Asianet Suvarna News Asianet Suvarna News

ಸರ್ಕಾರಿ ಏಜೆನ್ಸಿ ವಾಹನಗಳಿಗೂ ಲಾಂಛನ ನಿಷಿದ್ಧ: ಹೈಕೋರ್ಟ್‌ ಆದೇಶ

ಬಿಬಿಎಂಪಿ, ಬಿಡಿಎ, ಬೆಸ್ಕಾಂನಂತಹ ಸಂಸ್ಥೆಗಳಿಗೆ ಅನ್ವಯ| ನಂಬರ್‌ ಪ್ಲೇಟ್‌ನಲ್ಲಿ ‘ಕರ್ನಾಟಕ ಸರ್ಕಾರ’ ಪದ ಬಳಸುವಂತಿಲ್ಲ| ರಾಜ್ಯ ಸರ್ಕಾರದ ಲಾಂಛನ ಅಳವಡಿಸುವುದಕ್ಕೆ ಹೈಕೋರ್ಟ್‌ ಬ್ರೇಕ್‌| 

Do Not Use State Government Logo on Agency Vehicles Says Karnataka High Court grg
Author
Bengaluru, First Published Apr 19, 2021, 11:53 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು(ಏ.19): ಖಾಸಗಿ ವ್ಯಕ್ತಿಗಳು ತಮ್ಮ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ಅನಧಿಕೃತವಾಗಿ ‘ಕರ್ನಾಟಕ ಸರ್ಕಾರ’ ಅಥವಾ ‘ಗವರ್ನ್‌ಮೆಂಟ್‌ ಆಫ್‌ ಕರ್ನಾಟಕ’ ಎಂಬ ಪದ ಮತ್ತು ರಾಜ್ಯ ಸರ್ಕಾರದ ಲಾಂಛನ ಹಾಗೂ ಹುದ್ದೆಗಳನ್ನು ಅಳವಡಿಸುವುದಕ್ಕೆ ಕಡಿವಾಣ ಹಾಕಿರುವ ಹೈಕೋರ್ಟ್‌, ಇದೀಗ ಸರ್ಕಾರದ ಅಧೀನ ಸಂಸ್ಥೆಗಳು-ಏಜೆನ್ಸಿಗಳ ವಾಹನಗಳಿಗೂ ಈ ರೀತಿ ಅನಧಿಕೃತ ನಂಬರ್‌ ಪ್ಲೇಟ್‌ ಅಳವಡಿಸುವುದಕ್ಕೆ ಬ್ರೇಕ್‌ ಹಾಕಿದೆ.

‘ಜಿ’ ಅಕ್ಷರದೊಂದಿಗೆ ವಿಶೇಷವಾಗಿ (ಗವರ್ನ್‌ಮೆಂಟ್‌) ನೋಂದಣಿ ಮಾಡಿದ ಸರ್ಕಾರದ ವಾಹನಗಳು ಹೊರತುಪಡಿಸಿ, ಸರ್ಕಾರದ ಅಧೀನ ಸಂಸ್ಥೆಗಳು/ಏಜೆನ್ಸಿಗಳು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತ್ತು ಕರ್ನಾಟಕ ವಸತಿ ಮಂಡಳಿ(ಕೆಎಚ್‌ಬಿ), ಕರ್ನಾಟಕ ರಾಜ್ಯ ಹಣಕಾಸು ನಿಗಮ(ಕೆಎಫ್‌ಎಸ್‌ಸಿ), ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌(ಎಂಎಸ್‌ಐಎಲ್‌), ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ(ಕೆಪಿಟಿಸಿಎಲ್‌), ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ದಂತಹ ಶಾಸನಬದ್ಧ ಸಂಸ್ಥೆಗಳ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ರಾಜ್ಯ ಸರ್ಕಾರದ ಲಾಂಛನ, ಹುದ್ದೆ ಮತ್ತು ಕರ್ನಾಟಕ ಸರ್ಕಾರ ಅಥವಾ ಗವರ್ನ್‌ಮೆಂಟ್‌ ಆಫ್‌ ಕರ್ನಾಟಕ ಎಂಬ ಪದ ಬಳಕೆ ಮಾಡಬಾರದು ಎಂದು ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

ರೋಷನ್‌ ಬೇಗ್‌ ಆಸ್ತಿ ಜಪ್ತಿಗೆ ವಿಳಂಬ: ಹೈಕೋರ್ಟ್‌ ಅಸಮಾಧಾನ

ಈ ಕುರಿತು ಮಂಗಳೂರಿನ ನಿವಾಸಿ ಆನಂದ್‌ ಶೆಟ್ಟಿ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರು ಈ ಆದೇಶ ನೀಡಿದ್ದಾರೆ.

ಜಿ ಅಕ್ಷರದೊಂದಿಗೆ ವಿಶೇಷ ನೋಂದಣಿ ಮಾಡಿದ ಸರ್ಕಾರಿ ವಾಹನಗಳನ್ನು ಹೊರತುಪಡಿಸಿ ಸರ್ಕಾರದ ಅಧೀನ ಸಂಸ್ಥೆಗಳು, ಏಜೆನ್ಸಿಗಳು ಮತ್ತು ಬಿಡಿಎ, ಬಿಬಿಎಂಪಿಯಂತಹ ಶಾಸನಬದ್ಧ ಸಂಸ್ಥೆಗಳು ಸರ್ಕಾರದ ಲಾಂಛನ, ಹುದ್ದೆ ಮತ್ತು ಕರ್ನಾಟಕ ಸರ್ಕಾರ ಎಂಬ ಪದವನ್ನು ನಂಬರ್‌ ಪ್ಲೇಟ್‌ ಮೇಲೆ ಅಳವಡಿಸುವುದು ಮೋಟಾರು ವಾಹನಗಳ ಧಿನಿಯಮ 1989ರ ಸೆಕ್ಷನ್‌ 50 ಮತ್ತು 51ರ ಉಲ್ಲಂಘನೆಯಾಗಲಿದೆ. ‘ಜಿ’ ಅಕ್ಷರದೊಂದಿಗೆ ವಿಶೇಷವಾಗಿ ನೋಂದಣಿ ಮಾಡಿದ ಸರ್ಕಾರಕ್ಕೆ ಸೇರಿದ ವಾಹನವನ್ನು ಸಂಬಂಧಪಟ್ಟ ಅಧಿಕಾರಿ ಬಳಕೆ ಮಾಡುತ್ತಿದ್ದರೆ ಮಾತ್ರ ಆ ವಾಹನದ ನಂಬರ್‌ ಪ್ಲೇಟ್‌ ಮೇಲೆ ಸರ್ಕಾರಿ ಲಾಂಛನ, ಹುದ್ದೆ ಮತ್ತು ಕರ್ನಾಟಕ ಸರ್ಕಾರ ಪದವನ್ನು ಅಳವಡಿಸಬಹುದು. ಮತ್ಯಾರೂ ಸಹ ತಮ್ಮ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ಹುದ್ದೆ, ಹೆಸರು ಮತ್ತು ಚಿಹ್ನೆಗಳನ್ನು ಹಾಕುವಂತಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಲಾಗಿದೆ. ಅಲ್ಲದೆ, ಈ ಆದೇಶವನ್ನು ಜಾರಿಗೊಳಿಸಿದ ಸಂಬಂಧ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿದೆ.

ಜಾರಕಿಹೊಳಿ ಸಿ.ಡಿ.ಕೇಸ್: ಎಸ್‌ಐಟಿ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್!

ಸುಧಾರಿತ ತಂತ್ರಜ್ಞಾನ ಬಳಸಿ

ಖಾಸಗಿ ವ್ಯಕ್ತಿಗಳು ತಮ್ಮ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ಅನಧಿಕೃತವಾಗಿ ಸರ್ಕಾರಿ ಲಾಂಛನ, ಹುದ್ದೆ ಮತ್ತು ಕರ್ನಾಟಕ ಸರ್ಕಾರ ಪದವನ್ನು ಅಳವಡಿಸುವುದನ್ನು ತಡೆಯಲು ಬೆಂಗಳೂರು ನಗರದಲ್ಲಾದರೂ ರಾಜ್ಯ ಸಾರಿಗೆ ಮತ್ತು ಪೊಲೀಸ್‌ ಇಲಾಖೆಯು ಸುಧಾರಿತ ತಂತ್ರಜ್ಞಾನ ಬಳಸಬೇಕು. ಬೆಂಗಳೂರಿನ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅವುಗಳ ದೃಶ್ಯಗಳ ಮೂಲಕ ಟ್ರಾಫಿಕ್‌ ಸಿಗ್ನಲ್‌ ಜಂಪಿಂಗ್‌ ಅಪರಾಧ ಮಾಡಿದ ವಾಹನ ಸವಾರರನ್ನು ಪತ್ತೆ ಹಚ್ಚಲಾಗುತ್ತಿದೆ. ಇಂತಹ ಸುಧಾರಿತ ತಂತ್ರಜ್ಞಾನ ಲಭ್ಯವಿದ್ದರೆ, ಅನಧಿಕೃತವಾಗಿ ಸರ್ಕಾರಿ ಲಾಂಛನ, ಹುದ್ದೆ ಮತ್ತು ಕರ್ನಾಟಕ ಸರ್ಕಾರ ಪದವನ್ನು ನಂಬರ್‌ ಪ್ಲೇಟ್‌ ಮೇಲೆ ಅಳವಡಿಸಿದ ವಾಹನಗಳನ್ನು ಪತ್ತೆ ಹಚ್ಚಿ ದೂರು ದಾಖಲಿಸಬಹುದು. ಈ ಸಂಬಂಧ ನಗರ ಸಂಚಾರ ವಿಭಾಗದ ಪೊಲೀಸರಿಗೆ ನಗರ ಪೊಲೀಸ್‌ ಆಯುಕ್ತರು ಸೂಕ್ತ ನಿರ್ದೇಶಿಸಬೇಕು. ಸಾರಿಗೆ ಇಲಾಖೆಯು ಸಂಚಾರಿ ಪೊಲೀಸರ ನೆರವು ಪಡೆದುಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
 

Follow Us:
Download App:
  • android
  • ios