ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಮಿಷನ್‌ ದಂಧೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್‌ ಸಚಿವರ್ಯಾರೂ ಕಮೀಷನ್‌ ದಂಧೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಶಾಸಕ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ.

ತುಮಕೂರು (ಆ.28): ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಮಿಷನ್‌ ದಂಧೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್‌ ಸಚಿವರ್ಯಾರೂ ಕಮೀಷನ್‌ ದಂಧೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್‌ ಹೇಳಿದರು. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆ ಬಗ್ಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಈಗ ಹೇಳಿದ್ದಾರೆ. ಯಾವ ಸಚಿವಾಲಯದಲ್ಲಿ, ಯಾವ ಸಚಿವರು ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ. ಏಕೆಂದರೆ ಮುಖ್ಯಮಂತ್ರಿಯಾಗಿದ್ದವರು ಅವರು, ಹಾಗಾಗಿ ಜವಾಬ್ದಾರಿಯಿಂದ ಈ ಹೇಳಿಕೆ ನೀಡಿದ್ದಾರೆ ಎಂದೆನಿಸುತ್ತದೆ. ಆದರೆ ನಮ್ಮ ಕಾಂಗ್ರೆಸ್‌ನ ಸಚಿವರು ಯಾರೂ ಸಹ ಈ ಪರ್ಸಂಟೆಜ್‌ ದಂಧೆಯಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.ರಾಜ್ಯ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ 40 ಪರ್ಸಂಟೆಜ್‌ ಕಮೀಷನ್‌ ಪಡೆಯುತ್ತಿದೆ. ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿಯವರಿಗೆ ಗುತ್ತಿಗೆದಾರ ಕೆಂಪಣ್ಣನವರು ಪತ್ರ ಬರೆದಿದ್ದಾರೆ. ಈ ಪತ್ರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ತುಮಕೂರು ವಿವಿಯಲ್ಲಿ ವೀರ ಸಾವರ್ಕರ್‌ ಅಧ್ಯಯನ ಪೀಠ ಸ್ಥಾಪನೆ ಮಾಡಲು ವಿವಿ ಸಿಂಡಿಕೇಟ್‌ ಸಭೆ ಒಪ್ಪಿಗೆ ಸೂಚಿಸಿದೆ ಎಂಬ ಪ್ರಶ್ನೆಗೆ ವಿವಿ ಸಿಂಡಿಕೇಟ್‌ ಸದಸ್ಯರಿಗೆ ರಾಜ್ಯ ಬಿಜೆಪಿ ಸರ್ಕಾರÜ ಸೂಚನೆ ಕೊಟ್ಟಿರಬಹುದು. ಹಾಗಾಗಿ ರಾಜಕೀಯ ಒತ್ತಡದಿಂದ ಸಾವರ್ಕರ್‌ ಅಧ್ಯಯನ ಪೀಠ ಸ್ಥಾಪನೆ ಮಾಡಲು ಮುಂದಾಗಿರಬಹುದು. ಏಕಾಏಕಿ ಕುಲಪತಿಗಳು, ಕುಲಸಚಿವರು, ವಿವಿ ಸಿಂಡಿಕೇಟ್‌ ಸದಸ್ಯರುಗಳು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

ತುಮಕೂರು ವಿವಿಯನ್ನು ಇದುವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ನನ್ನ ಪ್ರಯತ್ನದಿಂದ ವಿಶ್ವವಿದ್ಯಾನಿಲಯವನ್ನು ಸ್ಥಾಪನೆಯಾಯಿತು. ಆದರೆ ಇದುವರೆಗೂ ಹೊಸ ಕ್ಯಾಂಪಸ್‌ಗೆ ಹೋಗಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಅನುದಾನ ಬಿಡುಗಡೆ ಮಾಡಿ ಆದಷ್ಟುಬೇಗ ಹೊಸ ಕ್ಯಾಂಪಸ್‌ಗೆ ತುಮಕೂರು ವಿವಿ ಸ್ಥಳಾಂತರವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಮುನಿಯಪ್ಪನವರು ಪಕ್ಷ ಬಿಡಲ್ಲ: ಮುನಿಯಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. 7 ಬಾರಿ ಲೋಕಸಭಾ ಸದಸ್ಯರಾಗಿದ್ದವರು. ಅವರು ನಮ್ಮ ಪಕ್ಷ ಬಿಡುವುದಿಲ್ಲ. ಮಾದಾರ ಚನ್ನಯ್ಯ ಸ್ವಾಮೀಜಿಯವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಪರಮೇಶ್ವರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

40 % ಕಮಿಷನ್‌ ತನಿಖೆಯಾದರೆ ಸರ್ಕಾರದ ಬಹುಪಾಲು ಸಚಿವರು ಜೈಲಿಗೆ: ಉಗ್ರಪ್ಪ

40 ಪರ್ಸೆಂಟೇಜ್‌ ಇರೋದು ನಿಜ, ಕೊಪ್ಪಳ ಗುತ್ತಿಗೆದಾರರ ಸಂಘ
ಕೊಪ್ಪಳ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬೆನ್ನಲ್ಲೇ ಇದೀಗ ಕೊಪ್ಪ ಜಿಲ್ಲಾ ಗುತ್ತಿಗೆದಾರರ ಸಂಘದಿಂದಲೂ ರಾಜ್ಯಸರ್ಕಾರದ ವಿರುದ್ಧ 40 ಪರ್ಸೆಂಟೇಜ್‌ ಆರೋಪ ಕೇಳಿಬಂದಿದೆ. ಈ ಹಿಂದೆ 5 ಪರ್ಸೆಂಟೇಜ್‌ ಇತ್ತು, ಸಿದ್ದರಾಮಯ್ಯರ ಕಾಲದಲ್ಲಿ ಅದು 10ಕ್ಕೇರಿತು. ಅದೀಗ ಶೇ.40ಕ್ಕೆ ಬಂದಿದೆ. ಇದರಿಂದ ನಾವು ಕೆಲಸ ಮಾಡುವುದೇ ದುಸ್ತರವಾಗಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ದೇವಪ್ಪ ಅರಕೇರಿ ಆರೋಪಿಸಿದ್ದಾರೆ.

40ರಷ್ಟು ಕಮಿಷನ್‌ ಆರೋಪ ನ್ಯಾಯಾಂಗ ತನಿಖೆಯಾಗಲಿ: ಡಿಕೆಶಿ

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೊಪ್ಪಳ ಸೇರಿ ರಾಜ್ಯಾದ್ಯಂತ ಪರ್ಸೆಂಟೇಜ್‌ ಕೊಡದ ಹೊರತು ಏನೂ ಕೆಲಸ ಆಗುವುದಿಲ್ಲ. ಕಮಿಷನ್‌ ದಂಧೆಯನ್ನು ಸಂಪೂರ್ಣ ಕಿತ್ತುಹಾಕುತ್ತೇವೆ ಎನ್ನುವುದು ಅಸಾಧ್ಯ. ಆದರೆ, ಕಡಿಮೆ ಮಾಡಿ ಎನ್ನುವುದು ನಮ್ಮ ಒತ್ತಾಯ ಎಂದಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕೆಂಪಣ್ಣ ಅವರು ಮಾಡಿರುವ ಆರೋಪ ನೂರಕ್ಕೆ ನೂರು ಸತ್ಯ. ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸರ್ಕಾರ ಕೂಡಲೇ ಭ್ರಷ್ಟಾಚಾರವನ್ನು ತಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.