ಬೆಳಗ್ಗೆ 11 ರಿಂದ 4 ಗಂಟೆವರೆಗೆ ಹೊರಾಂಗಣ ಸಭೆ, ಸಮಾರಂಭ ಮಾಡುವಂತಿಲ್ಲ, ಅನಿವಾರ್ಯವಾಗಿದ್ದರೆ ಪೆಂಡಾಲ್ ಸೇರಿ ಅಗತ್ಯ ವ್ಯವಸ್ಥೆ ಕಡ್ಡಾಯ: ಆರೋಗ್ಯ ಇಲಾಖೆ
ಬೆಂಗಳೂರು(ಏ.27): ರಾಜ್ಯದಲ್ಲಿ ಬೇಸಿಗೆಯಿಂದ ಉಷ್ಣಾಂಶ ಹೆಚ್ಚಾಗಿರುವುದರಿಂದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊರಾಂಗಣದಲ್ಲಿ ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಜನರನ್ನು ಸೇರಿಸಿ ಸಭೆ, ಸಮಾರಂಭ ನಡೆಸಬಾರದು, ಒಂದು ವೇಳೆ ಜನರನ್ನು ಸೇರಿಸಿದರೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಸುತ್ತೋಲೆ ಹೊರಡಿಸಿದ್ದು, ಬೇಸಿಗೆ ಹೆಚ್ಚುತ್ತಿರುವುದರಿಂದ ಉಷ್ಣಾಂಶ ಹೆಚ್ಚಾಗಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಇದನ್ನು ನಿಭಾಯಿಸಲು ಬಿಸಿಲಿನ ಪ್ರಖರತೆ ಹೆಚ್ಚಿರುವಂತಹ ಬೆಳಗ್ಗೆ 11 ರಿಂದ ಸಂಜೆ 4 ಗಂಟೆ ಅವಧಿಯಲ್ಲಿ ಹೊರಾಂಗಣ ಪ್ರದೇಶಗಳಲ್ಲಿ ಸಭೆ, ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ತಿಳಿಸಲಾಗಿದೆ.
Temperature Hike: ಶಿರಸಿ 38 ಡಿಗ್ರಿ ಉಷ್ಣಾಂಶ ದಾಖಲು, ತತ್ತರಿಸಿದ ಜನತೆ, ಜಾನುವಾರುಗಳು!
ಒಂದು ವೇಳೆ ಅನಿವಾರ್ಯವಾಗಿ ಆಯೋಜಿಸಬೇಕಿದ್ದರೆ ಭಾಗವಹಿಸುವ ಸಭಿಕರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಅಗತ್ಯ ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಜತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸೂಚಿಸಲಾಗಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಅಂಶಗಳ ಪಾಲನೆ ಮಾಡುವುದು ಕಡ್ಡಾಯ. ಇದನ್ನು ಬಿಬಿಎಂಪಿ ಹಾಗೂ ಸಂಬಂಧಪಟ್ಟ ಜಿಲ್ಲಾಡಳಿತಗಳು ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
