ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಸಚಿವರಿಗೆ ಉಪಹಾರ ಏರ್ಪಡಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದೂರವಿಟ್ಟು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಗುರುವಾರ ತಮ್ಮ ಸರ್ಕಾರಿ ನಿವಾಸದಲ್ಲಿ ಪಕ್ಷದ ಸಚಿವರಿಗೆ ಉಪಾಹಾರ ಕೂಟ ಆಯೋಜಿಸಿದ್ದು, ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಚಿವ ಸಂಪುಟ ಸಭೆ ನಡೆಯುವ ದಿನ ಸಚಿವರೊಬ್ಬರ ನಿವಾಸದಲ್ಲಿ ಎಲ್ಲಾ ಸಚಿವರು ಸೇರಿ ಸಂಪುಟದಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುವ ಪೂರ್ವ ನಿರ್ಧಾರದಂತೆ ಈ ಸಭೆ ನಡೆಸಲಾಗಿದೆ ಎಂಬ ಸಮಜಾಯಿಷಿ ನೀಡಲಾಗುತ್ತಿದ್ದರೂ, ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರನ್ನು ಸಭೆಗೆ ಕರೆಯದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಶೇಷವಾಗಿ, ಸಚಿವ ಸಂಪುಟ ಪುನಾರಚನೆ ಹಾಗೂ ನಿಗಮ- ಮಂಡಳಿ ನೇಮಕಾತಿ ಪ್ರಕ್ರಿಯೆ ನಡೆದಿರುವ ಈ ಹಂತದಲ್ಲಿ ಶಿವಕುಮಾರ್ ಅವರು ಸಚಿವರ ಉಪಾಹಾರ ಕೂಟ ಆಯೋಜಿಸಿದ್ದಾರೆ. ತನ್ಮೂಲಕ ಶಕ್ತಿ ಪ್ರದರ್ಶನ ನಡೆಸಿದ್ದು, ನಿಗಮ- ಮಂಡಳಿ ಹಾಗೂ ಸಚಿವ ಸಂಪುಟ ಸ್ಥಾನ ನೀಡಿಕೆ ವೇಳೆ ತಮ್ಮ ಮಾತಿಗೆ ಮಹತ್ವ ನೀಡುವಂತೆ ನಾಯಕತ್ವದ ಮೇಲೆ ಒತ್ತಡ ಹೇರುವ ತಂತ್ರವಿದು ಎಂದು ಹೇಳಲಾಗುತ್ತಿದೆ.
ಅಲ್ಲದೆ, ಜೆಡಿಎಸ್‌ನ ನಾಯಕತ್ವದೊಂದಿಗೆ ಉತ್ತಮ ಸಂಬಂಧದ ಪರಿಣಾಮವಾಗಿ ಸರ್ಕಾರದ ನಿರ್ಧಾರಗಳಲ್ಲಿ ಡಿಕೆಶಿ ಪ್ರಭಾವ ಹೊಂದಿದ್ದರೂ, ಪಕ್ಷದಲ್ಲಿ ಹಾಗೂ ಹೈಕಮಾಂಡ್ ಮಟ್ಟದ ನಿರ್ಧಾರಗಳಲ್ಲಿ ಅಂತಹ ಮಹತ್ವ ದೊರೆಯುತ್ತಿಲ್ಲ. ಇಂತಹ ವಿಚಾರಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ ಎನ್ನಲಾಗಿದೆ.
ಇತ್ತೀಚಿನ ವಿಧಾನಪರಿಷತ್ ಚುನಾವಣೆ ಹಾಗೂ ನಾಮಕರಣದಲ್ಲೂ ಈ ನಾಯಕರ ಮಾತು ಮಾತ್ರ ನಡೆದಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಶಕ್ತಿ ಪ್ರದರ್ಶನ ನಡೆದಿದೆ. ಅಲ್ಲದೆ, ಆದಾಯ ತೆರಿಗೆ ದಾಳಿಯಂತಹ ಘಟನೆಗಳಿಂದ ಸ್ವಲ್ಪ ಹಿನ್ನಡೆ ಅನುಭವಿಸಿರುವ ಶಿವಕುಮಾರ್ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಹಾಗೂ ಹಿಡಿತವನ್ನು ಪ್ರದರ್ಶಿಸಲು ಈ ಸಭೆಯನ್ನು ಆಯೋಜಿಸಿದ್ದಾರೆ ಎನ್ನಲಾಗುತ್ತಿದೆ.
ಈ ಸಭೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾಂಗ್ರೆಸ್ ಸಚಿವರು ಪಾಲ್ಗೊಂಡಿದ್ದು ಸಹ ಶಿವಕುಮಾರ್ ಸಚಿವ ಸಂಪುಟದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ ಎಂಬುದನ್ನು ಬಿಂಬಿಸುತ್ತದೆ ಎಂದೇ ಅವರ ಆಪ್ತರು ಹೇಳುತ್ತಾರೆ. ಸಭೆಯಲ್ಲಿ ಸಚಿವರಾದ ಆರ್.ವಿ. ದೇಶಪಾಂಡೆ, ಆರ್. ಶಂಕರ್, ಶಿವಾನಂದ ಪಾಟೀಲ್, ಕೆ.ಜೆ. ಜಾಜ್‌ರ್, ಜಯಮಾಲಾ, ಪುಟ್ಟರಂಗಶೆಟ್ಟಿ, ಶಿವಶಂಕರ ರೆಡ್ಡಿ, ಜಮೀರ್ ಅಹಮದ್, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ, ಯು.ಟಿ. ಖಾದರ್, ವೆಂಕಟರಮಣಪ್ಪ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪಾಲ್ಗೊಂಡಿದ್ದರು.
ಬೆಳ್ಳಿತಟ್ಟೆಮೀಟಿಂಗ್! ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಸಚಿವರಿಗಾಗಿ ಆಯೋಜಿಸಿದ್ದ ಉಪಾಹಾರ ಕೂಟ ತನ್ನ ಅದ್ಧೂರಿತನದಿಂದಲೂ ಸುದ್ದಿಯಾಯಿತು.
ಕ್ರೆಸೆಂಟ್ ರಸ್ತೆಯಲ್ಲಿನ ಸರ್ಕಾರಿ ನಿವಾಸದಲ್ಲಿ ಆಯೋಜಿಸಲಾಗಿದ್ದ ಈ ಉಪಾಹಾರ ಕೂಟದ ಹಿನ್ನೆಲೆಯಲ್ಲಿ ಕಟ್ಟಡವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಇಡೀ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಎಲ್ಲಕ್ಕಿಂತ ವಿಶೇಷವೆಂದರೆ, ಉಪಾಹಾರ ಬಡಿಸಿದ್ದು ಬೆಳ್ಳಿತಟ್ಟೆಯಲ್ಲಿ. ಬಳಸಲಾದ ಚಮಚ, ಕುಡಿಯುವ ನೀರಿನ ಲೋಟ ಸೇರಿದಂತೆ ಕೂಟದಲ್ಲಿ ಬಳಕೆಯಾದ ಪಾತ್ರೆಗಳೆಲ್ಲ ಬೆಳ್ಳಿಯವು. ದಕ್ಷಿಣ ಭಾರತೀಯ ತಿಂಡಿ-ತಿನಿಸುಗಳನ್ನು ಉಪಾಹಾರ ಕೂಟದಲ್ಲಿ ಉಣಬಡಿಸಲಾಯಿತು. ಇಡ್ಲಿ, ಖಾರಾಬಾತ್, ಕೇಸರಿಬಾತ್, ವಡೆ, ವಿವಿಧ ಬಗೆಯ ದೋಸೆಗಳು, ಪೂರಿ-ಸಾಗು, ನೀರು ದೋಸೆ, ಪೊಂಗಲ್ ಅನ್ನು ಸಚಿವರಿಗೆ ಉಣಬಡಿಸಲಾಯಿತು.
