Omicron ಕರ್ನಾಟಕದಲ್ಲಿ ಈಗಾಗಲೇ ಹಬ್ಬಿದೆಯಾ?: ಆಘಾತಕಾರಿ ಸುದ್ದಿ ನೀಡಿದ ವೈದ್ಯರು
* ಒಮಿಕ್ರೋನ್ ರಾಜ್ಯದಲ್ಲಿ ಈಗಾಗಲೇ ಹಬ್ಬಿರಬಹುದು
* ವಿದೇಶದಿಂದಲೇ ಬರಬೇಕೆಂದೇನಿಲ್ಲ: ಡಾ. ಮಂಜುನಾಥ್
* ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕಿನಿಂದ ಸಾಬೀತು
ಬೆಂಗಳೂರು(ಡಿ.03): ಒಮಿಕ್ರೋನ್ ವಿದೇಶದಿಂದಲೇ(Foreign) ಬರಬೇಕು ಎಂದೇನೂ ಇಲ್ಲ. ನಮ್ಮಲ್ಲೇ ರೂಪಾಂತರ ಆಗಿಯೂ ಇರಬಹುದು. ಹೀಗಾಗಿ ರಾಜ್ಯದಲ್ಲಿ ಒಮಿಕ್ರೋನ್(Omicron) ಹರಡುವ ಸಾಧ್ಯತೆಯಿದ್ದು, ಕೊರೋನಾ ಲಸಿಕೆಯ ಮೂರನೇ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಇದು ಸಕಾಲ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಮಂಜುನಾಥ್(Dr Manjunath) ಹೇಳಿದ್ದಾರೆ.
ರಾಜ್ಯದಲ್ಲಿ(Karnataka) ಪತ್ತೆಯಾಗಿರುವ ಒಂದು ಪ್ರಕರಣದಲ್ಲಿ ಸೋಂಕಿತನಿಗೆ ಟ್ರಾವೆಲ್ ಹಿಸ್ಟರಿ(Travel History) ಇದೆ. ಮತ್ತೊಂದು ಪ್ರಕರಣದಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದಿರುವ ಪ್ರಕರಣ ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಈಗಾಗಲೇ ಒಮಿಕ್ರೋನ್ ಹರಡಿದೆ ಎಂಬುದು ಸಾಬೀತಾಗಿದೆ. ಒಂದು ದೇಶದಲ್ಲಿ(India) ಪತ್ತೆಯಾದ ತಳಿ ಮತ್ತೊಂದು ದೇಶದಲ್ಲಿ ಇರುವುದು ಸಹಜ ಎಂದರು.
ಕೊರೋನಾ(Coronavirus) ವೈರಸ್ ಪ್ರತಿ ಆರು, ಒಂಬತ್ತು ತಿಂಗಳಿಗೆ ರೂಪ ಬದಲಾಯಿಸುತ್ತ ಹೋಗುತ್ತದೆ. ರೂಪಾಂತರ ಗೊಳ್ಳುವುದು ವೈರಸ್‌ನ ಸಹಜ ಗುಣ. ಈ ಹಿಂದೆ ಅಲ್ಫಾ, ಬೀಟಾ, ಕಪ್ಪ ರೂಪಾಂತರ ಬಂತು. ಆ ಬಳಿಕ ಡೆಲ್ಟಾ ರೂಪಾಂತರ ಬಂತು. ಈಗ ಒಮಿಕ್ರೋನ್ ಬಂದಿದೆ. ಒಮಿಕ್ರೋನ್ ವೇಗವಾಗಿ ಹರಡುತ್ತದೆ ಆದರೆ ತೀವ್ರತೆ ಕಡಿಮೆ ಇದೆ. ಒಮಿಕ್ರೋನ್ ಪ್ರಕರಣಗಳು ಹೆಚ್ಚು ಪತ್ತೆಯಾಗಿರುವ ದಕ್ಷಿಣ ಆಫ್ರಿಕಾದಲ್ಲಿಯೂ(South Africa) ಸಾವಿನ ಪ್ರಮಾಣ, ಐಸಿಯು ದಾಖಲಾತಿ ಹೆಚ್ಚಾಗಿಲ್ಲ. ರಾಜ್ಯದ ಇಬ್ಬರು ಸೋಂಕಿತರು ಕೂಡ ಗುಣಮುಖರಾಗಿದ್ದಾರೆ. ಆದ್ದರಿಂದ ಜನರು ಗಾಬರಿ ಪಡುವ ಅಗತ್ಯವಿಲ್ಲ. ಆದರೆ ಕೋವಿಡ್ ಮುನ್ಚೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಶೇ. 90 ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಶೇ. 60 ರಷ್ಟು ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಆದರೆ ಆಫ್ರಿಕಾ ದೇಶದಲ್ಲಿ ಶೇ.10ರಷ್ಟು ಮಾತ್ರ ಲಸಿಕೆ(Vaccine) ತೆಗೆದುಕೊಂಡಿದ್ದಾರೆ. ಆದ್ದರಿಂದ ಅಲ್ಲಿ ಹೆಚ್ಚು ಸೋಂಕು ಹರಡುತ್ತಿದೆ. ಆದ್ದರಿಂದ ಲಸಿಕೆ ಪಡೆಯಬೇಕೆಂದರು.
ಬೂಸ್ಟರ್ ಡೋಸ್‌ಗೆ ಒಲವು:
ಆರೋಗ್ಯ ಕಾರ್ಯಕರ್ತರು, ದೀರ್ಘಕಾಲದಿಂದ ಮಧುಮೇಹ(Diabetes) ಸೇರಿದಂತೆ ವಿವಿಧ ಸಹ ಅಸ್ವಸ್ಥತೆ ಹೊಂದಿರುವವರಿಗೆ ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್‌ನ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆದೇಶ ನೀಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಜಯದೇವದ ವೈದ್ಯರಿಗೆ ಕೋವಿಡ್:
ಜಯದೇವದ ವೈದ್ಯರಿಗೆ ಕೋವಿಡ್ ಬಂದು 12-13 ದಿನ ಆಗಿದೆ. ಅವರು ಮನೆಯಲ್ಲೇ ಇದ್ದರು. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಆಗಿರಲಿಲ್ಲ. ಅವರು ಭಾಗವಹಿಸಿದ್ದ ಕಾನ್ಫರೆನ್ಸ್‌ನಲ್ಲಿ ವಿದೇಶದಿಂದ ಬಂದು ಯಾರು ಉಪನ್ಯಾಸ ಕೊಟ್ಟಿರಲಿಲ್ಲ ಎಂದರು
ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮ: ಒಮಿಕ್ರೋನ್ ಗುಣ ಲಕ್ಷಣ
ಅತಿ ವೇಗವಾಗಿ ಹರಡುವ ಮಾದರಿ ಎಂದು ವಿಶ್ವಸಂಸ್ಥೆ ಹೇಳಿದೆ. ಈ ರೂಪಾಂ ತರಿಯ ಸ್ಪೈಕ್ ಪೊ್ರೀಟೀನ್‌ಗಳು 30ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿವೆ. ಹೀಗಾಗಿ, ಲಸಿಕೆಯ ಪರಿಣಾಮವನ್ನೂ ಕುಗ್ಗಿಸಿ ಸೋಂಕು ಉಂಟು ಮಾಡಬಲ್ಲದು ಎಂಬುದು ಈ ವೈರಾಣು ಬಗೆಗಿನ ಆತಂಕಕ್ಕೆ ಮುಖ್ಯ ಕಾರಣ. ಈ ವೈರಾಣು ರೂಪಾಂತರಿ ಡೆಲ್ಟಾಗಿಂತ ದುಪ್ಪಟ್ಟು ವೇಗವಾಗಿ ಹರಡುತ್ತದೆ ಎಂದು ವಿಶ್ವಸಂಸ್ಥೆ ಹೇಳಿದ್ದರೂ ಡೆಲ್ಟಾಗಿಂತ ಹೆಚ್ಚು ತೀವ್ರತೆ ಹಾಗೂ ಹರಡುವಿಕೆ ಇದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ರೋಗ ಲಕ್ಷಣ
ಈವರೆಗೆ ವರದಿಯಾಗಿರುವ ಪ್ರಕರಣಗಳ ಪ್ರಕಾರ ಒಮಿಕ್ರೋನ್ ಸೋಂಕಿತರಲ್ಲಿ ಒಣಕೆಮ್ಮು, ಜ್ವರ, ರಾತ್ರಿ ವೇಳೆ ಬೆವರು, ತೀವ್ರ ಮೈ-ಕೈ ನೋವು, ಆಯಾಸ ಸಾಮಾನ್ಯ ರೋಗ ಲಕ್ಷಣಗಳು.
ಮುನ್ನೆಚ್ಚರಿಕೆ ಏನು?
* ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು
* ಕೈಗಳ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
* ಆದಷ್ಟು ಬೇಗ ಎರಡೂ ಡೋಸ್ ಲಸಿಕೆ ಪಡೆಯಬೇಕು
* ಸಣ್ಣ ಪುಟ್ಟ ಜ್ವರ, ಮೈ ಕೈ ನೋವು, ತಲೆ ನೋವು ಇದ್ದರೂ ನೆಪ ನೀಡದೆ ಸೋಂಕು ಪರೀಕ್ಷೆ ಮಾಡಿಕೊಳ್ಳಿ
* ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದ ಹಾಗೂ ಜನದಟ್ಟಣೆ ಹೆಚ್ಚಿರುವ ಒಳಾಂಗಣ ಪ್ರದೇಶಕ್ಕೆ ಹೋಗಬಾರದು