ಐಶ್ವರ್ಯ ಗೌಡ ನಡೆಸಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ. ಸುರೇಶ್‌ಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಜೂನ್ 19 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಡಿ.ಕೆ. ಸುರೇಶ್ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು (ಜೂ.17): ಐಶ್ವರ್ಯ ಗೌಡ ಎಂಬುವರು ನಡೆಸಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರಿಗೆ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ) ಸಮನ್ಸ್ ಜಾರಿಗೊಳಿಸಿದೆ. ಗುರುವಾರ (ಜೂ.19) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಶ್ವರ್ಯ ಗೌಡ ಈ ಹಿಂದೆ ತಮ್ಮನ್ನು ಡಿ.ಕೆ. ಸುರೇಶ್ ಅವರ ತಂಗಿ ಎಂದು ಪರಿಚಯಿಸಿಕೊಂಡು ಹಲವು ಜನರನ್ನು ವಂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಡಿ ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಯು ನೀಡಿದ ಹೇಳಿಕೆ ಮತ್ತು ದಾಖಲೆಗಳ ಆಧಾರದಲ್ಲಿ ಡಿ.ಕೆ. ಸುರೇಶ್ ಅವರನ್ನು ವಿಚಾರಣೆಗೆ ಕರೆದಿದೆ.

ಸಮನ್ಸ್ ಕುರಿತು ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ನಾನು ಮಧ್ಯಾಹ್ನ 12.30ಕ್ಕೆ ಮನೆಯಲ್ಲಿ ಇರಲಿಲ್ಲ. ಆಗ ಇಡಿ ಅಧಿಕಾರಿಗಳು ಬಂದು ಸಮನ್ಸ್ ನೀಡಿದರು. ಪರಿಶೀಲನೆ ನಡೆಸಿದಾಗ ಅದು ಐಶ್ವರ್ಯ ಗೌಡ ಸಂಬಂಧಪಟ್ಟ ಪ್ರಕರಣ ಎಂಬುದು ತಿಳಿದುಬಂತು. ಅವರು 19ರಂದು ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ಆದರೆ ಆ ದಿನ ನನ್ನ ಪೂರ್ವನಿಗದಿತ ಕಾರ್ಯಕ್ರಮವಿದ್ದು, ವಿಚಾರಣೆಗೆ ಹಾಜರಾಗುವುದಕ್ಕಾಗಿ ಸೋಮವಾರ ಬರುವೆ ಎಂದು ಅವರಿಗೆ ಲಿಖಿತದಲ್ಲಿ ತಿಳಿಸಿರುತ್ತೇನೆ' ಎಂದು ಸ್ಪಷ್ಟಪಡಿಸಿದರು.

'ಐಶ್ವರ್ಯ ಗೌಡ ಅವರೊಂದಿಗೆ ನನ್ನ ಯಾವುದೇ ವೈಯಕ್ತಿಕ ಅಥವಾ ಹಣಕಾಸು ವ್ಯವಹಾರಗಳಿಲ್ಲ. ಕೇವಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭೇಟಿ ಮಾಡಿದ್ದೇವೆ ಅಷ್ಟೇ. ನನ್ನ ತಂಗಿ ಎಂದು ನನ್ನ ಹೆಸರನ್ನು ಬಳಸಿಕೊಂಡು ಅವರು ಜನರನ್ನು ಮೋಸಗೊಳಿಸಿದ್ದಾರೆ. ಈ ಕುರಿತಂತೆ ನಾನು ಕೂಡ ದೂರು ನೀಡಿದ್ದೇನೆ. ನನ್ನ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿವೆ. ಇಡಿ ಏನು ಕೇಳುತ್ತದೆ ಎಂಬುದನ್ನು ನೋಡಬೇಕು. ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಡಿ.ಕೆ. ಸುರೇಶ್ ತಿಳಿಸಿದರು.