Asianet Suvarna News Asianet Suvarna News

ಸಂವಿಧಾನ ತಿದ್ದುಪಡಿ ಅಂಬೇಡ್ಕರ್‌ ಆಶಯ: ಡಾ.ಸುಧಾಕರ ಹೊಸಳ್ಳಿ

ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಎಂಬ ಒಂದು ಸಾಮಾನ್ಯ ಪ್ರಕ್ರಿಯೆಯನ್ನು ಹಾಗೂ ಅವಶ್ಯಕ ನಡಾವಳಿಯನ್ನು ರಾಜಕೀಕರಣಗೊಳಿಸಿದ ಕಾರಣಕ್ಕಾಗಿ ಮತ್ತೊಮ್ಮೆ ಸಂವಿಧಾನ ತಿದ್ದುಪಡಿಯ ಕುರಿತು ಬಹುದೊಡ್ಡ ಚರ್ಚೆ ಆರಂಭವಾಗಿದೆ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಈ ವಿಷಯ ರಾಜಕೀಯದ ಅಸ್ತ್ರವಾಗಿರುವುದು ಅಪಾಯಕಾರಿ ಸಂಗತಿ.

Dr BR Ambedkar's Desire to Amendment the Constitution Says Dr Sudhakar Hosalli grg
Author
First Published Mar 12, 2024, 12:18 PM IST

ಡಾ.ಸುಧಾಕರ ಹೊಸಳ್ಳಿ

ಬೆಂಗಳೂರು(ಮಾ.12):  ಸಂಸತ್ತಿನಲ್ಲಿ ಶೋಷಿತರ ಪರವಾಗಿರುವ ಮೀಸಲಾತಿಯ ಸ್ಥಾನಗಳು ಉಳಿದಿದ್ದೇ ಸಂವಿಧಾನಕ್ಕೆ ತಂದ 104ನೇ ತಿದ್ದುಪಡಿಯಿಂದ. ಮಹಿಳೆಯರಿಗೆ ಮೀಸಲಾತಿ ದೊರೆತದ್ದು ಸಂವಿಧಾನದ ತಿದ್ದುಪಡಿಯ ಮೂಲಕ. ಹೀಗಾಗಿ ತಿದ್ದುಪಡಿ ಎಂಬ ಸಾಂವಿಧಾನಿಕ ಅಸ್ತ್ರದ ಬಗ್ಗೆ ರಾಜಕೀಯ ಕಾರಣಕ್ಕಾಗಿ ಅನಾರೋಗ್ಯಕರ ಚರ್ಚೆಯಾಗುವುದು ಬೇಡ.

ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಎಂಬ ಒಂದು ಸಾಮಾನ್ಯ ಪ್ರಕ್ರಿಯೆಯನ್ನು ಹಾಗೂ ಅವಶ್ಯಕ ನಡಾವಳಿಯನ್ನು ರಾಜಕೀಕರಣಗೊಳಿಸಿದ ಕಾರಣಕ್ಕಾಗಿ ಮತ್ತೊಮ್ಮೆ ಸಂವಿಧಾನ ತಿದ್ದುಪಡಿಯ ಕುರಿತು ಬಹುದೊಡ್ಡ ಚರ್ಚೆ ಆರಂಭವಾಗಿದೆ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಈ ವಿಷಯ ರಾಜಕೀಯದ ಅಸ್ತ್ರವಾಗಿರುವುದು ಅಪಾಯಕಾರಿ ಸಂಗತಿ.

ಸರ್ವಾಧಿಕಾರ ತರಲು ಬಿಜೆಪಿಗೆ ಸಂವಿಧಾನವೇ ಅಡ್ಡಿ: ಖರ್ಗೆ ಕಿಡಿ

ಸಂವಿಧಾನ ತಿದ್ದುಪಡಿಯೇ ಬೇರೆ ಮತ್ತು ಸಂವಿಧಾನದ ಬದಲಾವಣೆಯೇ ಬೇರೆ. ಇವೆರಡೂ ವಿರುದ್ಧ ದಿಕ್ಕಿನ ಪ್ರತಿಪಾದನೆಗಳು. 1973ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇಶವಾನಂದ ಭಾರತಿ ವರ್ಸಸ್‌ ಕೇರಳ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲವೆಂಬ ಘನೀಭೂತವಾದ ಆದೇಶವನ್ನು ನೀಡಿದೆ. ಆ ಆದೇಶ ಹೊರಡಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಸಂವಿಧಾನದ ಮರುವಾಖ್ಯಾನ ಮಾಡುವ ಅವಕಾಶವನ್ನು ಸಂವಿಧಾನವೇ ನೀಡಿದೆ. ಹಾಗಾಗಿ ಸಂವಿಧಾನದ ಮೂಲ ಸ್ವರೂಪ ಬದಲಾವಣೆ ಭಾರತ ಇರುವವರೆಗೂ ಸಾಧ್ಯವಿಲ್ಲ ಎಂಬುದು ನಿಶ್ಚಿತ.

ಅಂಬೇಡ್ಕರ್‌ ಈ ಬಗ್ಗೆ ಹೇಳಿದ್ದೇನು?

ಕಾಲಕಾಲಕ್ಕೆ ಸಂವಿಧಾನ ತಿದ್ದುಪಡಿಯಾಗಲೇಬೇಕೆಂಬುದು ಸಂವಿಧಾನ ಶಿಲ್ಪಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಬ್ಬಯಕೆಯೇ ಆಗಿತ್ತು. ನವೆಂಬರ್ 15 ,1948ರಂದು ಸಂವಿಧಾನ ರಚನಾ ಸಭೆಯಲ್ಲಿ ಜಾತ್ಯತೀತತೆಯ ಸೇರ್ಪಡೆಯನ್ನು ನಿರಾಕರಿಸಿ ಅವರು ಮಾತನಾಡುವಾಗ, ‘ಸಂವಿಧಾನವು ಕೇವಲ ರಾಷ್ಟ್ರದ ವಿವಿಧ ಅಂಗಗಳ ಕೆಲಸವನ್ನು ನಿಯಂತ್ರಿಸುವ ಒಂದು ವ್ಯವಸ್ಥೆಯಾಗಿತ್ತು. ಅದು ನಿರ್ದಿಷ್ಟ ಪಕ್ಷ ಇಲ್ಲವೇ ನಿರ್ದಿಷ್ಟ ಸದಸ್ಯರನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸುವ ವ್ಯವಸ್ಥೆ ಅಲ್ಲ. ರಾಷ್ಟ್ರದ ನೀತಿ ಏನಾಗಿರಬೇಕು, ತನ್ನ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನಾಧರಿಸಿ ಈ ಸಮಾಜವನ್ನು ಹೇಗೆ ಕಟ್ಟಬೇಕು ಎಂಬ ಸಂಗತಿಗಳನ್ನು ಸಮಯ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಜನರು ನಿರ್ಧರಿಸಬೇಕು. ಇದನ್ನು ಸಂವಿಧಾನವೇ ಕೈಗೊಳ್ಳಬಾರದು. ಏಕೆಂದರೆ ಅದು ತನ್ನೊಂದಿಗೆ ಪ್ರಜಾಪ್ರಭುತ್ವವನ್ನು ನಾಶಗೊಳಿಸುತ್ತದೆ’ ಎಂದು ಹೇಳುವ ಮೂಲಕ ಕಾಲಕಾಲದ ನಿರೀಕ್ಷೆಗಳಿಗೆ ತಕ್ಕಂತೆ ಸಂವಿಧಾನವು ತಿದ್ದುಪಡಿಯ ಮೂಲಕ ಮಾರ್ಪಾಟಾಗಬೇಕೆಂದು ತಿಳಿಸಿದ್ದರು.

ಇದರಂತೆ 1951ರಿಂದ ಮೊದಲುಗೊಂಡು ಇಲ್ಲಿಯವರೆಗೆ ಸಂವಿಧಾನದ ತಿದ್ದುಪಡಿಗೆ ಅವಕಾಶ ನೀಡುವ ವಿಧಿಯಾದ 368ನೇ ವಿಧಿ ಅನುಸಾರ 106 ಅಂಗೀಕೃತ ತಿದ್ದುಪಡಿಗಳಾಗಿವೆ. 1951ರಲ್ಲಿ ಜಮೀನ್ದಾರಿ ಪದ್ಧತಿಯ ರದ್ದತಿ ಸೇರಿದಂತೆ ಮೊದಲನೇ ತಿದ್ದುಪಡಿ ಹಾಗೂ ಸೆಪ್ಟೆಂಬರ್ 28, 2023 ರಲ್ಲಿ ಮಹಿಳಾ ಮೀಸಲಾತಿ ಕುರಿತು ಕೊನೆಯ ತಿದ್ದುಪಡಿ ಮಾಡಲಾಗಿದೆ.

ಒಂದೇ ಸಲ 52 ವಿಧಿಗಳ ತಿದ್ದುಪಡಿ

1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯ ಮುಖಾಂತರ ಅಂಬೇಡ್ಕರರು ನೀಡಿದ್ದ 52 ವಿಧಿಗಳನ್ನು ಒಮ್ಮೆಲೇ ತಿದ್ದುಪಡಿ ಮಾಡಲಾಗಿದೆ. ಹಾಗಾಗಿ ಸಂವಿಧಾನ ತಿದ್ದುಪಡಿ ವಿಷಯ ರಾಜಕೀಯದ ಭಾಗವಾಗಲು ಸಾಧ್ಯವೇ ಇಲ್ಲ.
ಇಂದು ಸಂವಿಧಾನ ತಿದ್ದುಪಡಿಯ ಮರು ಹುಟ್ಟಿನ ಚರ್ಚೆಯ ಹಿನ್ನೆಲೆಯಲ್ಲಿ ಸಂವಿಧಾನ ತಿದ್ದುಪಡಿಯ ಕುರಿತಾದ ಅಂಬೇಡ್ಕರರ ಅಭಿಮತವನ್ನು ಹಾಗೂ ಸಾಂವಿಧಾನಿಕ ಅವಕಾಶವನ್ನು ಅವಲೋಕನಕ್ಕೆ ಒಳಪಡಿಸಬೇಕಿದೆ.

ತಿದ್ದುಪಡಿ ನಿಯಮ ದಕ್ಷಿಣ ಆಫ್ರಿಕಾದ್ದು

ಭಾರತದಲ್ಲಿ ಪ್ರತಿಯೊಬ್ಬರೂ ಸಂವಿಧಾನದ ಅಡಿಯಲ್ಲಿ ಬದುಕು ಸಾಗಿಸಬೇಕಿದೆ. ಅದರಲ್ಲಿ ಹೇಳಿರುವ ನಿಯಮಗಳನ್ನು ಅನುಸರಿಸಲೇಬೇಕಿದೆ. ಇಂತಹ ಸಂವಿಧಾನ ಕಾಲ-ಕಾಲದ ನಿರೀಕ್ಷೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಮಾರ್ಪಾಟಾಗಬೇಕೆಂಬುದು ಅಂಬೇಡ್ಕರರ ಆಶಯವಾಗಿತ್ತು. ಅದಕ್ಕಾಗಿಯೇ ದಕ್ಷಿಣ ಆಫ್ರಿಕಾದಿಂದ ತಿದ್ದುಪಡಿ ನಿಯಮವನ್ನು ಎರವಲು ಪಡೆದರು.

ವಸ್ತುಸ್ಥಿತಿ ಹೀಗಿದ್ದರೂ, ಕೆಲವರು ಸಂವಿಧಾನದ ಕುರಿತು ಮಾತನಾಡಲೇಬಾರದು, ಸಂವಿಧಾನ ತಿದ್ದುಪಡಿಯಾಗಲೇಬಾರದು ಎಂದು ಆಗಾಗ ಬೊಬ್ಬೆ ಹೊಡೆಯುತ್ತಾ, ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುವಂತೆ ನೋಡಿಕೊಳ್ಳುತ್ತಾರೆ.
ಈ ನಿಟ್ಟಿನಲ್ಲಿ ಸಂವಿಧಾನ ರಚನಾಕರರ ದೃಷ್ಟಿ ಏನಿತ್ತು ಎಂಬುದನ್ನು ತಿಳಿದುಕೊಳ್ಳುವುದು ಅನಿವಾರ್ಯ.

ತಿದ್ದುಪಡಿ ಪರ ನಿಂತಿದ್ದ ಅಂಬೇಡ್ಕರ್‌

ಅಂದು 4 ನವೆಂಬರ್ 1948ರಂದು ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ನಿಂತ ಅಂಬೇಡ್ಕರ್ ಹೀಗೆ ಮಾತು ಮುಂದುವರಿಸುತ್ತಾರೆ. ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶವನ್ನು ನೀಡಿರುವ ಉಪಬಂಧ ಟೀಕಾಕಾರರ ತೀವ್ರ ಟೀಕೆಗೆ ಒಳಗಾಗಿದೆ. ಕರಡು ಸಂವಿಧಾನದಲ್ಲಿ ಸೂಚಿಸಿರುವ ಉಪಬಂಧಗಳು ಸಂವಿಧಾನವನ್ನು ತಿದ್ದುಪಡಿ ಮಾಡಲು ಬಹಳ ಕಷ್ಟದ ನಿಯಮ ಮಾಡಿವೆ ಎನ್ನಲಾಗಿದೆ. ಸಂವಿಧಾನವನ್ನು ಕನಿಷ್ಠಪಕ್ಷ ಮೊದಮೊದಲ ವರ್ಷಗಳಲ್ಲಿ ಸರಳ ಬಹುಮತದಿಂದ ತಿದ್ದುಪಡಿ ಮಾಡಬಹುದಾದ ಅವಕಾಶವನ್ನು ಕಲ್ಪಿಸಬೇಕಾಗಿತ್ತು ಎಂಬ ವಾದವೂ ಸೃಜಿಸಲ್ಪಟ್ಟಿದೆ.

ಸಂವಿಧಾನ ರಚನಾಸಭೆಯು ವಯಸ್ಕ ಮತದಾನದ ಆಧಾರದ ಮೇಲೆ ಚುನಾಯಿತವಾಗಿಲ್ಲವಾದರೂ, ಸರಳ ಬಹುಮತದಿಂದ ಕರಡು ಬಹುಮತವನ್ನು ಅಂಗೀಕರಿಸಿದೆ. ಅದು ವಯಸ್ಕ ಮತದಾನದ ಆಧಾರದ ಮೇಲೆ ಚುನಾಯಿತವಾಗುವ ಸಂಸತ್ತಿಗೆ, ಸರಳ ಬಹುಮತದ ಮೇಲೆ ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡುವ ಹಕ್ಕನ್ನು ಕೊಟ್ಟಿಲ್ಲ. ಇದನ್ನು ಕರಡು ಸಂವಿಧಾನದಲ್ಲಿರುವ ಒಂದು ಅಸಂಬದ್ಧತೆಯೆಂದು ಮೆರೆಸಲಾಗುತ್ತಿದೆ.

ಸಂವಿಧಾನದ ತಿದ್ದುಪಡಿಯನ್ನು ಮಾಡಲು ಅಳವಡಿಸಿರುವ ಅವಕಾಶಗಳು ಎಷ್ಟು ಸರಳವಾಗಿವೆಯೆಂದು ತಿಳಿಯಲು, ಅಮೆರಿಕ ಮತ್ತು ಆಸ್ಟ್ರೇಲಿಯಾದ ಸಂವಿಧಾನಗಳನ್ನು ಅಭ್ಯಾಸ ಮಾಡಬೇಕು. ಅವುಗಳಿಗೆ ಹೋಲಿಸಿದರೆ, ನಮ್ಮ ಕರಡು ಸಂವಿಧಾನದಲ್ಲಿ ಇರುವ ತಿದ್ದುಪಡಿ ವಿಧಿಗಳು ಬಹಳ ಸರಳವಾಗಿವೆಂಬುದು ತಿಳಿಯುತ್ತದೆ.

ಕರಡು ಸಂವಿಧಾನವು ಸಂವಿಧಾನವನ್ನು ತಿದ್ದುಪಡಿ ಮಾಡಲು ಇರುವ ಜನಮತಗಣನೆಯಂತಹ ತೊಡಕಾದ ಕ್ರಮಗಳನ್ನು ತೆಗೆದುಹಾಕಿದೆ. ತಿದ್ದುಪಡಿಗಳನ್ನು ಮಾಡುವ ಅಧಿಕಾರವನ್ನು ಕೇಂದ್ರ ಸಂಸತ್ತಿಗೆ ಮತ್ತು ರಾಜ್ಯಗಳ ಶಾಸನ ಸಭೆಗಳಿಗೆ ನೀಡಲಾಗಿದೆ. ಕೆಲವು ಸೀಮಿತ ವಿಷಯಗಳ ತಿದ್ದುಪಡಿಗಳಿಗೆ ಮಾತ್ರ, ಸಂಸತ್ತಿಗೆ ರಾಜ್ಯ ಶಾಸಕಾಂಗದ ಅನುಮೋದನೆ ಹಾಗೂ ಸಮರ್ಥನೆ ಅಗತ್ಯವಾಗಿರುತ್ತದೆ.

ಸಂವಿಧಾನದ ಉಳಿದೆಲ್ಲ ವಿಧಿಗಳನ್ನು ಸಂಸತ್ತು ತಾನೇ ತಿದ್ದುಪಡಿ ಮಾಡಬಹುದು. ಇಲ್ಲಿ ವಿಧಿಸಿರುವ ಒಂದೇ ಒಂದು ಮಿತಿಯೆಂದರೆ, ಹಾಗೆ ಮಾಡಲು ಪ್ರತಿ ಸದನದಲ್ಲಿ ಹಾಜರಿರುವ ಸದಸ್ಯರಲ್ಲಿ ಮೂರನೆಯ ಎರಡು ಭಾಗದಷ್ಟು ಸದಸ್ಯರ ಮತ್ತು ಪ್ರತಿ ಸದನದ ಸದಸ್ಯರ ಸಂಖ್ಯೆಯಲ್ಲಿ ಸದಸ್ಯರ ಸಮ್ಮತಿಯನ್ನು ಹೊಂದಿರುವುದು ಅವಶ್ಯ. ಇದಕ್ಕಿಂತ ಇನ್ನೂ ಸರಳವಾದ ಕ್ರಮವನ್ನು ಕಲ್ಪಿಸಿಕೊಳ್ಳುವುದು ಅಪೇಕ್ಷಣೀಯವಾದದಲ್ಲ. ಈ ಸಂವಿಧಾನವು ಕಾರ್ಯಸಾಧುವೂ, ನಮ್ಯವೂ ಆಗಿದೆ ಮತ್ತು ಶಾಂತಿ ಹಾಗೂ ಯುದ್ಧದ ಸಮಯಗಳಲ್ಲಿ ದೇಶದ ಏಕತೆಯನ್ನು ಕಾಪಾಡುವುದಕ್ಕೆ ಸಮರ್ಥವೂ ಆಗಿದೆಯೆಂದು ನಾನು ಭಾವಿಸಿದ್ದೇನೆ . ನಾನು ಹೀಗೆ ಹೇಳಬಹುದಾದರೆ, ಮುಂದೆ ಆಡಳಿತದಲ್ಲಿ ವ್ಯವಸ್ಥೆಯು ಕೆಟ್ಟುಹೋದ ಪಕ್ಷದಲ್ಲಿ, ಅದು ನಾವು ಒಂದು ಕೆಟ್ಟ ಸಂವಿಧಾನವನ್ನು ಹೊಂದಿದ್ದೇವೆ ಎಂಬುದನ್ನು ತೋರಿಸುವುದಿಲ್ಲ. ಆದರೆ, ಮಾನವ ಮೂಲತಃ ಕುತಂತ್ರಿ ಎಂದಷ್ಟೇ ಹೇಳಬಹುದು.

ಲೋಕಸಭಾ ಚುನಾವಣೆಯಲ್ಲಿ ಬಹುಮತ ಬಂದ್ರೆ ಸಂವಿಧಾನ ತಿದ್ದುಪಡಿ ಆಗುತ್ತಾ? ಏನಂದ್ರು ಸಂಸದ ಅನಂತಕುಮಾರ ಹೆಗ್ಡೆ?

ಮಹಿಳಾ ಮೀಸಲು ಕೂಡ ಸಂವಿಧಾನ ತಿದ್ದುಪಡಿ

ಸಂವಿಧಾನದ ತಿದ್ದುಪಡಿ ಎಷ್ಟು ಅವಶ್ಯಕ ಎಂಬುದನ್ನು ಅಂಬೇಡ್ಕರರೇ ತಿಳಿಯಪಡಿಸಿದ್ದಾರೆ. 2020ರಲ್ಲಿ ಸಂಸತ್ತಿನಲ್ಲಿ ಶೋಷಿತರ ಪರವಾಗಿರುವ ಮೀಸಲಾತಿಯ ಸ್ಥಾನಗಳು ಉಳಿದಿದ್ದೇ ಸಂವಿಧಾನಕ್ಕೆ ತಂದ 104ನೇ ತಿದ್ದುಪಡಿಯ ಮುಖಾಂತರ. ಮಹಿಳೆಯರಿಗೆ ಮೀಸಲಾತಿ ದೊರೆತದ್ದು ತಿದ್ದುಪಡಿಯ ಮೂಲಕವೇ. ತಿದ್ದುಪಡಿ ಎಂಬ ಸಾಂವಿಧಾನಿಕ ಮಂತ್ರ ದಂಡದ ಬಗೆಗೆ ರಾಜಕೀಯ ಕಾರಣಕ್ಕಾಗಿ ಅನಾರೋಗ್ಯಕರ ಚರ್ಚೆಯಾಗುವುದು ಬೇಡ.

* ಆಧಾರ- ಭಾರತ ಸಂವಿಧಾನ ರಚನಾ ಸಭೆಯ ಚರ್ಚೆಗಳು
4 ನವಂಬರ್ 1948 ,ಪುಟ ಸಂಖ್ಯೆ 59,60,61. ಸಂಪುಟ- 3

Follow Us:
Download App:
  • android
  • ios