ಬೆಂಗಳೂರು(ಜ. 28)  ಸಂಸ್ಕೃತಿ ಸಂಪ್ರದಾಯ ಮತ್ತು ಪರಂಪರೆಗಳನ್ನು ಉಳಿಸಿಬೆಳೆಸಲು 'ಹವ್ಯಕ ಮಾದರಿ ಕೇಂದ್ರ' ಸ್ಥಾಪಿಸುವ ಕುರಿತು ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ನಮ್ಮ ಸಂಸ್ಕೃತಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಈ ದಿಶೆಯಲ್ಲಿ ಇನ್ನಷ್ಟು ಯುವಕರು ಮಹಾಸಭೆಯ ಚಟುವಟಿಕೆಯಲ್ಲಿ ಉತ್ಸಾಹದಿಂದ  ತೊಡಗಿಕೊಳ್ಳಬೇಕು ಎಂದು ಡಾ.ಗಿರಿಧರ ಕಜೆ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ 77 ನೇ ವರ್ಷದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಡಾ.ಗಿರಿಧರ ಕಜೆಯವರು, 2020 ರಲ್ಲಿ ಜಗತ್ತೇ ಸ್ತಬ್ಧವಾದ ಪರಿಸ್ಥಿತಿ ಉಂಟಾದ ಪರಿಣಾಮ ಮಹಾಸಭೆಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಆಗಲಿಲ್ಲ. ಕೊರೋನಾದ ಸಂಕಟ ಸಮಯದಲ್ಲೂ ಹವ್ಯಕ ಸಮುದಾಯದ ಅನೇಕರು ಸರ್ವಸಮಾಜದ ಹಿತಕಾಯುವ ಕೆಲಸದಲ್ಲಿ ನಿರತರಾಗಿದ್ದರು ಎಂಬುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.

ಹವ್ಯಕ ಮಹಾಸಭೆಗೆ ನೂತನ ನಿರ್ದೇಶಕರು

'ಗಾಯತ್ರಿ ಮಹೋತ್ಸವ' ಬೆಂಗಳೂರು ಹಾಗೂ ಸಾಗರದಲ್ಲಿ ಯಶಸ್ವಿಯಾಗಿ ಸಂಪನ್ನವಾಗಿದ್ದು, ಮುಂದಿನ ದಿನಗಳಲ್ಲಿ ಇತರ ಪ್ರಾಂತಗಳಲ್ಲಿಯೂ 'ಗಾಯತ್ರಿ ಮಹೋತ್ಸವ' ನಡೆಸಲು ಸಂಕಲ್ಪಿಸಲಾಗಿದೆ. ಹವ್ಯಕ ಮಹಾಸಭೆಯ ಕಾರ್ಯಚಟುವಟಿಕೆಗಳನ್ನು ಎಲ್ಲಾ ಪ್ರಾಂತಗಳಿಗೂ ವಿಸ್ತರಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದ್ದು, ಹವ್ಯಕರು ಪ್ರಮುಖವಾಗಿ ಇರುವ ಪ್ರದೇಶಗಳಲ್ಲಿ ಮಹಾಸಭೆಯ ಶಾಖೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಯುವ ಜನರು ಮಹಾಸಭೆಯ ಕಾರ್ಯಗಳಲ್ಲಿ ಇನ್ನಷ್ಟು ಕ್ರಿಯಾಶೀಲರಾಗಬೇಕಿದ್ದು, ಯುವಕರ ಭಾಗವಹಿಸುವಿಕೆ  ಆನೆಬಲ ತರಲಿದೆ ಎಂದು ಅಭಿಪ್ರಾಯಪಟ್ಟರು.

ಕೋರೋನಾ ವಿರುದ್ಧ ಹೋರಾಟದಲ್ಲಿ ನಾಡಿನ ಜನತೆಗೆ ಶಕ್ತಿತುಂಬಿದ ಹಾಗೂ ಕೋಟ್ಯಂತರ ರೂಪಾಯಿಗಳ ಔಷಧವನ್ನು ಉಚಿತವಾಗಿ ನೀಡಿದ ಡಾ.ಗಿರಿಧರ ಕಜೆಯವರ ಪರಿಶ್ರಮವನ್ನು ಸರ್ವಸದಸ್ಯರ ಸಭೆಯಲ್ಲಿ ಸ್ಮರಿಸಿ; ಅವರಿಗೆ ಗೌರವ ಸಲ್ಲಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸಭೆಯನ್ನು ನಡೆಸಿ ಸದಸ್ಯರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಆಯವ್ಯಯ ಮಂಡಿಸಿ  ಖರ್ಚುವೆಚ್ಚಗಳ ಮಾಹಿತಿ.

ಡಾ.ಕಜೆ 6ನೇ ಬಾರಿಗೆ ಪುನರಾಯ್ಕೆ ಡಾ.ಗಿರಿಧರ ಕಜೆಯವರು ಮಹಾಸಭೆಯ ಅಧ್ಯಕ್ಷರಾಗಿ 6 ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಧರ ಭಟ್ ಕೆಕ್ಕಾರು, ಆರ್ ಎಂ ಹೆಗಡೆ ಬಾಳೆಸರ, ಪ್ರಧಾನ ಕಾರ್ಯದರ್ಶಿಯಾಗಿ ಸಿಎ. ವೇಣುವಿಘ್ನೇಶ ಸಂಪ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಭಟ್ ಯಲಹಂಕ, ಕಾರ್ಯದರ್ಶಿಗಳಾಗಿ ಪ್ರಶಾಂತ್ ಭಟ್ ಯಲ್ಲಾಪುರ, ಶ್ರೀಧರಭಟ್ ಸಾಲೇಕೊಪ್ಪ ಪುನರಾಯ್ಕೆಯಾದರು.

ಸಾಗರ, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಬೇರೆಬೇರೆ ಪ್ರಾಂತಗಳ ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು, ಆನ್ಲೈನ್ ಮೂಲಕವೂ ಭಾಗವಹಿಸಲು ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿತ್ತು.