ಬೆಂಗಳೂರು (ಡಿ.21): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಆಗುತ್ತಿರುವ ಎಲ್ಲ ಪರಿಣಾಮಗಳಿಗೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ಜವಾಬ್ದಾರಿ ಹೊರಬೇಕು. ಪ್ರತಿಭಟನಾಕಾರರ ಧ್ವನಿ ಹತ್ತಿಕ್ಕಲು ಮುಂದಾಗಿರುವ ಸರ್ಕಾರದ ವಿರುದ್ಧ ಜನ ದಂಗೆ ಎದ್ದಿದ್ದಾರೆ. ಯಡಿಯೂರಪ್ಪನವರೇ ನೆನಪಿಡಿ, ನಿಮ್ಮ ಪಕ್ಷದ ಅಂತ್ಯಕ್ಕೆ ಇದು ಆರಂಭ ಎಂದು ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಜತೆ ಸುದ್ದಿಗೋಷ್ಠಿ ನಡೆಸಿದ ಅವರು, ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ದೇಶದ ಐಕ್ಯತೆ, ಬಾಂಧವ್ಯ ಹಾಳು ಮಾಡಲು ಮುಂದಾಗಿದ್ದಾರೆ. ಅನಗತ್ಯವಾಗಿ ಜನರ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ. ಬ್ರಿಟಿಷರನ್ನು ಓಡಿಸಲು ಎಷ್ಟೋ ಜನ ತ್ಯಾಗ, ಬಲಿದಾನ ಮಾಡಿದರು. ಅದೇ ರೀತಿ ನಿಮ್ಮನ್ನು ಓಡಿಸಲು ಜನರು ದಂಗೆ ಆರಂಭಿಸಿದ್ದಾರೆ. ಶುಭ ಮುಹೂರ್ತ ಪ್ರಾರಂಭವಾಗಿದೆ ಎಂಬುದನ್ನು ಮರೆಯಬೇಡಿ ಯಡಿಯೂರಪ್ಪನವರೇ. ನಿಮ್ಮ ಅಂತ್ಯಕ್ಕೆ ಇದು ಆರಂಭ ಎಂದು ಎಚ್ಚರಿಸಿದರು.

ಡಿಕೆ ಸಹೋ​ದ​ರರ ಸ್ವ ಕ್ಷೇತ್ರಕ್ಕೆ ಸಿಕ್ತು ಕೇಂದ್ರದಿಂದ ಬಂಪರ್!..

ದೇಶದಲ್ಲಿ ಆಡಳಿತ ವೈಫಲ್ಯದಿಂದಾಗಿ ನಿಮ್ಮ ಮಕ್ಕಳಿಗೇ ನೀವು ಉದ್ಯೋಗ, ಅನ್ನ, ಶಿಕ್ಷಣ ನೀಡಲು ಆಗುತ್ತಿಲ್ಲ. ಅಂತಹುದರಲ್ಲಿ ನೆರೆ ದೇಶದಲ್ಲಿರುವವರನ್ನು ಅಲ್ಲಿಂದ ಓಡಿಸಿ ಕರೆದುಕೊಂಡು ಬಂದು ಇಲ್ಲಿ ಯಾವ ರೀತಿ ಸಾಕುತ್ತೀರಾ? ಇದು ಯಾವ ರೀತಿಯ ಸಿದ್ಧಾಂತ? ಇದನ್ನು ಯಾಕೆ ದೇಶದ ಮೇಲೆ ಹೇರುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಪ್ರಚೋದನೆ ನೀಡಿದ್ದು ಬಿಜೆಪಿ ನಾಯಕರೇ:

ರಾಜ್ಯದಲ್ಲಿ ಅನಗತ್ಯವಾಗಿ 144 ಸೆಕ್ಷನ್‌ ಜಾರಿ ಮಾಡಿದ್ದಾರೆ. ಬ್ರಿಟಿಷರ ಕಾಲದಲ್ಲಿ ಇದ್ದಷ್ಟೂಸ್ವಾತಂತ್ರ್ಯ ಇಲ್ಲದಂತೆ ಮಾಡಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವವರನ್ನು ಗುಂಡಿಕ್ಕಿ ಕೊಲ್ಲುವ ಮನಃಸ್ಥಿತಿಗೆ ಹೋಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪಕ್ಷದ ನಾಯಕರುಗಳಿಗೆ ನೀವು ಯಾರೂ ಹೇಳಿಕೆ ನೀಡಬಾರದು ಎಂದು ಸೂಚಿಸಿದ್ದಾರೆ. ಇದರ ಅರ್ಥ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ನಡೆಯುತ್ತಿರುವ ಎಲ್ಲ ಘಟನೆಗಳಿಗೆ ಪ್ರಚೋದನೆ ನೀಡಿದ್ದು ಬಿಜೆಪಿ ನಾಯಕರುಗಳೇ ಎಂದು ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ನಾನು ಶಾಸಕನಾಗಿದ್ದೇನೆ. ಮಂತ್ರಿಯಾಗಿದ್ದೆ. ನನ್ನ ಬಳಿ ಸ್ವಲ್ಪ ಆಸ್ತಿ ಇದೆ. ನಾನು ಬೇಕಾದರೆ ದಾಖಲೆ ತೋರಿಸುತ್ತೇನೆ. ಬಡವರು, ಹಳ್ಳಿಗರಿಗೆ ದಾಖಲೆ ತೋರಿಸಿ ಎಂದರೆ ಹೇಗೆ ತೋರಿಸುತ್ತಾರೆ. ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ಹಳ್ಳಿಯ ಜನ ನೆಲೆಸಿದ್ದಾರೆ. ಇವರು ಎಲ್ಲಿಂದ ದಾಖಲೆ ತೋರಿಸಬೇಕು. ನಾನು, ನಮ್ಮ ತಂದೆ, ತಾಯಿ, ಅಜ್ಜ-ಅಜ್ಜಿಯರು ಈ ದೇಶದಲ್ಲೇ ಹುಟ್ಟಿದ್ದೇವೆ. ಇದನ್ನು ಸಾಬೀತುಪಡಿಸಲು ನಿಮಗೆ ಪ್ರಮಾಣತ್ರ ಕೊಡಬೇಕಾ? ಕೊಡದಿದ್ರೆ ಜೈಲಿಗೆ ಹಾಕ್ತೀರಾ? ಹಾಕಿ, ಎಷ್ಟುಜನರನ್ನು ಹಾಕುತ್ತೀರಾ ಎಂದು ಪ್ರಶ್ನಿಸಿದರು.