ಬಿಡದಿ ಟೌನ್‌ಶಿಪ್ ಯೋಜನೆಗೆ ಒಂದಿಂಚು ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲ. ಈ ಯೋಜನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಮಾತ್ರವಲ್ಲ ಯಾರು ಬೇಕಾದರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ರಾಮನಗರ : ರಾಮನಗರವು ನನ್ನ ಕರ್ಮಭೂಮಿ, ರಾಜಕೀಯ ನೆಲೆ. ಇಲ್ಲಿನ ಜನರು ನನ್ನನ್ನು ಮನೆ ಮಗನಂತೆ ಸ್ವೀಕರಿಸಿ ನಾಲ್ಕು ಚುನಾವಣೆಗಳಲ್ಲಿ ಅ‍ವರೇ ಗೆಲ್ಲಿಸಿದ್ದಾರೆ. ನನ್ನ ಅಂತಿಮ ದಿನದ ರಾಜಕೀಯ ಜೀವನ ಹಾಗೂ ಹೋರಾಟಗಳು ರಾಮನಗರಲ್ಲಿಯೇ ಇರಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಎಚ್.ಡಿ.ಕುಮಾರಸ್ವಾಮಿ

ಬಿಡದಿ ಹೋಬಳಿಯ ಬೈರಮಂಗಲ ಗ್ರಾಮದ ಭಕ್ತಾಂಜನೇಯ ದೇವಾಲಯದ ಆವರಣದಲ್ಲಿ ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಂಡ್ಯದ ಜನರು ಮತ್ತು ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಅಲ್ಲಿ ಸ್ಪರ್ಧೆ ಮಾಡಬೇಕಾಯಿತು. ನನ್ನನ್ನು ರಾಮನಗರಿಂದ ಓಡಿಸಲು ಯಾರಿಂದಲೂ ಆಗುವುದಿಲ್ಲ. ನನ್ನ ರಾಜಕೀಯ ಜೀವನ ರಾಮನಗರದಲ್ಲಿ ಆರಂಭವಾಯಿತು. ಇದು ಅಂತಿಮ ರಾಜಕೀಯ ನೆಲೆ. ನನ್ನ ಜೀವನವೂ ಇಲ್ಲಿಯೇ ಮುಗಿಯಲಿದೆ ಎಂದರು.

ಕಾಂಗ್ರೆಸ್ ದುರಾಡಳಿತಕ್ಕೆ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರ ಬರುವುದು ನಿಶ್ಚಿತ. ನಾವು ಎರಡೂ ಪಕ್ಷಗಳು ಈ ಕೆಟ್ಟ ಸರ್ಕಾರವನ್ನು ಕಿತ್ತೊಗೆಯಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಡಿಕೆಶಿಗೂ ನನಗೂ ಹೋಲಿಕೆ ಮಾಡಬೇಡಿ:

ಬಿಡದಿ ಟೌನ್‌ಶಿಪ್ ಯೋಜನೆಗೆ ಒಂದಿಂಚು ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲ. ಈ ಯೋಜನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಮಾತ್ರವಲ್ಲ ಯಾರು ಬೇಕಾದರು ಬಹಿರಂಗ ಚರ್ಚೆಗೆ ಬರಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೌನ್ ಶಿಪ್ ಬೇರೆ. ಅಂದು ನಾನು ಆಲೋಚನೆ ಮಾಡಿದ್ದ ಯೋಜನೆಯೇ ಬೇರೆ. ನಿಮ್ಮ ಜಮೀನು ಇಟ್ಟುಕೊಂಡು ಹಣ ಸಂಪಾದಿಸಲು ಹೊರಟಿದ್ದಾರೆ. ಶಿವಕುಮಾರ್ ಗೂ ನನಗೂ ಹೋಲಿಕೆ ಮಾಡಬೇಡಿ. ನಾನು ಅವರಂತೆ ದಬ್ಬಾಳಿಕೆ ನಡೆಸಿಲ್ಲ. ಕಲ್ಲು ಬಂಡೆ ಒಡೆದು ಜೀವನ ನಡೆಸಿಲ್ಲ. ನಾನು ಮನಸ್ಸು ಮಾಡಿದ್ದರೆ ಅಧಿಕಾರದಲ್ಲಿದ್ದಾಗ ಶಿವಕುಮಾರರ ಅಪ್ಪನಂತೆ ಆಸ್ತಿ ಮಾಡುತ್ತಿದ್ದೆ. ಅವರಪ್ಪ ಹಳ್ಳಿಗಳಲ್ಲಿ ಕಡಲೆ ಬೀಜ ಅಳೆಯುತ್ತಿದ್ದರಂತೆ. ಅವರಪ್ಪನನ್ನೂ ಹೋಲಿಕೆ ಮಾಡಿಕೊಳ್ಳಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದರು.