ಬೆಂಗಳೂರು[ಫೆ.10]: ವೃತ್ತಿಯಲ್ಲಿ ವೈದ್ಯರು, ಎಂಜಿನಿಯರ್‌, ತಂತ್ರಜ್ಞರಾಗಿದ್ದರೂ ಸಹ ಕುಟುಂಬ ಆಚಾರ ವಿಚಾರ, ಸಂಪ್ರದಾಯವನ್ನು ಕಡೆಗಣಿಸದೆ ವೈದಿಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಸಮುದಾಯದ ಯುವಕರ ಬಗ್ಗೆ ಹೆಮ್ಮೆ ಇದೆ ಎಂದು ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಹೇಳಿದರು.

ಅಖಿಲ ಹವ್ಯಕ ಮಹಾಸಭಾ ಭಾನುವಾರ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿಸಿದ್ದ ‘ಗಾಯತ್ರಿ ಮಹೋತ್ಸವ’ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹವ್ಯಕರು ಕೃಷಿ, ನಳಪಾಕ, ವಿಜ್ಞಾನ- ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರ ಸೇರಿದಂತೆ ಬಹುತೇಕ ಎಲ್ಲ ರಂಗದಲ್ಲಿಯೂ ತಮ್ಮ ಛಾಪು ಮೂಡಿದ್ದಾರೆ. ಎಲ್ಲರೂ ಸಾಫ್ಟ್‌ವೇರ್‌, ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ಬೇರೆ ಬೇರೆ ಉದ್ಯೋಗ ಹುಡುಕಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಸಂಪ್ರದಾಯ ಉಳಿಯುವುದಾ ಎಂಬ ಅನುಮಾನ ಮೂಡುತ್ತದೆ. ಆದರೆ, ವೃತ್ತಿಯಲ್ಲಿ ವೈದ್ಯ, ಎಂಜಿನಿಯರ್‌ ಆಗಿದ್ದರೂ ಮನೆಯ ಸಂಪ್ರದಾಯವನ್ನು ಕೈಬಿಡದೇ ವೈದಿಕ ಸಂಪ್ರದಾಯ ಮುಂದುವರೆಸುತ್ತೇನೆ ಎನ್ನುವ ಯುವಕರ ಬಗ್ಗೆ ಹೆಮ್ಮೆ ಇದೆ ಎಂದರು.

ಪ್ರಸ್ತುತ ದಿನಗಳಲ್ಲಿ ಹಿರಿಯರೇ ಸಂಪ್ರದಾಯವನ್ನು ಪಾಲಿಸದೇ ಕಿರಿಯರಿಗೆ ಸಂಪ್ರದಾಯ ಆಚರಿಸುವಂತೆ ಹೇಳುವುದನ್ನು ಬಿಡಬೇಕು. ಮಕ್ಕಳಿಗೆ ಸರಿಯಾದ ವಯಸ್ಸಿನಲ್ಲಿ ಬ್ರಹ್ಮೋಪದೇಶ ಮಾಡಿ, ಗಾಯತ್ರಿ ಮಂತ್ರ ಪಠಣ ಹೇಳಿಕೊಟ್ಟು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಹಿರಿಯ ಕರ್ತವ್ಯವಾಗಿದೆ. ಮದುವೆ ಮಾಡಬೇಕೆಂಬ ಕಾರಣಕ್ಕೆ ಉಪನಯನ ಮಾಡುವ ಸ್ಥಿತಿಗೆ ಬಂದು ತಲುಪಿದ್ದೇವೆ. ಹೀಗಿರುವಾಗ ಗಾಯತ್ರಿ ಮಂತ್ರದ 24 ಅಕ್ಷರಗಳ ಶಕ್ತಿ ಹೇಗೆ ಲಭಿಸುತ್ತದೆ ಎಂದು ಪ್ರಶ್ನಿಸಿದರು.

‘ಗಾಯತ್ರಿ ಮಹೋತ್ಸವ’ ಉದ್ಘಾಟಿಸಿ ಮಾತನಾಡಿದ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಗಾಯಿತ್ರಿ ಮಂತ್ರ ಉಪಾಸನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗಲಿದೆ ಎಂಬುದು ಐಐಟಿ ಹಾಗೂ ಆಲ್‌ ಇಂಡಿಯನ್‌ ಮೆಡಿಕಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಗಾಯತ್ರಿ ಮಂತ್ರದ ಕುರಿತು ನಡೆಸಿದ ಸಂಶೋಧನೆಯಲ್ಲಿ ದೃಢಪಟ್ಟಿದೆ. ಗಾಯತ್ರಿ ಮಂತ್ರ ಉಪಾಸನೆಯಿಂದ ದೇಹÜದ 72 ಸಾವಿರ ನರವ್ಯೂಹ ಶುದ್ಧಿಯಾಗಲಿದ್ದು, ಜ್ಞಾನ, ಅಭಿವ್ಯಕ್ತಿ ಹಾಗೂ ಕಲಿಕಾ ಕೌಶಲ್ಯ ವೃದ್ಧಿಯಾಗಲಿದೆ ಎಂದು ಹೇಳಿದರು.

ದೇಹದ ಅಂಗಾಂಗಗಳ ಮೇಲೆ ಸೂರ್ಯನ ಕಿರಣಗಳು ಪ್ರಭಾವ ಬೀರುವುದರಿಂದ ಸೂರ್ಯದೇವನ ಮೂಲಕ ನಾವು ದೇವರ ಮಂತ್ರ ಪಠಣೆ ಮಾಡುತ್ತೇವೆ. ಬ್ರಾಹ್ಮಣರ ಕ್ರಿಯಾಶಕ್ತಿ, ಮನೋಶಕ್ತಿ ಹಾಗೂ ದೈಹಿಕ ಶಕ್ತಿ ಗಾಯತ್ರಿ ಮಂತ್ರದಲ್ಲಿದೆ ಎಂದು ವಿವರಿಸಿದರು.

‘ಗಾಯತ್ರಿ ಮಹೋತ್ಸವ’ ಸಮಾರಂಭಕ್ಕೂ ಮುನ್ನ ಯಶವಂತಪುರದ ಗಾಯಿತ್ರಿ ದೇವಸ್ಥಾನದಿಂದ ಹವ್ಯಕ ಭವನದ ವರೆಗೆ ಪಲ್ಲಕ್ಕಿಯಲ್ಲಿ ಗಾಯಿತ್ರಿ ದೇವಿಯ ಮೆರವಣಿಗೆ ನಡೆಸಲಾಯಿತು. ಬಳಿಕ ಹವ್ಯಕ ಭವನದಲ್ಲಿ ಶಶಿಧರ್‌ ಕೋಟೆ ಅವರಿಂದ ‘ಗಾಯತ್ರಿ ನಮನ’, ಡಾ.ಆರ್‌.ಗಣೇಶ್‌ ಅವರಿಂದ ‘ಗಾಯತ್ರಿ ತತ್ತ್ವ’, ಜಗದೀಶ ಶರ್ಮಾ, ಸಂಪ ಅವರಿಂದ ‘ಗಾಯತ್ರಿ ಉಪದೇಶ- ಉಪನಯನ’, ಶಿವರಾಮ ಅಗ್ನಿಹೋತ್ರಿ ಅವರಿಂದ ‘ ಅಗ್ನಿಹೋತ್ರದ ವೈಶಿಷ್ಟ್ಯ’, ಡಾ.ಕೆ.ರಂಗರಾಜ ಅಯ್ಯಂಗಾರ್‌ ಅವರಿಂದ ‘ಗಾಯತ್ರಿಮಂತ್ರದ ವೈಜ್ಞಾನಿಕ ಹಿನ್ನೆಲೆ’, ಅರುಂಧತಿ ವಸಿಷ್ಠ ಮತ್ತು ಮನೋಜ್‌ ವಸಿಷ್ಠ ಹಾಗೂ ಗುರುಕಿರಣ ಹೆಗಡೆ ಅವರಿಂದ ‘ಗಾಯತ್ರಿ ನಾದನಮನ’, ಡಾ.ಪಾದೆಕಲ್ಲು ವಿಷ್ಣು ಭಟ್ಟಅವರಿಂದ ‘ಬ್ರಹ್ಮಹಜ್ಞವೆಂಬ ನಿತ್ಯಕರ್ಮ’, ಹಿತ್ಲಳ್ಳಿ ನಾಗೇಂದ್ರ ಭಟ್ಟಅವರಿಂದ ‘ಸಂಧ್ಯಾವಂದನೆಯ ಮಹತ್ವ’, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವವರಿಂದ ‘ಮಹಾಬ್ರಾಹ್ಮಣ- ವಾಚಿಕಾಭಿನಯ’, ಕೂಟೇಲು ರಾಮಕೃಷ್ಣ ಭಟ್ಟಅವರಿಂದ ‘ಸಂಧ್ಯಾವಂದನೆ ಯಾವಾಗ? ಹೇಗೆ?’ ಹಾಗೂ ಯಕ್ಷಗಾನ, ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಬೆæಳಗ್ಗೆಯಿಂದ ಸಂಜೆಯ ವರೆಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ, ಉಪಾಧ್ಯಕ್ಷ ಶ್ರೀಧರ್‌ ಭಟ್‌, ಪ್ರಧಾನ ಕಾರ್ಯದರ್ಶಿ ಸಿ.ಎ.ವೇಣುವಿಘ್ನೇಶ ಸಂಪ ಹಾಗೂ ಸಂಚಾಲಕ ಕೃಷ್ಣಮೂರ್ತಿ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.