ಡ್ರಗ್ಸ್, ಡಿಜೆ ಹಳ್ಳಿ ಗಲಭೆ: ಜಡ್ಜ್, ಪೊಲೀಸ್‌ಗೆ ‘ಸ್ಫೋಟಕ’ ಬೆದರಿಕೆ!
ಜಡ್ಜ್, ಪೊಲೀಸ್‌ಗೆ ‘ಸ್ಫೋಟಕ’ ಬೆದರಿಕೆ!| ಡ್ರಗ್ಸ್, ಡಿ.ಜೆ.ಹಳ್ಳಿ ಗಲಭೆ ಕೇಸ್| ರಾಗಿಣಿ, ಸಂಜನಾ ಮತ್ತಿತರರನ್ನು ಬಿಡುಗಡೆ ಮಾಡಿ| ಬೆಂಗ್ಳೂರು ಗಲಭೆಕೋರರನ್ನೂ ಬಂಧಮುಕ್ತಗೊಳಿಸಿ| ಇಲ್ಲವಾದಲ್ಲಿ ನಿಮ್ಮ ಕಾರು ಸ್ಫೋಟಿಸುತ್ತೇವೆ: ಬೆದರಿಕೆ
ಬೆಂಗಳೂರು(ಅ.20): ಮಾದಕ ವಸ್ತು ಮಾರಾಟ ಜಾಲದ ಆರೋಪಿಗಳಾದ ಕನ್ನಡ ಚಲನಚಿತ್ರ ನಟಿಯರು ಹಾಗೂ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ದೊಂಬಿಕೋರರ ಬಿಡುಗಡೆಗೆ ಆಗ್ರಹಿಸಿ ಎನ್‌ಡಿಪಿಎಸ್ ನ್ಯಾಯಾಲಯದ ನ್ಯಾಯಾಧೀಶರು, ಪೊಲೀಸ್ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಪುಟ್ಟಗಾತ್ರದ ಸ್ಫೋಟಕ ವಸ್ತು ಸಮೇತ ಕಿಡಿಗೇಡಿಗಳು ಪತ್ರ ಕಳುಹಿಸಿ ಬೆದರಿಸಿದ್ದಾರೆ.
ನಗರದ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಸೀನಪ್ಪ, ಆಯುಕ್ತ ಕಮಲ್ ಪಂತ್ ಹಾಗೂ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರ ಹೆಸರಿಗೆ ತುಮಕೂರಿನಿಂದ ಅಂಚೆ ಮೂಲಕ ಅನಾಮಧೇಯ ಹೆಸರಿನಲ್ಲಿ ಬೆದರಿಕೆ ಪತ್ರಗಳು ಬಂದಿವೆ.
ಆ ಪತ್ರಗಳನ್ನು ಶನಿವಾರವೇ ಓದಿದ ಆಯುಕ್ತರು, ಪತ್ರದ ಮೂಲದ ಪತ್ತೆಗೆ ಸೂಚಿಸಿದ್ದಾರೆ. ಇತ್ತ ನ್ಯಾಯಾಧೀಶರ ಕಚೇರಿ ಸಿಬ್ಬಂದಿ ಪತ್ರವನ್ನು ಸೋಮವಾರ ಪರಿಶೀಲಿಸಿದಾಗ ಅದರಲ್ಲಿ ಸ್ಫೋಟಕ ರೀತಿಯ ವಸ್ತು ಕಂಡು ಭೀತಿಗೊಂಡಿದ್ದಾರೆ. ಕೂಡಲೇ ಮಾಹಿತಿ ಪಡೆದ ಪೊಲೀಸರು, ಪತ್ರ ಹಾಗೂ ಸ್ಫೋಟಕ ರೀತಿಯ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಈಗ ಪತ್ರ ಬರೆದ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕುಚೋದ್ಯತನ ಶಂಕೆ:
ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ 421 ಆರೋಪಿಗಳ ಬಂಧನವಾಗಿದೆ. ಅದೇ ರೀತಿ ಮಾದಕ ವಸ್ತು ಮಾರಾಟ ಜಾಲದ ನಂಟು ಪ್ರಕರಣದಲ್ಲಿ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸೇರಿದಂತೆ 16 ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ಎರಡು ಪ್ರಕಣಗಳನ್ನು ಸಿಸಿಬಿ ತನಿಖೆ ನಡೆಸುತ್ತಿದ್ದು, ಡ್ರಗ್ಸ್ ಪ್ರಕರಣದ ಬಗ್ಗೆ ವಿಶೇಷ ಮಾದಕ ವಸ್ತು ನ್ಯಾಯಾಲಯ (ಎನ್‌ಡಿಪಿಎಸ್)ದಲ್ಲಿ ವಿಚಾರಣೆ ನಡೆದಿದೆ. ಇತ್ತ ಡ್ರಗ್ಸ್ ಕೇಸಿನಲ್ಲಿ ನಟಿಯರ ಜಾಮೀನು ಅರ್ಜಿಗಳÜು್ನ ನ್ಯಾಯಾಲಯವು ತಿರಸ್ಕರಿಸಿದೆ. ಈ ಎರಡೂ ಪ್ರಕರಣಗಳು ಭಿನ್ನವಾಗಿವೆ. ಹಾಗಾಗಿ ಈ ಕೃತ್ಯಗಳನ್ನು ಮುಂದಿಟ್ಟು ಪತ್ರ ಬರೆದಿರುವುದರ ಹಿಂದೆ ಕೇವಲ ಕುಚೋದ್ಯತನವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನ್ಯಾಯಾಧೀಶರು, ಆಯುಕ್ತರು ಹಾಗೂ ಜಂಟಿ ಆಯುಕ್ತರ ಹೆಸರಿಗೆ ಶನಿವಾರ ಅಂಚೆ ಮೂಲಕ ಪತ್ರಗಳು ಬಂದಿವೆ. ಆ ಪತ್ರದೊಳಗೆ ಸಣ್ಣ ಗಾತ್ರದ ಸ್ಫೋಟಕ ವಸ್ತು ಇತ್ತು. ಆದರೆ ಅದು ಸಿಡಿಯುವಂತಹ ಅಥವಾ ಗಾಬರಿಪಡಿಸುವಂತಹ ವಸ್ತುವಾಗಿರಲಿಲ್ಲ. ‘ಗಲಭೆ ಹಾಗೂ ಮಾದಕ ವಸ್ತು ಪ್ರಕರಣದ ಆರೋಪಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದೆ ಹೋದರೆ ನಿಮ್ಮ ಕಾರುಗಳನ್ನು ಸ್ಫೋಟಿಸುತ್ತೇವೆ’ ಎಂದು ಕನ್ನಡದಲ್ಲಿ ಬರೆಯಲಾಗಿತ್ತು. ಈ ಪತ್ರ ಪರಿಶೀಲಿಸಿದಾಗ ತುಮಕೂರು ಅಂಚೆ ಕಚೇರಿ ಸೀಲ್ ಇದೆ. ಹಾಗಾಗಿ ತುಮಕೂರು ಕಡೆಯಿಂದಲೇ ಪತ್ರ ಕಳುಹಿಸಿರುವ ಸಾಧ್ಯತೆಗಳಿವೆ. ಈಗ ಎನ್‌ಡಿಪಿಎಸ್ ನ್ಯಾಯಾಲಯದ ಕಚೇರಿ ದೂರಿನ ಮೇರೆಗೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪತ್ರದಲ್ಲಿದ್ದುದು ಸಣ್ಣ ಗಾತ್ರದ ಸ್ಫೋಟಕ ವಸ್ತು ಅಷ್ಟೆ. ವೈರ್‌ಗಳಿಂದ ಸುತ್ತಿ ಸ್ಫೋಟಕ ವಸ್ತುವನ್ನು ಇಡಲಾಗಿತ್ತು, ಸ್ಫೋಟಕವನ್ನು ಸಿಡಿಸಲು ಸಜ್ಜುಗೊಳಿಸಲಾಗಿತ್ತು ಎಂಬುದೆಲ್ಲ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಆ ಸ್ಫೋಟಕ ವಸ್ತುವನ್ನು ವಿಧಿವಿಜ್ಞಾನ ಪ್ರಯೋಗಾಲಯದ ಪರಿಶೀಲನೆಗೆ ಸಹ ಕಳುಹಿಸಲಾಗಿದೆ. ಪ್ರಕರಣದ ತನಿಖೆ ಮತ್ತು ವಿಚಾರಣೆಯ ದಿಕ್ಕು ತಪ್ಪಿಸುವ ಸಲುವಾಗಿ ಕೆಲವರು ಈ ಕಿಡಿಗೇಡಿ ಕೃತ್ಯ ಎಸಗಿರಬಹುದು. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎನ್‌ಡಿಪಿಎಸ್ ನ್ಯಾಯಾಲಯದ ನ್ಯಾಯಾಧೀಶರು, ಆಯುಕ್ತರು ಹಾಗೂ ನನಗೆ ಬೆದರಿಕೆ ಪತ್ರಗಳು ಬಂದಿದ್ದವು. ಈ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- ಸಂದೀಪ್ ಪಾಟೀಲ್, ಜಂಟಿ ಆಯುಕ್ತ (ಅಪರಾಧ)
ಆಗಿದ್ದೇನು?
- ಬೆಂಗಳೂರಿನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸೀನಪ್ಪ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಸರಿಗೆ ಪತ್ರ
- ತುಮಕೂರಿನಿಂದ ಅಂಚೆ ಮೂಲಕ ಬಂದ ಅನಾಮಧೇಯ ಹೆಸರಿನಲ್ಲಿ ಬೆದರಿಕೆ ಪತ್ರ
- ಜತೆಗೆ, ಪುಟ್ಟಗಾತ್ರದ ಸ್ಫೋಟಕ ರೀತಿಯ ವಸ್ತುಗಳನ್ನೂ ಕಳುಹಿಸಿದ ದುಷ್ಕರ್ಮಿಗಳು
- ಇದನ್ನು ಕಂಡು ಬೆದರಿದ ನ್ಯಾಯಾಲಯ ಸಿಬ್ಬಂದಿಯಿಂದ ಪೊಲೀಸರಿಗೆ ಮಾಹಿತಿ
- ಪತ್ರ, ಸ್ಫೋಟಕ ರೀತಿಯ ವಸ್ತು ಜಪ್ತಿಗೊಳಿಸಿದ ಪೊಲೀಸರಿಂದ ದುಷ್ಕರ್ಮಿಗಳಿಗೆ ಬೇಟೆ