ರಾಜ್ಯದಲ್ಲಿ ಆ.19ರವರೆಗೆ ನಡೆದ ಸಮೀಕ್ಷೆಯ ಪ್ರಕಾರ ಕೇಂದ್ರದ ಮಾನದಂಡಗಳ ಅನುಸಾರ 62 ತಾಲೂಕುಗಳು ಮಾತ್ರ ಬರ ತಾಲೂಕುಗಳೆಂದು ಘೋಷಿಸಲು ಅರ್ಹವಾಗಿವೆ. ಹೀಗಾಗಿ, ಆಗಸ್ಟ್‌ನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರದ ಛಾಯೆ ಇರುವ ಬೇರೆ ಬೇರೆ 134 ತಾಲೂಕುಗಳಲ್ಲಿ ಇನ್ನೊಂದು ವಾರದೊಳಗೆ ಮತ್ತೆ ಸಮೀಕ್ಷೆ ನಡೆಸಿ ನಂತರ ಒಟ್ಟು ಬರ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸಲು ಸಚಿವ ಸಂಪುಟ ಉಪ ಸಮಿತಿ ಸಭೆ ತೀರ್ಮಾನಿಸಿದೆ.

ಬೆಂಗಳೂರು (ಸೆ.5) : ರಾಜ್ಯದಲ್ಲಿ ಆ.19ರವರೆಗೆ ನಡೆದ ಸಮೀಕ್ಷೆಯ ಪ್ರಕಾರ ಕೇಂದ್ರದ ಮಾನದಂಡಗಳ ಅನುಸಾರ 62 ತಾಲೂಕುಗಳು ಮಾತ್ರ ಬರ ತಾಲೂಕುಗಳೆಂದು ಘೋಷಿಸಲು ಅರ್ಹವಾಗಿವೆ. ಹೀಗಾಗಿ, ಆಗಸ್ಟ್‌ನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರದ ಛಾಯೆ ಇರುವ ಬೇರೆ ಬೇರೆ 134 ತಾಲೂಕುಗಳಲ್ಲಿ ಇನ್ನೊಂದು ವಾರದೊಳಗೆ ಮತ್ತೆ ಸಮೀಕ್ಷೆ ನಡೆಸಿ ನಂತರ ಒಟ್ಟು ಬರ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸಲು ಸಚಿವ ಸಂಪುಟ ಉಪ ಸಮಿತಿ ಸಭೆ ತೀರ್ಮಾನಿಸಿದೆ.

ತನ್ಮೂಲಕ ಸೋಮವಾರ ಬರ ತಾಲೂಕುಗಳ ಪಟ್ಟಿಪ್ರಕಟವಾಗುವ ನಿರೀಕ್ಷೆ ಹುಸಿಯಾಗಿದೆ. ಮತ್ತೊಮ್ಮೆ ಸಮೀಕ್ಷೆ ನಡೆಸಿದ ನಂತರವೇ ಅಂತಿಮವಾಗಿ ಬರ ಪೀಡಿತ ತಾಲೂಕುಗಳ ಪಟ್ಟಿಬಿಡುಗಡೆಯಾಗಲಿದೆ.

ಕರ್ನಾಟಕದ 134 ತಾಲೂಕುಗಳ ಬರಪೀಡಿತ, ಜಂಟಿ ಸಮೀಕ್ಷೆ ಬಳಿಕ ಅಧಿಕೃತ ಘೋಷಣೆ

ಪ್ರಕೃತಿ ವಿಕೋಪದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಾಮರ್ಶಿಸಲು ಸೋಮವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಮಾಹಿತಿ ನೀಡಿದರು.

ಬರ ಪರಿಸ್ಥಿತಿ ಬಗ್ಗೆ ನಿಗಾ ಮತ್ತು ನಿರ್ವಹಣೆಗಾಗಿ ಸರ್ಕಾರ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯು ಈವರೆಗೆ ಮೂರು ಬಾರಿ ಸಭೆ ನಡೆಸಿ ಬರ ಪರಿಸ್ಥಿತಿಯನ್ನು ಅವಲೋಕಿಸಿದೆ. ಆಗಸ್ಟ್‌ 19ರವರೆಗೆ ಬರ ಪರಿಸ್ಥಿತಿ ಕಂಡು ಬಂದಿದ್ದ 113 ತಾಲೂಕುಗಳಲ್ಲಿ ಕೇಂದ್ರದ ಮಾನದಂಡಗಳಾದ ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆ, ಸತತ 3 ವಾರ ಶುಷ್ಕ ವಾತಾವರಣ ಇರುವುದು ಸೇರಿ ಇತರೆ ಅಂಶಗಳನ್ನು ಅನುಸರಿಸಿ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ (ಬೆಳೆ ಸಮೀಕ್ಷೆ) ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಸಮೀಕ್ಷಾ ವರದಿಯಲ್ಲಿ 113 ತಾಲೂಕುಗಳ ಪೈಕಿ 62 ತಾಲೂಕುಗಳು ಮಾತ್ರ ಬರ ಎಂದು ಘೋಷಿಸಲು ಅರ್ಹತೆ ಪಡೆದಿವೆ ಎಂದು ತಿಳಿಸಿದರು.

ಆದರೆ, ಈ ಸಮೀಕ್ಷೆಯ ನಂತರ ಬರ ಘೋಷಣೆಗೆ ಅರ್ಹವಾಗಿರುವ 62 ತಾಲೂಕುಗಳನ್ನು ಹೊರತುಪಡಿಸಿ ಉಳಿದ 51 ತಾಲೂಕುಗಳಲ್ಲೂ ಮಳೆ ಕೊರತೆಯಿಂದ ಸಾಕಷ್ಟುಬೆಳೆಯ ನಷ್ಟವಾಗಿದ್ದು, ಆ ತಾಲೂಕುಗಳಲ್ಲಿ ಮತ್ತೊಮ್ಮೆ ಸಮೀಕ್ಷೆಯಾಗಬೇಕೆಂದು ರೈತ ಸಂಘಟನೆಗಳು, ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಕೃಷಿ ಸಚಿವರು ಕೂಡ 62 ತಾಲೂಕುಗಳ ಅರ್ಹತೆಗೆ ಸಮಾಧಾನ ಹೊಂದಿಲ್ಲ. ಇದರ ಜೊತೆಗೆ ಆಗಸ್ಟ್‌ ತಿಂಗಳಲ್ಲಿ ಶೇ.73ರಷ್ಟುಮಳೆ ಕೊರತೆಯಾಗಿರುವುದರಿಂದ ಇನ್ನೂ 83 ಹೆಚ್ಚುವರಿ ತಾಲೂಕುಗಳಲ್ಲೂ ಬರದ ಛಾಯೆ ಕಂಡುಬಂದಿದೆ. ಹಾಗಾಗಿ ಈ 83 ತಾಲೂಕುಗಳ ಜೊತೆಗೆ ಮೊದಲ ಹಂತದ ಸಮೀಕ್ಷೆಯಲ್ಲಿ ಬರ ವ್ಯಾಪ್ತಿಗೆ ಅರ್ಹವಾಗದ 51 ತಾಲೂಕುಗಳನ್ನು ಸೇರಿಸಿ ಒಟ್ಟು 134 ತಾಲೂಕುಗಳಲ್ಲಿ ಇನ್ನೊಂದು ವಾರದಲ್ಲಿ ಮತ್ತೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವರದಿ ಬಂದ ಬಳಿಕ ಒಟ್ಟಾರೆಯಾಗಿ ರಾಜ್ಯದಲ್ಲಿ ಬರದ ತಾಲೂಕುಗಳೆಷ್ಟುಎಂಬುದನ್ನು ಒಟ್ಟಿಗೆ ಘೋಷಿಸಿ ಕೇಂದ್ರ ಸರ್ಕಾರದ ನೆರವಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಬರ ಘೋಷಣೆಯಾದ ದಿನದಿಂದ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್‌್ಕ ಫೋರ್ಸ್‌ ರಚಿಸುವುದು. ಕುಡಿಯುವ ನೀರಿನ ಸಮಸ್ಯೆ ಇರುವ ವಸತಿ ಪ್ರದೇಶಗಳಿಗೆ ಟ್ಯಾಂಕರ್‌ ಅಥವಾ ಬಾಡಿಗೆ ಬೋರ್‌ವೆಲ್‌ ಮೂಲಕ ನೀರು ಪೂರೈಕೆಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ ಮುಖಾಂತರ ವೆಚ್ಚ ಭರಿಸಲು ಸಮಿತಿ ಅನುಮತಿಸಿದೆ ಎಂದು ಸಚಿವರು ತಿಳಿಸಿದರು. 

ಕೋಲಾರದಲ್ಲಿ ಬತ್ತುತ್ತಿವೆ ಕೆರೆ, ಬಾವಿಗಳು: ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ರೈತರ ಆಗ್ರಹ

ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಉಪಸ್ಥಿತರಿದ್ದರು.