ಪ್ರಜ್ವಲ್ ಪ್ರಕರಣವನ್ನು ಪ್ರಧಾನಿ ಮೋದಿ, ಬಿಜೆಪಿ ಹೊಣೆ ಹೊರಬೇಕೆಂಬುದು ಹಾಸ್ಯಾಸ್ಪದ: ಚೇತನ್ ಅಹಿಂಸಾ
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಏ.30): ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ. ‘ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ತಪ್ಪು ಸಾಬೀತಾದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅನ್ಯಾಯಕ್ಕೊಳಗಾದ ಮಹಿಳೆಯರು ತಮ್ಮ ಕಷ್ಟಗಳನ್ನು ವಿವರಿಸಲು ಧೈರ್ಯದಿಂದ ಮುಂದೆ ಬರುತ್ತಿರುವುದನ್ನು ನೋಡಿ ಸಂತೋಷವಾಗಿದೆ.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ‘ಸಾವಿರಾರು ನಿರ್ಭಯಾ’ಗಳಿಗೆ ಹೋಲಿಸಿದ್ದು, ಅದಕ್ಕೆ ಪ್ರಧಾನಿ ಮೋದಿ, ಬಿಜೆಪಿ ಹೊಣೆ ಹೊರಬೇಕೆಂದು ಒತ್ತಾಯಿಸುತ್ತಿರುವ ಕಾಂಗ್ರೆಸ್ ಪಕ್ಷದ ಮಹಿಳೆಯರ ನಡೆ ಹಾಸ್ಯಾಸ್ಪದವಾಗಿದೆ. ಲೈಂಗಿಕ ಹಗರಣದಲ್ಲಿ 2,900 ಪೆನ್‌ಡ್ರೈವ್ ಚಿತ್ರಗಳು, ವಿಡಿಯೊಗಳನ್ನು ಕಾರ್ಯರೂಪಕ್ಕೆ ತರಲು ಆರೋಪಿ ಪ್ರಜ್ವಲ್ ರೇವಣ್ಣ ನಡೆಸಿದ ಸಂಪೂರ್ಣ ನಿರ್ಭಯತೆಯು ನನ್ನ ಮನಸ್ಸನ್ನು ದಿಗ್ಭ್ರಮೆಗೊಳಿಸಿದೆ. ಪೆನ್‌ಡ್ರೈವ್ ಅನ್ನು ಸಾರ್ವಜನಿಕಗೊಳಿಸಿದರೆ ಅವರ ಪಕ್ಷ, ಕುಟುಂಬದವರು ಎದುರಿಸಬೇಕಾದ ಭೀಕರ ಪರಿಣಾಮಗಳ ಬಗ್ಗೆ ಯಾವುದೇ ಭಯವಿರಲಿಲ್ಲವೇ? ಎಂದು ಚೇತನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಮತ್ತು ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಮತ್ತು ಅವರ ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಗೃಹ ಇಲಾಖೆ ಆದೇಶ ಹೊರಡಿಸಿದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳ ಕುರಿತು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.