Asianet Suvarna News Asianet Suvarna News

ಶೀಘ್ರ ರೈತರಿಗೆ ಬರಗಾಲ ಪರಿಹಾರ ಹಣ ಜಮೆ: ಸಚಿವ ಕೃಷ್ಣ ಬೈರೇಗೌಡ

ರಾಜ್ಯದಲ್ಲಿ ಮಳೆ ಅಭಾವ ಕಾರಣ ಬರಗಾಲ ಘೋಷಣೆ ಮಾಡಿದ್ದರಿಂದ ಬರಗಾಲ ಪರಿಹಾರದ ಆರಂಭಿಕ ಕಂತು ತಲಾ 2,000 ರು. ಈಗಾಗಲೆ ಕಲಬುರಗಿ ಜಿಲ್ಲೆಯ 2.25 ಲಕ್ಷ ರೈತರಿಗೆ 44.74 ಕೋಟಿ ರು. ಜಮೆ ಮಾಡಿದ್ದು, ಬಾಕಿ ಉಳಿದ 1.60 ಲಕ್ಷ ರೈತರಿಗೆ 2-3 ದಿನದಲ್ಲಿ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. 
 

Drought relief money will be deposited to farmers soon Says Minister Krishna Byre Gowda gvd
Author
First Published Jan 25, 2024, 4:23 AM IST

ಕಲಬುರಗಿ (ಜ.25): ರಾಜ್ಯದಲ್ಲಿ ಮಳೆ ಅಭಾವ ಕಾರಣ ಬರಗಾಲ ಘೋಷಣೆ ಮಾಡಿದ್ದರಿಂದ ಬರಗಾಲ ಪರಿಹಾರದ ಆರಂಭಿಕ ಕಂತು ತಲಾ 2,000 ರು. ಈಗಾಗಲೆ ಕಲಬುರಗಿ ಜಿಲ್ಲೆಯ 2.25 ಲಕ್ಷ ರೈತರಿಗೆ 44.74 ಕೋಟಿ ರು. ಜಮೆ ಮಾಡಿದ್ದು, ಬಾಕಿ ಉಳಿದ 1.60 ಲಕ್ಷ ರೈತರಿಗೆ 2-3 ದಿನದಲ್ಲಿ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬರಗಾಲ ಘೋಷಣೆ ಮಾಡಿ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಪರಿಹಾತ ಹಣ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದೂವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಸಂಕಷ್ದದಲ್ಲಿದ ರೈತರಿಗೆ ನೆರವಿಗೆ ಧಾವಿಸಲು ಎನ್.ಡಿ.ಅರ್.ಆಫ್ ಅನುದಾನ ನಿರೀಕ್ಷಿಸಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದಾದ್ಯಂತ ಒಟ್ಟಾರೆ 35 ಲಕ್ಷ ರೈತರಿಗೆ 650 ಕೋಟಿ ರು. ಹಣ ಬಿಡುಗಡೆ ಮಾಡಿದೆ. ಇದೂವರೆಗೆ 24 ಲಕ್ಷ ಜನರಿಗೆ 519 ಕೋಟಿ ರು. ಪಾವತಿಯಾಗಿದೆ. 2-3 ದಿನದಲ್ಲಿ ರಾಜ್ಯದ ಉಳಿದ 11-12 ಲಕ್ಷ ಜನರಿಗೆ ಹಣ ಜಮೆ ಮಾಡಲಾಗುತ್ತದೆ ಎಂದರು. ಡಿ.ಬಿ.ಟಿ. ಹಣ ಪಾವತಿ ಸಂದರ್ಭದಲ್ಲಿ ಎದುರಿಸಲಾಗುತ್ತಿದ್ದು, ಆಧಾರ್, ಬ್ಯಾಂಕ್ ಲಿಂಕ್ ಅಪಡೇಟ್ ಕಾರ್ಯ ಶೇ.60ರಿಂದ 80ಕ್ಕೆ ಹೆಚ್ಚಿಸಿದ್ದರಿಂದ ಶೇ.80ರಷ್ಟು ಜನರಿಗೆ ಪರಿಹಾರ ಸಿಕ್ಕಿದೆ. ನಮ್ಮ ಗುರಿಯಂತೆ ಇನ್ನು ಕನಿಷ್ಠ ಶೇ.5ರಷ್ಟು ಅಪಡೇಟ್ ಕಾರ್ಯ ಮಾಡಬೇಕಿದೆ. ಮುಂದಿನ ಕಂತು ಪಾವತಿಯೊಳಗೆ ಈ ಸಮಸ್ಯೆ ಬಗೆಹರಿಸಬೇಕು. ಇದನ್ನು ಮಿಷನ್ ಮೋಡ್ ನಲ್ಲಿ ಮಾಡಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರಿಗೆ ಸಚಿವರು ನಿರ್ದೇಶನ ನೀಡಿದರು.

ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಸರ್ಕಾರದ ಆದ್ಯತೆ: ಸಿದ್ದರಾಮಯ್ಯ ಹೇಳಿದ್ದೇನು?

ಕಳೆದ ಜುಲೈ ಮಾಹೆಯಲ್ಲಿ ಜಿಲ್ಲೆಯಲ್ಲಿ ಕಂದಾಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಮಾಡಿದಾಗ, ಕಲಬುರಗಿ ಜಿಲ್ಲೆಯಲ್ಲಿ ತಹಸೀಲ್ದಾರ್‌ ಬಳಿ ಬಾಕಿ ಇದ್ದ 790 ಕಂದಾಯ ಕೋರ್ಟ್ ಪ್ರಕರಣ ಇದೀಗ 294ಕ್ಕೆ ಇಳಿದಿದೆ. ಇದಲ್ಲದೆ ರಾಜ್ಯದಲ್ಲಿ 6 ತಿಂಗಳ ಹಿಂದೆ ಒಂದು ವರ್ಷದ ಮೀರಿದ 60 ಸಾವಿರ ಪ್ರಕರಣಗಳು ವಿಲೇವಾರಿ ಬಾಕಿ ಇದ್ದವು. ಇದೀಗ ಅವು 34 ಸಾವಿರಕ್ಕೆ ಇಳಿಕೆಯಾಗಿದೆ. ಅಷ್ಟರ ಮಟ್ಟಿಗೆ ಕಂದಾಯ ನ್ಯಾಯಾಲಯಗಳು ತ್ವರಿತವಾಗಿ ಕೆಲಸ ನಿರ್ವಹಿಸಿವೆ ಎಂದು ಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಜುಲೈನಲ್ಲಿ 6 ತಿಂಗಳಿನಿಂದ 5 ವರ್ಷ ವರೆಗೆ ಬಾಕಿ ಇದ್ದ 231 ಪ್ರಕರಣಗಳು ಸೊನ್ನೆಗೆ ತರಲಾಗಿದೆ. ಒಟ್ಟಾರೆ ಗಣನೀಯವಾಗಿ ಕೋರ್ಟ್ ಪ್ರಕರಣ ಇಳಿಕೆಯಾಗಿವೆ ಎಂದರು.

ಕಂದಾಯ ಮಾತೃ ಇಲಾಖೆ,ಕೆಲಸದಲ್ಲಿ ಹೃದಯ ವೈಶಾಲ್ಯತೆ ಇರಲಿ: ಕಂದಾಯ ಇಲಾಖೆ ಅಂದರೆ ಎಲ್ಲಾ ಇಲಾಖೆಗೆ ಮಾತೃ ಇಲಾಖೆ ಇದ್ದಂತೆ. ಸಾರ್ವಜನಿಕರ ಸೇವೆಗೆ ಉತ್ತಮ ಅವಕಾಶ ನಿಮಗಿದೆ. ಕಚೇರಿಗೆ ಬರುವ ಸಾರ್ವಜನಿಕರನ್ನು ಅನಗತ್ಯ ಅಲೆದಾಡಿಸದೆ ತ್ವರಿತಗತಿಯಲ್ಲಿ ಸೇವೆ ನೀಡಬೇಕು. ಬಡ ಜನರನ್ನು ದಾಖಲೆ ನೆಪದಲ್ಲಿ ತಿರುಗಾಡಿಸಬೇಡಿ. ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಹೃದಯ ವೈಶಾಲ್ಯತೆ ಮೆರೆಯಬೇಕು. ಸಿ.ಎಂ. ಜನತಾ ದರ್ಶನದಲ್ಲಿ ಸ್ಚೀಕೃತ ಅರ್ಜಿಯಲ್ಲಿ ಶೇ.50ಕ್ಕಿಂತ ಹೆಚ್ಚು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗಾದರೆ ತಳ ಹಂತದಲ್ಲಿ ಕೆಲಸ ಮಾಡಲ್ವಾ, ಸಾರ್ವಜನಿಕರ ಸಮಸ್ಯೆ ಆಲಿಸಲ್ವಾ ಎಂಬ ಪ್ರಶ್ನೆ ಮೂಡುತ್ತದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. 600 ಕಿ.ಮೀ ದೂರದಿಂದ ಸರ್ವೆ, ಮೊಟೇಷನ್ ಗೆ ಸಿ.ಎಂ. ಬಳಿ ಬರುವದೆಂದರೆ ಆಡಳಿತ ಯಾವ ಹಂತದಲ್ಲಿದೆ. ನಿಮ್ಮ ಕಾರ್ಯಶೈಲಿ ಬದಲಾಯಿಸಿಕೊಳ್ಳಿ ಎಂದು ಕಂದಾಯ ಸಿಬ್ಬಂದಿಗೆ ತಾಕೀತು ಮಾಡಿದರು.

ಟಾಸ್ಕ್ ಫೋರ್ಸ್ ಸಭೆ ಕರೆಯಿರಿ: ಕುಡಿಯುವ ನೀರಿನ ಸಮಸ್ಯೆ ಎಲ್ಲೆ ತಲೆದೋರಿದ್ದರೆ 24 ಗಂಟೆಯಲ್ಲಿ ಪರ್ಯಾಯ ವ್ಯವಸ್ಥೆ ನೀಡಬೇಕೆಂದು ಸಿ.ಎಂ. ನಿರ್ದೇಶನ ಇದೆ. ಡಿ.ಸಿ-ತಹಸೀಲ್ದಾರ್‌ ಖಾತೆಯಲ್ಲಿ 61 ಕೋಟಿ ರು. ಇದ್ದು, ಯಾವುದೇ ಅನುದಾನ ಕೊರತೆ ಇಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಪ್ರಥಮಾದ್ಯತೆ ಮೇಲೆ ನೀರು ಪೂರೈಸಬೇಕು. ಫೆಬ್ರವರಿ ಮಾಹೆಯ ಮೊದಲ ವಾರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ಕರೆಯಬೇಕು. ಮುಂದೆ ಬೇಸಿಗೆ ಇರುವುದರಿಂದ ಬೋರವೆಲ್ ಕೊರೆದರು ನೀರು ಸಿಗುವುದು ಕಷ್ಟ. ಹೀಗಾಗಿ ಟ್ಯಾಂಕರ್ ಮೂಲಕ ನೀರು ಪಡೆಯಲು ಆದ್ಯತೆ ನೀಡಿ. ನೀರಿನ ಸಮಸ್ಯೆ ತಲೆದೋರಿದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ಈಗಲೆ ಟೆಂಡರ್, ಕೊಟೇಷನ್ ಕರೆದು ಟ್ಯಾಂಕರ್ ಗಳನ್ನು ಎಂಗೇಜ್ ಮಾಡಿಟ್ಟುಕೊಳ್ಳಬೇಕು ಎಂದು ತಹಸೀಲ್ದಾರ್‌ರಿಗೆ ಸೂಚನೆ ನೀಡಿದರು.

ಇನ್ನು ಬರಗಾಲ ಪರಿಹಾರ ಪಾವತಿ ಹಣ ವಿಳಂಬ ಕುರಿತು ಮಾತನಾಡಿ ಹಿಂದೆಲ್ಲ 2-3 ವರ್ಷದಿಂದ ಬಾಕಿ ಇರುವ ಕಾರಣ ಟ್ಯಾಂಕರ್ ಪೂರೈಕೆಗೆ ಗುತ್ತಿಗೆದಾರರು ಹಿಂದೇಟು ಹಾಕುತ್ತಾರೆ. ಹೀಗಾಗಿ ಇದನ್ನು ತಪ್ಪಿಸಲು 15 ದಿನಕ್ಕೊಮ್ಮೆ ಪಾವತಿ ಮಾಡಬೇಕು. ಪಿ.ಡಿ.ಓ, ಎ.ಇ., ವಿ.ಎ ಇವರಿಗೆ ಜವಾಬ್ದಾರಿ ನೀಡಬೇಕು ಎಂದು ತಹಸೀಲ್ದಾರ್‌ರಿಗೆ ಸಚಿವರು ತಿಳಿಸಿದರು. ಪಹಣಿಗೆ ಆಧಾರ್ ಲಿಂಕ್, ಎಲ್ಲವೂ ದಾಖಲೀಕರಣ: ಕೇಂದ್ರ ಸರ್ಕಾರವು ಆರ್.ಟಿ.ಸಿ.ಗೆ ಆಧಾರ್ ಲಿಂಕ್ ಮಾಡಲು ನಿರ್ದೇಶನ ನೀಡಿದ್ದು, ಮುಂದಿನ ದಿನದಲ್ಲಿ ಇದರ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಜೊತೆಗೆ ಕಂದಾಯ, ಸರ್ವೆ, ಸಬ್ ರಿಜಿಸ್ಟಾರ್ ಕಚೇರಿಯ ಎಲ್ಲಾ ದಾಖಲೆಗಳು ಮುಂದಿನ ಒಂದೂವರೆ ವರ್ಷದಲ್ಲಿ ದಾಖಲೀಕರಣ ಮಾಡಲಾಗುತ್ತಿದೆ. 

ರಾಜ್ಯದಲ್ಲಿ ಪಶು ವೈದ್ಯರ ಕೊರತೆ ನೀಗಿಸಲು ಕ್ರಮ: ಸಚಿವ ದಿನೇಶ್ ಗುಂಡೂರಾವ್

ಇದರಿಂದ ವಂಚನೆ ತಡೆಯುವುದಲ್ಲದೆ ದಾಖಲೆ ಹುಡುಕುವ ತಾಪತ್ರಯ ತಪ್ಪಲಿದೆ. ಇದಕ್ಕೆಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ ಅವರು, ಸರ್ವೇಯರ್ ನೇಮಕಾತಿಗೂ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಎಂ.ವೈ.ಪಾಟೀಲ, ಕನೀಜ್ ಫಾತಿಮಾ, ಕಂದಾಯ ಇಲಾಖೆಯ ಆಯುಕ್ತ ಸುನೀಲ ಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸೇರಿದಂತೆ ತಹಸೀಲ್ದಾರರು, ಸಬ್ ರಿಜಿಸ್ಟ್ರಾರ್, ಇತರೆ ಅಧಿಕಾರಿಗಳು ಇದ್ದರು.

Follow Us:
Download App:
  • android
  • ios