ಯಾದಗಿರಿ: ಕಲುಷಿತ ನೀರು ಸೇವನೆ, 10ಕ್ಕೂ ಅಧಿಕ ಜನರು ಅಸ್ವಸ್ಥ; ಮಹಿಳೆ ಸಾವು?
ಕಲುಷಿತ ನೀರು ಸೇವನೆ ಹಾಗೂ ಅದರಿಂದಾಗುತ್ತಿರುವ ಅನಾಹುತಗಳು ಜಿಲ್ಲೆಯಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿರುವುದು ಆತಂಕ ಮೂಡಿಸಿದೆ.
ಹುಣಸಗಿ (ಯಾದಗಿರಿ) (ಆ.25) : ಕಲುಷಿತ ನೀರು ಸೇವನೆ ಹಾಗೂ ಅದರಿಂದಾಗುತ್ತಿರುವ ಅನಾಹುತಗಳು ಜಿಲ್ಲೆಯಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿರುವುದು ಆತಂಕ ಮೂಡಿಸಿದೆ.
ಇತ್ತೀಚೆಗಷ್ಟೇ ಗುರುಮಠಕಲ್ ತಾಲೂಕಿನ ಅನಪುರ, ಶಿವಪುರ, ಗಾಜರಕೋಟ್‌ನಲ್ಲಿ ಇಂತಹ ಘಟನೆಗಳು ಮಾಸುವ ಮುನ್ನವೇ, ಇದೀಗ ಜಿಲ್ಲೆಯ ಹುಣಸಗಿ ತಾಲೂಕಿನ ಮಾರಲಭಾವಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಘಟನೆ ಶುಕ್ರವಾರ ಕಂಡುಬಂದಿದೆ.
ಕಳೆದೆರಡು ದಿನಗಳಿಂದ ಮಾರಲಭಾವಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ವಸ್ತು ಸೇರಿದ್ದು, ಇದನ್ನು ಸೇವಿಸಿದ ಪರಿಣಾಮ ವಾಂತಿಬೇಧಿ ಉಂಟಾಗಿದೆ. ಮಕ್ಕಳು, ಯುವಕರು ಹಾಗೂ ವಯೋವೃದ್ಧರು ಸೇರಿದಂತೆ 10ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಗ್ರಾಮಕ್ಕೆ ಕುಡಿಯುವ ನೀರಿನ ಮೂಲವಾಗಿದ್ದ ಬಾವಿಯಲ್ಲಿ ಕೆಲವು ದಿನಗಳ ಹಿಂದೆ ಹಂದಿ ಸತ್ತು ಬಿದ್ದಿತ್ತಾದರೂ, ಇದರ ಸ್ವಚ್ಛತೆಗೆ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಇದನ್ನರಿಯದ ಕೆಲವರು ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ಯಾದಗಿರಿ: ಗಾಜರಕೋಟದಲ್ಲಿ ಕಲುಷಿತ ನೀರು ಸೇವಿಸಿ 19 ಜನ ಅಸ್ವಸ್ಥ
ಸಚಿನ್ (14), ಮಂದಮ್ಮ (28), ನಂದಿನಿ (16), ಭಾಗ್ಯಶ್ರೀ (28), ಪ್ರಮೋಥಗೌಡ (8), ಪ್ರಥಮ ಕರಿಗೌಡ (5), ಅನಿರುತ್ ಅಡಗಲ್ (5), ಪ್ರತಿಭಾ ಮೇಟಿ (3) ವಿಠೋಭಾ ಸುಭೇದಾರ (70), ಹುಲಗಪ್ಪ ಕರಿಗೌಡ್ರ(55) ಇವರುಗಳು ಅಸ್ವಸ್ಥಗೊಂಡವರು. ಇದರಲ್ಲಿ ನಾಲ್ವರು ಮಕ್ಕಳಿಗೆ ಹುಣಸಗಿ ಹಾಗೂ ತಾಳಿಕೋಟಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಗ್ರಾಮದಲ್ಲಿರುವ ಆರೋಗ್ಯ ಕ್ಯಾಂಪ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಇವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ರಾಜಾ ವೆಂಕಟಪ್ಪ ನಾಯಕ ತಿಳಿಸಿದ್ದಾರೆ.
ಮಾರಲಭಾವಿ ಗ್ರಾಮದಲ್ಲಿ ಸದ್ಯ ಕಾಣಿಸಿಕೊಂಡಿರುವ ವಾಂತಿ-ಬೇಧಿಗೆ ಯಾರು ಭಯಪಡುವ ಅಗತ್ಯವಿಲ್ಲ. ಗ್ರಾಮಸ್ಥರೆಲ್ಲರೂ ಒಂದು ಲೀಟರ್ ನೀರಿನಲ್ಲಿ ಆ್ಯಲೋಜಿನ್ ಮಾತ್ರೆಯನ್ನು ಹಾಕಿ ಕುಡಿಯಲು ತಿಳಿಸಲಾಗಿದೆ. ಇದರಿಂದ ಬ್ಯಾಕ್ಟೀರಿಯಾ, ವಾಂತಿ-ಬೇಧಿ ನಿಯಂತ್ರಣಕ್ಕೆ ಬರುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ತಿಳಿಸಿದ್ದಾರೆ.
ಮಹಿಳೆ ಸಾವಿಗೆ ಕಲುಷಿತ ನೀರು ಕಾರಣ?:
ಕಳೆದೆರಡು ದಿನಗಳ ಹಿಂದೆ ಇದೇ ಗ್ರಾಮದ ತಿಪ್ಪವ್ವ ಕುಚಬಾಳ (50) ಮೃತಪಟ್ಟಿದ್ದಳು. ವಾಂತಿಭೇದಿಯಿಂದ ಬಳಲುತ್ತಿದ್ದ ಈಕೆಯನ್ನು ಕುಟುಂಬಸ್ಥರು ಹುಣಸಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಸಮೀಪದ ತಾಳಿಕೋಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋಗುತ್ತಿರುವಾಗ ಮಾರ್ಗಮಧ್ಯೆ ಆಕೆ ಸಾವುನ್ನಪ್ಪಿದ್ದಾಳೆ. ಕಲುಷಿತ ನೀರು ಸೇವನೆ ಇದಕ್ಕೆ ಕಾರಣ ಅನ್ನೋದು ಮೃತಳ ಸಹೋದರ ಮುದೆಪ್ಪ ಮೇಟಿ ಆರೋಪ. ಆದರೆ, ಈ ಬಗ್ಗೆ ಸ್ಪಷ್ಟಮಾಹಿತಿ ಮರಣೋತ್ತರ ಪರೀಕ್ಷೆಯಿಂದ ಬರುತ್ತದೆ ಅನ್ನೋದು ವೈದ್ಯರ ಪ್ರತಿಕ್ರಿಯೆ.
ಕುಡಿಯಲು ಯೋಗ್ಯವಿಲ್ಲ ಎಂದು ಮೊದಲೇ ತಿಳಿಸಲಾಗಿತ್ತು!
ಆರೋಗ್ಯ ಇಲಾಖೆ ಅಧಿಕಾರಿಗಳು ಕಳೆದ ಒಂದು ತಿಂಗಳ ಹಿಂದೆ ಗ್ರಾಮದಲ್ಲಿರುವ ಬಾವಿಯ ನೀರು ಕುಡಿಯಲು ಯೋಗ್ಯವಿಲ್ಲವೆಂದು ಮಾಹಿತಿ ನೀಡಿದ್ದರು. ಆದರೆ, ಈ ಬಗ್ಗೆ ಗಂಭೀರವಾಗಿ ಗ್ರಾಮ ಪಂಚಾಯ್ತಿ ಅಧಿಕಾರಿ ಮುಂಜಾಗ್ರತಾ ಕ್ರಮಕೈಗೊಳ್ಳದೆ ಇದ್ದುದು ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಕೆಲ ದಿನಗಳ ಹಿಂದೆ ಗ್ರಾಮದ ಬಾವಿಯಲ್ಲಿ ಹಂದಿ ಬಿದ್ದು ಸತ್ತು ಹೋಗಿತ್ತು. ಅದರಿಂದ ಬಾವಿ ಸ್ವಚ್ಛಗೊಳಿಸಿ ಎಂದು ಗ್ರಾಮಸ್ಥರು ಹಲವು ಭಾರಿ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಬಾವಿ ಸ್ವಚ್ಛಗೊಳಿಸದೆ ಹಾರಿಕೆ ಉತ್ತರ ನೀಡುತ್ತಿದ್ದರೆಂದು ರೈತ ಸಂಘದ ಪದಾಧಿಕಾರಿ ದೇವೆಗೌಡ ಪಾಟೀಲ್ ಆರೋಪಿಸಿದ್ದಾರೆ.
ಕಲುಷಿತ ನೀರಿಂದ ಸಾವಾದರೆ ಸಿಇಒ ಸಸ್ಪೆಂಡ್: ಸಿದ್ದರಾಮಯ್ಯ ಎಚ್ಚರಿಕೆ
ಮಾರಲಭಾವಿಯಲ್ಲಿ ವಾಂತಿಭೇದಿ ಪ್ರಕರಣಗಳು ಕಂಡು ಬಂದಿರುವುದರಿಂದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆರೋಗ್ಯ ಅಧಿಕಾರಿಗಳು 200 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಜನರ ಮೇಲೆ ನಿಗಾವಹಿಸಲಾಗುತ್ತಿದೆ. ಸದ್ಯ ಬಾವಿ ಸ್ವಚ್ಛಗೊಳಿಸಲಾಗುತ್ತಿದ್ದು, ಸ್ವಚ್ಛಗೊಳಿಸಿದ ಬಳಿಕ ಇನ್ನೊಮ್ಮೆ ನೀರು ತಪಾಸಣೆ ಮಾಡಿದ ಮೇಲೆ ಕುಡಿಯಲು ಯೋಗ್ಯವೆಂದರೆ ಮಾತ್ರ ಕುಡಿಬೇಕು. ಇಲ್ಲದಿದ್ದರೆ ಬೇಡವೆಂದು ತಿಳಿಸಲಾಗಿದೆ
- ಗರಿಮಾ ಪನ್ವಾರ, ಜಿಪಂ ಸಿಇಒ ಯಾದಗಿರಿ.
ತಾಲೂಕಿನ ಮಾರಲಭಾವಿ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣ ಕಂಡು ಬಂದಿರುವುದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಗ್ರಾಮದಲ್ಲಿ ಮಹಿಳೆಯೊಬ್ಬಳು ವಾಂತಿ ಭೇದಿಯಿಂದ ಮೃತಪಟ್ಟಿದ್ದಾಳೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಆದರೆ ಮೃತಳಿಗೆ ಕೆಲವು ತಿಂಗಳುಗಳ ಹಿಂದೆ ಕರುಳಿನ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಸಾವು ಸಂಭವಿಸಿರಬೇಕೆ ಹೊರತು, ವಾಂತಿಭೇದಿಯಿಂದ ಸಾವು ಸಂಭವಿಸಿಲ್ಲ
- ಡಾ. ರಾಜಾ ವೆಂಕಪ್ಪನಾಯಕ, ತಾಲೂಕು ವೈದ್ಯಾಧಿಕಾರಿ, ಸುರಪುರ.