ಬಿಡದಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ವಿಚಾರವಾಗಿ ಜೆಡಿಎಸ್‌ ರಾಜಕಾರಣ ಮಾಡುತ್ತಿದ್ದು, ಅದಕ್ಕೆ ರಾಜಕೀಯವಾಗಿಯೇ ಉತ್ತರ ನೀಡಲಾಗುವುದು ಬಮುಲ್‌ ಅಧ್ಯಕ್ಷ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ.

ಬೆಂಗಳೂರು (ಸೆ.30): ಬಿಡದಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ವಿಚಾರವಾಗಿ ಜೆಡಿಎಸ್‌ ರಾಜಕಾರಣ ಮಾಡುತ್ತಿದ್ದು, ಅದಕ್ಕೆ ರಾಜಕೀಯವಾಗಿಯೇ ಉತ್ತರ ನೀಡಲಾಗುವುದು. ಎಚ್‌.ಡಿ. ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೂಪಿಸಿದ ಯೋಜನೆ ನಾವು ಜಾರಿ ಮಾಡುತ್ತಿದ್ದು, ಅದಕ್ಕೆ ಈಗ ಕುಮಾರಸ್ವಾಮಿ ಅವರೇ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ ಎಂದು ಬಮುಲ್‌ ಅಧ್ಯಕ್ಷ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ.

ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್‌ ಯೋಜನೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೂಪಿಸದ ಯೋಜನೆಯಾಗಿದೆ. ಈಗ ನಾವು ಯೋಜನೆ ಅನುಷ್ಠಾನಕ್ಕೆ ಮುಂದಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದರು. ಕೆಲವರು ಜೈಲಿಗೆ ಹೋಗುವ ಕಾಲ ಹತ್ತಿರ ಬರುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಮಾಹಿತಿಯಿಲ್ಲ. ಅವರು ಕೇಂದ್ರ ಸಚಿವರಾಗಿದ್ದಾರೆ. ಅವರಿಗೆ ಎಲ್ಲ ಮಾಹಿತಿ ಇರಬೇಕು ಎಂದರು.

ಪ್ರಧಾನಿ ಮನೆ ರಸ್ತೆ ಗುಂಡಿ ಪೋಸ್ಟರ್‌ ಬಿಡುಗಡೆ: ರಸ್ತೆ ಗುಂಡಿ ವಿಚಾರವಾಗಿ ಡಿ.ಕೆ. ಶಿವಕುಮಾರ್‌ ವಿರುದ್ಧ ಬಿಜೆಪಿ ಪೋಸ್ಟರ್‌ ಬಿಡುಗಡೆಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್‌, ನಾವು ಪ್ರಧಾನಮಂತ್ರಿ ಅವರ ನಿವಾಸದ ರಸ್ತೆಯಲ್ಲಿನ ಗುಂಡಿಗಳಿರುವ ಪೋಸ್ಟರ್‌ ಬಿಡುಗಡೆ ಮಾಡಿದ್ದೇವೆ. ಅದನ್ನೂ ಬಿಜೆಪಿ ನಾಯಕರು ನೋಡಬೇಕು ಎಂದು ತಿಳಿಸಿದರು.

ರೈತರಿಗೆ ಅನುಕೂಲ ಕಲ್ಪಿಸುವುದೇ ಗುರಿ

ಹಾಲು ಉತ್ಪಾದಕ, ಗ್ರಾಹಕ ಹಾಗೂ ಹಾಲು ಒಕ್ಕೂಟದ ಸಿಬ್ಬಂದಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದೇ ನನ್ನ ಗುರಿ ಎಂದು ತಿಳಿಸಿದರು. ಒಕ್ಕೂಟದ ನಷ್ಟ ಸರಿದೂಗಿಸುವುದು ನನ್ನ ಮೊದಲ ಆದ್ಯತೆ. ಕಾಲ್ ಸೆಂಟರ್ ಮೂಲಕ ರೈತರ, ಗ್ರಾಹಕರ ದಿನನಿತ್ಯದ ಸಮಸ್ಯೆಗಳನ್ನು 24 ಗಂಟೆಯೊಳಗೆ ಬಗೆಹರಿಸಲು ಪ್ರಯತ್ನ, ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸುವ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಹೀಗೆ ಹಲವಾರು ಸುಧಾರಣೆಗಳನ್ನು ಮುಂದಿಟ್ಟುಕೊಂಡು ಒಕ್ಕೂಟವನ್ನು ಲಾಭದಾಯಕವಾಗಿ ಬೆಳೆಸುವ ಚಿಂತನೆ ನಡೆಸಿರುವುದಾಗಿ ಹೇಳಿದರು.

ತಾಲೂಕು ಹಾಲು ಉತ್ಪಾದಿಸುವ ರೈತರು ಗುಣಮಟ್ಟದಿಂದ ಕೂಡಿದ 4 ಲಕ್ಷ ಲೀಟರ್ ಉತ್ಪಾದನೆ ಮಾಡಿದಲ್ಲಿ, ರೈತರಿಗೆ ಹೆಚ್ಚಿನ ದರ ನೀಡಲು ಅನುಕೂಲವಾಗುವುದಾಗಿ ತಿಳಿಸಿದರು. ಬೆಂಗಳೂರು ಹಾಲು ಒಕ್ಕೂಟ ಲಾಭ ಗಳಿಸಬೇಕಾದರೆ ರೈತರ, ಗ್ರಾಹಕರ ಸಹಕಾರ ಅಗತ್ಯ, ನಂದಿನಿ ಉತ್ಪನ್ನಗಳನ್ನೇ ಜನ ಕೊಂಡುಕೊಳ್ಳುವ ರೀತಿ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಇದಕ್ಕೆ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕರಿಸಿದಾಗ ಒಕ್ಕೂಟ ಲಾಭ ಗಳಿಸುವುದರಲ್ಲಿ ಸಂದೇಹವಿಲ್ಲ ಎಂದರು.