ಬಳ್ಳಾರಿಯ ಅಸ್ಮಿತೆಯಂತಿದ್ದ 1964ರಲ್ಲಿ ನಿರ್ಮಿಸಲಾಗಿದ್ದ ಗಡಗಿ ಚನ್ನಪ್ಪ ವೃತ್ತದಲ್ಲಿನ ಗಡಿಯಾರ ಸ್ತಂಭವನ್ನು 2008ರಲ್ಲಿ ಬಳ್ಳಾರಿ ರಿಪಬ್ಲಿಕ್‌ನ ಮಹಾನಾಯಕರು ಕುಮ್ಮಕ್ಕಿನಿಂದ ಧ್ವಂಸಗೊಳಿಸಲಾಯಿತು: ವಿ.ಎಸ್‌. ಉಗ್ರಪ್ಪ 

ಬಳ್ಳಾರಿ(ಆ.27):  ರಾಜ್ಯ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಿದರೆ ಈ ಸರ್ಕಾರದ ಬಹುತೇಕ ಸಚಿವರು ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಬಹುತೇಕ ಶಾಸಕರು ಹಾಗೂ ಮಂತ್ರಿಗಳು ಕಮಿಷನ್‌ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ನ್ಯಾಯಾಂಗ ತನಿಖೆಗೆ ಒಳಪಡಿಸುವುದಾದರೆ ಸೂಕ್ತ ದಾಖಲೆಗಳನ್ನು ನೀಡುವುದಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಗುತ್ತಿಗೆದಾರರ ಸಂಘ ಹೇಳಿದೆ. ಆದರೆ, ಈ ಬಗ್ಗೆ ಸೂಕ್ತ ಉತ್ತರ ನೀಡದೆ ಜಾರಿಗೊಳ್ಳುತ್ತಿರುವ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಒಂದು ವೇಳೆ ಯಾವುದೇ ಕಮಿಷನ್‌ ಪಡೆದಿಲ್ಲ ಎನ್ನುವುದಾದರೆ ತನಿಖೆಗೆ ಹಿಂದೇಟು ಹಾಕುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು.

ಗಡಿಯಾರ ಸ್ತಂಭ ಶಿಫ್ಟ್‌ ಮಾಡಬಹುದಿತ್ತು:

ಬಳ್ಳಾರಿಯ ಅಸ್ಮಿತೆಯಂತಿದ್ದ 1964ರಲ್ಲಿ ನಿರ್ಮಿಸಲಾಗಿದ್ದ ಗಡಗಿ ಚನ್ನಪ್ಪ ವೃತ್ತದಲ್ಲಿನ ಗಡಿಯಾರ ಸ್ತಂಭವನ್ನು 2008ರಲ್ಲಿ ಬಳ್ಳಾರಿ ರಿಪಬ್ಲಿಕ್‌ನ ಮಹಾನಾಯಕರು ಕುಮ್ಮಕ್ಕಿನಿಂದ ಧ್ವಂಸಗೊಳಿಸಲಾಯಿತು. ಆಗ ನಾನು ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕನಾಗಿದ್ದೆ. ನಾನು ಹಾಗೂ ಪರಿಷತ್‌ ಸದಸ್ಯರಾಗಿದ್ದ ಕೆ.ಸಿ. ಕೊಂಡಯ್ಯ ಅವರು ಗಡಿಯಾರಸ್ತಂಭ ಧ್ವಂಸದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದೆವು. ಧರಣಿಯನ್ನು ನಡೆಸಿ, ಪ್ರತಿರೋಧ ತೋರಿದೆವು. ಬಳಿಕ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ನಿರ್ದಿಷ್ಟಜಾಗದಲ್ಲಿ ಗಡಿಯಾರಸ್ತಂಭ ನಿರ್ಮಿಸಲಾಯಿತು. ಇದೀಗ ಹೊಸದೊಂದು ಟವರ್‌ಕ್ಲಾಕ್‌ ನಿರ್ಮಿಸಲು ಗಡಿಯಾರಸ್ತಂಭವನ್ನು ತೆರವುಗೊಳಿಸಿದ್ದಾರೆ. ಅದರ ಬದಲು ಗಡಿಯಾರಸ್ತಂಭವನ್ನು ಬೇರೆಡೆಗೆ ಶಿಫ್ಟ್‌ ಮಾಡಬಹುದಿತ್ತು. ಸರ್ಕಾರದ ಹಣವನ್ನು ಈ ರೀತಿ ಪೋಲು ಮಾಡುವುದು ಎಷ್ಟುಸರಿ? ಎಂದು ಕೇಳಿದರು.

ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್‌ ಇಲ್ಲ: ಸಚಿವ ಹಾಲಪ್ಪ ಆಚಾರ್‌

ಬಳ್ಳಾರಿಯ ಕೋಟೆ ಪ್ರದೇಶದ ಮುಖ್ಯದ್ವಾರ ಸಂಪೂರ್ಣ ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿದೆ ಎಂದು ಮಾಧ್ಯಮಗಳೇ ವರದಿ ಮಾಡಿವೆ. ಇದರ ಬಗ್ಗೆ ಜಿಲ್ಲಾ ಸಚಿವರು ಹಾಗೂ ಜಿಲ್ಲಾಡಳಿತ ಗಮನ ಹರಿಸಿಲ್ಲ. ನಗರದ ರಸ್ತೆಗಳ ತುಂಬಾ ಗುಂಡಿಗಳು ಬಿದ್ದು ನಿತ್ಯ ಅಪಘಾತಗಳಾಗುತ್ತಿವೆ. ಕುಡಿಯುವ ನೀರಿನ ಪೂರೈಕೆ, ಚರಂಡಿ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳ ಕೊರತೆಗಳು ಸಾಕಷ್ಟಿವೆ. ನಿಜಕ್ಕೂ ಜಿಲ್ಲಾ ಸಚಿವರಿಗೆ ಕಾಳಜಿ ಇದ್ದಿದ್ದರೆ ಜನಸಾಮಾನ್ಯರು ಎದುರಿಸುವ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿತ್ತು ಎಂದರಲ್ಲದೆ, ಹೊಸ ಟವರ್‌ಕ್ಲಾಕ್‌ ನಿರ್ಮಾಣ ಕಾಮಗಾರಿಯಲ್ಲಾದರೂ 40 ಪರ್ಸೆಂಟ್‌ ತೆಗೆದುಕೊಳ್ಳದೆ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಆಪರೇಷನ್‌ ಕಮಲದ ಜನಕ:

ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಬಗ್ಗೆ ನಂಬಿಕೆಗಳಿಲ್ಲ. ಹೀಗಾಗಿಯೇ ಆಪರೇಷನ್‌ ಕಮಲ ಮಾಡಿ ಸಂವಿಧಾನ ವಿರೋಧಿ ಕೆಲಸಕ್ಕೆ ಮುಂದಾಗಿದೆ. ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ, ಗೋವಾಗಳಲ್ಲಿ ಆಪರೇಷನ್‌ ಕಮಲ ನಡೆಸಿದ್ದು, ಇದೀಗ ದೆಹಲಿಗೆ ಕೈ ಹಾಕಿದೆ ಎಂದು ಪ್ರಶ್ನೆಯೊಮದಕ್ಕೆ ಉತ್ತರಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆಎಸೆಯಲು ಯುವಕರನ್ನು ಪ್ರೇರೇಪಿಸುವುದು, ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದರು ಎಂಬ ವಿಚಾರಗಳನ್ನಿಟ್ಟುಕೊಂಡು ಜನಸಾಮಾನ್ಯರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಮರೆಮಾಚಲು ರಾಜ್ಯದ ಬಿಜೆಪಿ ಸರ್ಕಾರ ಯತ್ನಿಸಿದೆ ಎಂದು ವಿ.ಎಸ್‌. ಉಗ್ರಪ್ಪ ಆರೋಪಿಸಿದರು. ಪಕ್ಷದ ಮುಖಂಡರಾದ ವೆಂಕಟೇಶ್‌ ಹೆಗಡೆ, ಹನುಮ ಕಿಶೋರ್‌, ರವಿ ನೆಟ್ಟಕಲ್ಲಪ್ಪ, ಲೋಕೇಶ್‌, ಮಂಜುನಾಥ, ರಘುರಾಮಕೃಷ್ಣ, ರವೀಂದ್ರನಾಥ, ರಾಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.