ಡ್ರಗ್ಸ್ ತಯಾರಿಕಾ ಘಟಕಗಳ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ ಪತ್ತೆ ಹಚ್ಚಿರುವುದು ರಾಜ್ಯ ಪೊಲೀಸರ ವೈಫಲ್ಯ ಎತ್ತಿ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ಸೂಚಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಕಾರ್ಯಾಚರಿಸುತ್ತಿದ್ದ ಡ್ರಗ್ಸ್ ತಯಾರಿಕಾ ಘಟಕಗಳ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ ಪತ್ತೆ ಹಚ್ಚಿರುವುದು ರಾಜ್ಯ ಪೊಲೀಸರ ವೈಫಲ್ಯ ಎತ್ತಿ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ಸೂಚಿಸಿದ್ದಾರೆ.
ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಎರಡು ದಿನಗಳ ‘ಹಿರಿಯ ಅಧಿಕಾರಿಗಳ ವಾರ್ಷಿಕ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಹಾಗೂ ಮೈಸೂರಿನ ಡ್ರಗ್ಸ್ ತಯಾರಿಕಾ ಘಟಕಗಳ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ ಪತ್ತೆ ಹಚ್ಚಿದ್ದರು. ಇದು ಕರ್ನಾಟಕ ಪೊಲೀಸರ ವೈಫಲ್ಯವನ್ನು ತೋರಿಸುತ್ತದೆ. ಈ ಡ್ರಗ್ಸ್ ತಯಾರಿಕಾ ಘಟಕಗಳ ಬಗ್ಗೆ ಯಾಕೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರಲಿಲ್ಲ? ನಮ್ಮ ಪೊಲೀಸರು ಏನು ಮಾಡುತ್ತಿದ್ದರು ಎಂದು ಖಾರವಾಗಿ ಪ್ರಶ್ನಿಸಿದರು.
ಬಂಧಿಸಿದರೆ ಸಾಲದು:
ರಾಜ್ಯ ಸರ್ಕಾರ ‘ಡ್ರಗ್ಸ್ ಮುಕ್ತ ರಾಜ್ಯ’ವನ್ನಾಗಿಸುವ ಪಣ ತೊಟ್ಟಿದೆ. ಪೆಡ್ಲರ್‌ಗಳನ್ನು ಬಂಧಿಸಿದರೆ ಸಾಲದು ಮಾದಕ ವಸ್ತು ಮಾರಾಟ ಜಾಲದ ಮೂಲ ಬೇರು ಕತ್ತರಿಸುವ ಕಡೆಗೆ ಪೊಲೀಸರು ಲಕ್ಷ್ಯವಹಿಸಬೇಕು. ಡ್ರಗ್ಸ್ ಮಾಫಿಯಾದಲ್ಲಿ ವಿದೇಶಿಯರು ಪಾಲ್ಗೊಂಡಿದ್ದರೆ ಮುಲಾಜಿಲ್ಲದೆ ಗಡಿಪಾರು ಮಾಡುವಂತೆ ಸೂಚಿಸಿದರು.
ಗಂಭೀರ ಕೇಸ್ ದಾಖಲಿಸಲು ಕಾನೂನು:
ಸೈಬರ್ ವಂಚಕರ ವಿರುದ್ಧ ಕೊಲೆಯಂತಹ ಗಂಭೀರ ಸ್ವರೂಪದ ಪ್ರಕರಣ ದಾಖಲಿಸುವ ಕಾನೂನು ರೂಪಿಸಲು ಚಿಂತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಳೆದ ಮೂರು ವರ್ಷಗಳಿಂದ ದರೋಡೆ, ಸುಲಿಗೆ ಹಾಗೂ ಮನೆಗಳ್ಳತನ ಕೃತ್ಯಗಳು ಕಡಿಮೆಯಾಗುತ್ತಿವೆ. ಆದರೆ ಸೈಬರ್ ವಂಚನೆ ಕೃತ್ಯಗಳ ಹೆಚ್ಚಳ ಆತಂಕಕಾರಿ. ಹೊಸ ತಾಂತ್ರಿಕ ಯುಗದ ಅಪರಾಧವಾಗಿರುವ ಸೈಬರ್ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ. ಸೈಬರ್ ವಂಚನೆ ಎಸಗುವ ಕ್ರಿಮಿನಲ್‌ಗಳ ವಿರುದ್ಧ ಕೊಲೆಯಂತಹ ಗಂಭೀರ ಸ್ವರೂಪದ ಪ್ರಕರಣ ದಾಖಲಿಸುವ ಕಾಯ್ದೆ ರೂಪಿಸುವ ಅಗತ್ಯವಿದೆ ಎಂದರು.
ಪೊಲೀಸರ ವಿರುದ್ಧ 88 ಕ್ರಿಮಿನಲ್ ಕೇಸ್:
ಕಳೆದ ವರ್ಷ ಪೊಲೀಸರ ವಿರುದ್ಧ 88 ಅಪರಾಧ ಪ್ರಕರಣಗಳು ದಾಖಲಾಗಿರುವುದು ಕಳವಳ ಮೂಡಿಸುತ್ತದೆ. ಜನರನ್ನು ರಕ್ಷಿಸಬೇಕಾದ ಪೊಲೀಸರೇ ಕ್ರಿಮಿನಲ್‌ಗಳಾದರೆ ಹೇಗೆ? ಕಾಯುವವರೇ ಭಕ್ಷಕರಾದರೇ? ಇದೂ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತಾಗಿದೆ. ಪೊಲೀಸರು ನಡವಳಿಕೆ ಬದಲಾಯಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಪಿಎಸ್‌ಐ, ಇನ್ಸ್‌ಪೆಕ್ಟರ್, ಡಿವೈಎಸ್ಪಿ-ಎಸಿಪಿಗಳಿಗೆ ಗೊತ್ತಿಲ್ಲದೆ ಸ್ಥಳೀಯವಾಗಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯಲು ಸಾಧ್ಯವಿಲ್ಲ. ಪದೇ ಪದೇ ಈ ಬಗ್ಗೆ ಹೇಳಿದರೂ ಕೆಲವರು ಬದಲಾಗುತ್ತಿಲ್ಲ. ಸ್ಥಳೀಯ ಹಂತದ ಅಧಿಕಾರಿಗಳ ಮೇಲೆ ಎಸ್ಪಿಗಳು ನಿಗಾವಹಿಸಬೇಕು. ಶೋಷಿತರ ಪರವಾಗಿ ಪೊಲೀಸರ ದನಿಯಾಗಬೇಕು, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದರೆ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಹಾಗೂ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಕಾವೇರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜೀವ್ ಗೌಡ ವಿರುದ್ಧ ಕ್ರಮ: ಸಿಎಂ
ಶಿಡ್ಲಘಟ್ಟದ ಪೌರಾಯುಕ್ತೆ ನಿಂದನೆ ಪ್ರಕರಣದ ಆರೋಪಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ತಪ್ಪು ಮಾಡಿದವರನ್ನು ರಕ್ಷಿಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಿಐಡಿ ವರದಿ ಬಳಿಕ ಕ್ರಮ
ಬಳ್ಳಾರಿ ರಾಜಕೀಯ ಘರ್ಷಣೆ ಸಂಬಂಧ ಅಜಾಗರೂಕತೆ ಕಾರಣಕ್ಕೆ ಎಸ್ಪಿ ಅವರನ್ನು ಅಮಾನತುಗೊಳಿಸಲಾಗಿದೆ. ಪಿಎಸ್‌ಐ, ಪಿಐ ಸೇರಿ ಕೆಳಹಂತದ ಅಧಿಕಾರಿ-ಸಿಬ್ಬಂದಿ ವಿರುದ್ಧ ಸಿಐಡಿ ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮ್ಯ ಹೇಳಿದರು.
ಸೈಬರ್ ವಂಚನೆಗೆ ಕೊಲೆಕೇಸ್ ರೀತಿ ಶಿಕ್ಷೆಗೆ ಕಾಯ್ದೆ
ಕಳೆದ 3 ವರ್ಷಗಳಿಂದ ದರೋಡೆ, ಸುಲಿಗೆ, ಮನೆಗಳ್ಳತನ ಕಡಿಮೆಯಾಗುತ್ತಿವೆ. ಆದರೆ ಸೈಬರ್ ವಂಚನೆ ಕೃತ್ಯ ಹೆಚ್ಚಾಗುತ್ತಿವೆ. ಸೈಬರ್ ವಂಚಕರ ವಿರುದ್ಧ ಕೊಲೆಯಂತಹ ಗಂಭೀರ ಸ್ವರೂಪದ ಪ್ರಕರಣ ದಾಖಲಿಸುವ ಕಾನೂನು ರೂಪಿಸಲು ಚಿಂತನೆ ನಡೆಸಲಾಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿ


