಅದರ ಮೂಲ ಹುಡುಕುವಲ್ಲಿ ಸಾಕಷ್ಟುಶ್ರಮಿಸಿದ್ದರು. ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಮಾದಕದ್ರವ್ಯ ವಿರುದ್ಧ ಸಾಕಷ್ಟುಅರಿವು ಕಾರ್ಯಕ್ರಮ ನಡೆಸಿದ್ದರು. ಇಷ್ಟಾದರೂ ಮಾದಕದ್ರವ್ಯ ಪಿಡುಗು ಹಬ್ಬುತ್ತಲೇ ಇದ್ದು, ಶಾಲಾ ಕಾಲೇಜುಗಳನ್ನು ಟಾರ್ಗೆಟ್‌ ಆಗಿಯೇ ಅವ್ಯಾಹತವಾಗಿ ನಡೆಯುತ್ತಿದೆ.

ಅಂಗಡಿ, ಗೂಡಂಗಡಿಗಳೇ ಕಾರಸ್ಥಾನ:

ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ ಸುತ್ತಮುತ್ತ ಇರುವ ಅಂಗಡಿ, ಗೂಡಂಗಡಿಗಳೇ ಮಾದಕದ್ರವ್ಯಗಳ ಕಾರಸ್ಥಾನ ಎನ್ನುವುದು ಪೊಲೀಸ್‌ ಕಾರ್ಯಾಚರಣೆಯಿಂದ ಬಯಲಾಗಿದೆ. ಸಣ್ಣಪುಟ್ಟಅಂಗಡಿಗಳಲ್ಲೂ ಸುಲಭದಲ್ಲಿ ಸಿಗುತ್ತಿದ್ದ ಮಾದಕ ದ್ರವ್ಯಗಳು ಈಗ ದೊಡ್ಡ ಮಾಲ್‌ಗಳಿಗೂ ಹಬ್ಬಿದೆ. ಕ್ಯಾಂಪಸ್‌ ಆಸುಪಾಸಿನ ಅಂಗಡಿ, ಗೂಡಂಗಡಿಗಳಾದರೆ ವಿದ್ಯಾರ್ಥಿಗಳಿಗೂ ಇದು ಸುಲಭವಾಗುತ್ತಿದೆ.

ಶಾಲಾ ಕಾಲೇಜು ಕ್ಯಾಂಪಸ್‌ಗಳ ಸುತ್ತಮುತ್ತ ಮಾದಕವಸ್ತುಗಳಿಂದ ತೊಡಗಿ ಇ-ಸಿಗರೇಟ್‌ ವರೆಗೆ ಹೇರಳವಾಗಿ ಸಿಗುತ್ತಿವೆ. ಒಮ್ಮೆ ಬಳಸಿ ಬಿಸಾಡುವ ಇ-ಸಿಗರೇಟ್‌ಗಳಿಗೆ ವಿದ್ಯಾರ್ಥಿಗಳು ಮಾರುಹೋಗುತ್ತಿದ್ದಾರೆ. ಇದರಲ್ಲಿ ಅಮಲಿನ ಕರಾಮತ್ತು ಅಷ್ಟಾಗಿ ಇಲ್ಲದಿದ್ದರೂ ಇ-ಸಿಗರೇಟ್‌ ಸೇವನೆ ನಿಷೇಧಿಸಲಾಗಿದೆ. ನಗರದ ಲಾಲ್‌ಬಾಗ್‌ ಬಳಿಯ ಕಾಂಪ್ಲೆಕ್ಸ್‌ಗೆ ಕೆಲವು ತಿಂಗಳ ಹಿಂದೆ ದಾಳಿ ನಡೆಸಿದ ಪೊಲೀಸರು ಇ-ಸಿಗರೇಟ್‌ ಮಾರಾಟ ಪತ್ತೆಮಾಡಿ ಆರೋಪಿಗಳನ್ನು ಬಂಧಿಸಿದ್ದರು.

ಹೊಸ ಅಮಲು ಚಾಕಲೇಟ್‌ ಪ್ರವೇಶ:

ದ.ಕ. ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಸಾಲಿಗೆ ಈಗ ಹೊಸ ಅಮಲು ಪದಾರ್ಥ ಸೇರ್ಪಡೆಯಾಗಿದೆ. ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿರುವ ಬಾಂಗ್‌ ಹೆಸರಿನ ಚಾಕಲೇಟ್‌ ನಗರದ ಶಾಲಾ ಕಾಲೇಜು ಕ್ಯಾಂಪಸ್‌ಗಳಲ್ಲಿ ಪತ್ತೆಯಾಗಿದೆ. ಇದರ ಪೇಯವನ್ನು ಉತ್ತರ ಭಾರತದಲ್ಲಿ ಸಮುದಾಯವೊಂದು ಬಳಕೆ ಮಾಡುತ್ತಿದ್ದು, ಇದನ್ನು ಮಾದಕ ವಸ್ತುವಾಗಿಯೂ ಬಳಸಲಾಗುತ್ತದೆ. ಈ ಮಾದಕ ವಸ್ತುವಿನ ಬಾಂಗ್‌ ಚಾಕಲೇಟ್‌ ಸೇವಿಸಿದರೆ, 48 ಗಂಟೆಗಳ ಅಮಲು ಕೊಡಬಲ್ಲದು, ವಿದ್ಯಾರ್ಥಿಗಳ ಪಾಲಿಗೆ ಇದು ಮಾರಕವಾಗಿದ್ದು, ಯುವಪೀಳಿಗೆಯನ್ನು ಅಮಲಿನತ್ತ ಪ್ರೇರೇಪಿಸುತ್ತದೆ. ಹೆಚ್ಚಾಗಿ ಯುವಕರು ಮಾತ್ರವಲ್ಲ, ಯುವತಿಯರೂ ಈ ಚಾಕಲೇಟ್‌ಗೆ ಮಾರುಹೋಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸ್ಥಳೀಯರಲ್ಲದ, ಹೊರಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಅದರಲ್ಲೂ ಕೆಲವು ಹಾಸ್ಟೆಲ್‌ ವಿದ್ಯಾರ್ಥಿಗಳು ಮಾದದ್ರವ್ಯದ ದಾಸರಾಗುತ್ತಿರುವುದು ಶೋಚನೀಯವಾಗಿದೆ. ಮಂಗಳೂರಿನ ಎರಡು ಕಡೆಗಳಲ್ಲಿ ಸುಮಾರು 100 ಕೇಜಿಗೂ ಅಧಿಕ ಅಮಲು ಬಾಂಗ್‌ ಚಾಕಲೇಟ್‌ನ್ನು ಪೊಲೀಸರು ವಶಪಡಿಸಿದ್ದಾರೆ. ಚಾಕಲೇಟ್‌ಗೆ ಬೆರೆತ ಮಾದಕವಸ್ತು ಪತ್ತೆಗಾಗಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಾದಕದ್ರವ್ಯಗಳ ಮೂಲ ಪತ್ತೆ ಯಾಕಾಗುತ್ತಿಲ್ಲ?

ಪ್ರತಿ ಬಾರಿ ಪೊಲೀಸರು ಕಾರ್ಯಾಚರಣೆ ಮೂಲಕ ಮಾದಕದ್ರವ್ಯ ವ್ಯಸನಿಗಳು, ಪೂರೈಕೆದಾರರನ್ನು ಪತ್ತೆ ಮಾಡುತ್ತಾರೆ. ಆದರೆ ಅದರ ಮೂಲ ಎಲ್ಲಿ ಎಂಬುದನ್ನು ಪತ್ತೆಹಚ್ಚುವಲ್ಲಿ ಯಶಸ್ಸು ಕಾಣದಿರುವುದೇ ದುರಂತ.

ಹೀಗಾಗಿ ಪೊಲೀಸ್‌ ಇಲಾಖೆ ಶಿಕ್ಷಣ ಸಂಸ್ಥೆಗಳು ಹಾಗೂ ಯುವಜನತೆಯಲ್ಲಿ ಮಾದಕದ್ರವ್ಯ ವಿರುದ್ಧ ಎಷ್ಟೇ ಅರಿವು ಕಾರ್ಯಕ್ರಮ ನಡೆಸಿದರೂ ಇತ್ತ ಅದರ ಮೂಲ ಪತ್ತೆಮಾಡಿ ನಾಶ ಮಾಡದಿದ್ದರೆ ಅದು ಮತ್ತೆ ಮತ್ತೆ ಚಿಗುರಿ ನಾಗರಿಕ ಸಮಾಜಕ್ಕೆ ಸವಾಲು ಹಾಕುತ್ತಲೇ ಇರುತ್ತದೆ. ಮಾದಕದ್ರವ್ಯ ಪೂರೈಕೆಯ ಜಾಲ ಬೇಧಿಸುವ ಪೊಲೀಸರಿಗೆ ಅದರ ಮೂಲಕ್ಕೆ ಕೈಹಾಕುವುದು ಕಷ್ಟದ ಕೆಲಸವೇನಲ್ಲ. ಮೂಲವನ್ನೇ ನಾಶಮಾಡಿ ಬಿಟ್ಟರೆ, ಪೂರೈಕೆ, ಸೇವಿಸುವಿಕೆಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ. ಪ್ರತಿ ಸಂದರ್ಭಗಳಲ್ಲೂ ಪೊಲೀಸರ ಕಾರ್ಯಾಚರಣೆ ವ್ಯಸನಿಗಳು ಹಾಗೂ ಪೂರೈಕೆದಾರರ ಪತ್ತೆಗೆ ಮಾತ್ರ ಸೀಮಿತವಾಗುತ್ತಿರುವುದು ಖೇದಕರ ವಿಚಾರ.

 

ಡಿಕ್ಷನರಿ ಒಳಗೆ ಡ್ರಗ್‌್ಸ ಬಚ್ಚಿಟ್ಟು ಪೂರೈಸುತ್ತಿದ್ದ ವಿದೇಶಿಗ

ಕೋಟ್ಪಾ ಸೇರಿದಂತೆ ವಿವಿಧ ಕಾಯ್ದೆಯಡಿ ಮಾದಕದ್ರವ್ಯ ಪ್ರಕರಣಗಳನ್ನು ಪತ್ತೆ ಮಾಡಿ ಕೇಸು ದಾಖಲಿಸಲಾಗುತ್ತಿದೆ. ಮುಖ್ಯವಾಗಿ ಶಾಲಾ ಕಾಲೇಜುಗಳ 100 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಮಂಗಳೂರಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ 800ರಷ್ಟುಅಂಗಡಿ, ಗೂಡಂಗಡಿಗಳಿಗೆ ಕಾರ್ಯಾಚರಣೆ ನಡೆಸಲಾಗಿದೆ. ಇಂತಹ ಕಾರ್ಯಾಚರಣೆ ಮುಂದುವರಿಯುತ್ತಲೇ ಇರುತ್ತದೆ. ಯಾವುದೇ ಮಾದಕದ್ರವ್ಯ ಮಾರಾಟದ ಬಗ್ಗೆ ಮಾಹಿತಿ ಇದ್ದರೆ ಖದ್ದು ಪೊಲೀಸರಿಗೆ ಗೌಪ್ಯವಾಗಿ ಮಾಹಿತಿ ನೀಡುವಂತೆ ನಾಗರಿಕನ್ನು ವಿನಂತಿಸುತ್ತೇನೆ.

-ಕುಲದೀಪ್‌ ಕುಮಾರ್‌ ಜೈನ್‌, ಪೊಲೀಸ್‌ ಕಮಿಷನರ್‌, ಮಂಗಳೂರು

Follow Us:
Download App:
  • android
  • ios