Asianet Suvarna News Asianet Suvarna News

ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ!

ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ| 16000 ಅಡಿ ಎತ್ತರದಲ್ಲಿ 8 ಗಂಟೆ ಹಾರಾಟ| ಯುದ್ಧ ಸ್ಥಳದಿಂದ ತಕ್ಷಣದ ಮಾಹಿತಿ ಲಭ್ಯ

DRDO Rustom 2 drone takes off India goes for armed Heron pod
Author
Bangalore, First Published Oct 11, 2020, 7:54 AM IST

ನವದೆಹಲಿ(ಅ.11): ಗಡಿಯಲ್ಲಿ ನೆರೆದೇಶಗಳ ಅತಿಕ್ರಮಣಕಾರಿ ನೀತಿ ಹೆಚ್ಚುತ್ತಿರುವಾಗಲೇ, ನೆರೆಮನೆಯ ವೈರಿ ಚೀನಾದ ಗಡಿ ಚಲನವಲನಗಳ ಮೇಲೆ ಕಣ್ಗಾವಲು ಇಡಲು ನೆರವಾಗುವ ಸ್ವದೇಶಿ ಡ್ರೋನ್‌ ‘ರುಸ್ತುಂ 2’ ಅನ್ನು ಭಾರತ ಶುಕ್ರವಾರ ಯಶಸ್ವಿಯಾಗಿ ಪರೀಕ್ಷಿಸಿದೆ.

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆ ವೇಳೆ ಈ ಮಾದರಿ ಡ್ರೋನ್‌ 16000 ಅಡಿ ಎತ್ತರದಲ್ಲಿ ಸತತ 8 ಗಂಟೆಗಳ ಕಾಲ ಹಾರಾಡುವ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ವರ್ಷಾಂತ್ಯಕ್ಕೆ ಇದೇ ಡ್ರೋನ್‌ 26000 ಅಡಿ ಎತ್ತರದಲ್ಲಿ 18 ತಾಸುಗಳ ಹಾರಾಟದ ಪರೀಕ್ಷೆ ಒಳಪಡಲಿದೆ.

‘ರುಸ್ತುಂ 2’ ಡ್ರೋನ್‌ ತನ್ನೊಂದಿಗೆ ಸಿಂಥೆಟಿಕ್‌ ಅಪರ್ಚರ್‌ ರಾಡಾರ್‌, ಎಲೆಕ್ಟ್ರಾನಿಕ್‌ ಇಂಟೆಲಿಜೆನ್ಸ್‌ ಸಿಸ್ಟಮ್‌, ಸಿಚುವೇಷನ್‌ ಅವೇರ್‌ನೆಸ್‌ ಸಿಸ್ಟಮ್‌ ಸೇರಿದಂತೆ ಸಂದರ್ಭಕ್ಕೆ ತಕ್ಕ ಗುಪ್ತಚರ ಉಪಕರಣ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಯುದ್ಧದಂಥ ಸಂದರ್ಭದಲ್ಲಿ ಕ್ಷಣಕ್ಷಣದ ಮಾಹಿತಿ ರವಾನೆಗೆ ಉಪಗ್ರಹ ಸಂಪರ್ಕ ವ್ಯವಸ್ಥೆಯನ್ನೂ ಹೊಂದಿದೆ.

ಸದ್ಯಕ್ಕೆ ರುಸ್ತುಂ 2 ಇನ್ನೂ ಮಾದರಿ ಹಂತದಲ್ಲಿದೆಯಾದರೂ ಅದರ ಎಲ್ಲಾ ವ್ಯವಸ್ಥೆಗಳು ವಿಶ್ವದ ಅತ್ಯಾಧುನಿಕ ಯುದ್ಧ ಡ್ರೋನ್‌ಗಳಲ್ಲಿ ಒಂದಾದ, ಹಾಲಿ ಭಾರತೀಯ ಸೇನೆಯ ಬಳಕೆಯಲ್ಲಿರುವ ಇಸ್ರೇಲ್‌ ನಿರ್ಮಿತ ಹೆರೋನ್‌ಗೆ ಸರಿಸಮಾನವಾಗಿದೆ. ಹೀಗಾಗಿಯೇ ಈ ಬೆಳವಣಿಗೆಯನ್ನು ಅತ್ಯಂತ ಮಹತ್ವದ್ದೆಂದು ಪರಿಗಣಿಸಲಾಗಿದೆ.

1959ರಲ್ಲಿ ತಾನು ಏಕಪಕ್ಷೀಯವಾಗಿ ಘೋಷಿಸಿದ್ದ ಗಡಿ ರೇಖೆಯನ್ನೇ ಮಾನ್ಯಮಾಡಲು ಸಿದ್ಧ ಎಂಬ ಇತ್ತೀಚಿನ ಚೀನಾ ಹೇಳಿಕೆ ಹಿನ್ನೆಲೆಯಲ್ಲಿ ರುಸ್ತುಂ 2 ಯೋಜನೆ ಪೂರ್ಣಕ್ಕೆ ಕೇಂದ್ರ ತೇಜಿ ನೀಡಿತ್ತು ಎನ್ನಲಾಗಿದೆ. ಮತ್ತೊಂದೆಡೆ ಚೀನಾ ಈಗಾಗಲೇ ತನ್ನ ಬಳಿ ಇಂಥ ಸಶಸ್ತ್ರ ಡ್ರೋನ್‌ಗಳನ್ನು ಹೊಂದಿದ್ದು, ಭಾರತದ ಗಡಿಯಲ್ಲಿ ಬಳಸುತ್ತಿದೆ. ಜೊತೆಗೆ ಪಾಕಿಸ್ತಾನಕ್ಕೂ 4 ಡ್ರೋನ್‌ ನೀಡಿದೆ.

ಇಸ್ರೇಲ್‌ಗೆ ಬೇಡಿಕೆ:

ಈ ನಡುವೆ ಹಾಲಿ ತನಗೆ ನೀಡಿರುವ ಹೆರೋನ್‌ ಡ್ರೋನ್‌ಗಳನ್ನು ಪ್ರಸಕ್ತ ಸಮಯದ ಬೇಡಿಕೆಗೆ ಅನುಗುಣವಾಗಿ ಉನ್ನತೀಕರಿಸಿಕೊಡುವಂತೆ ಮತ್ತು ಅದಕ್ಕೆ ಆಗಸದಿಂದ ಭೂಮಿಗೆ ಹಾರಿಸಬಹುದಾದ ಕ್ಷಿಪಣಿ ಹಾಗೂ ಲೇಸರ್‌ ನಿರ್ದೇಶಿಸಿತ ಬಾಂಬ್‌ಗಳನ್ನು ಅಳವಡಿಸಿಕೊಡುವಂತೆಯೂ ಶೀಘ್ರವೇ ಇಸ್ರೇಲ್‌ಗೆ ಭೇಡಿಕೆ ಸಲ್ಲಿಸಲು ಭಾರತದ ರಕ್ಷಣಾ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.

Follow Us:
Download App:
  • android
  • ios