* ಆಸ್ತಿ ಗಳಿಕೆ ವಿಚಾರವಾಗಿ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ನಿವಾಸದ ಮೇಲೆ ದಾಳಿ* ಜಮೀರ್‌ ಮೇಲೆ ಐಟಿ ಬದಲು ಇ.ಡಿ. ದಾಳಿ ಅಚ್ಚರಿ: ಡಿಕೆಶಿ 

ಬೆಂಗಳೂರು(ಆ.07): ಆಸ್ತಿ ಗಳಿಕೆ ವಿಚಾರವಾಗಿ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಬದಲು ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿರುವುದು ಅಚ್ಚರಿ ಮೂಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕರಪ್ಟ್‌ ಶಾಸಕನ ಪರ ಭ್ರಷ್ಟ ಕಾಂಗ್ರೆಸ್‌ ಅಧ್ಯಕ್ಷನ ವಕಾಲತ್ತು: ಬಿಜೆಪಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗಿರುವ ಜ್ಞಾನದ ಪ್ರಕಾರ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಅವರಿಗೆ ಹಣದ ಅವ್ಯವಹಾರ ನಡೆದಿದೆ ಎಂಬ ಮಾಹಿತಿ ಸಿಕ್ಕರೆ ನಂತರ ಜಾರಿ ನಿರ್ದೇಶನಾಲಯ ದಾಳಿ ಮಾಡಿ ವಿಚಾರಣೆ ನಡೆಸಬಹುದು. ಆದರೆ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಏಕಾಏಕಿ ದಾಳಿ ಮಾಡಿರುವುದು ಗೊಂದಲ ಮೂಡಿಸಿದೆ. ನನ್ನ ಮನೆ ಮೇಲೂ ಸಿಬಿಐ ದಾಳಿ ಮಾಡಿ ನಂತರ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಸರ್ಕಾರದಿಂದ ಅನುಮತಿ ಪಡೆದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದವು. ಇದೆಲ್ಲದಕ್ಕೂ ಒಂದು ಪ್ರಕ್ರಿಯೆ ಇದೆ. ಜಮೀರ್‌ ಅವರು ಬಿಡುವಾದಾಗ, ನಾನು ಅವರ ಜತೆ ಮಾತಾಡಿ ಮಾಹಿತಿ ಪಡೆಯುತ್ತೇನೆ ಎಂದರು.

ಸೋಮಶೇಖರ್‌ ಮಾತು ಕೇಳಿ ಸಂತೋಷವಾಯ್ತು:

ಶಿವಕುಮಾರ್‌ ಅವರೇ ಜಮೀರ್‌ ಅಹಮದ್‌ಖಾನ್‌ ಮೇಲೆ ಏಕೆ ಇ.ಡಿ. ದಾಳಿ ನಡೆಸಿರಬಾರದು ಎಂಬ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಸೋಮಶೇಖರ್‌ ಅವರು ನನ್ನ ನಿಯಂತ್ರಣದಲ್ಲಿ ಇ.ಡಿ. ಇದೆ ಎಂದು ಹೇಳಿರುವುದನ್ನು ಕೇಳಿ ಸಂತೋಷವಾಗುತ್ತಿದೆ. ಅವರಿಗೆ ಹೆಚ್ಚುವರಿ ಜವಾಬ್ದಾರಿ ಸಿಗುತ್ತಿದೆ. ಅವರಿಗೆ ಒಳ್ಳೆಯದಾಗಲಿ’ ಎಂದು ಹೇಳಿದರು.

'ಡಿಕೆಶಿಯೇ ಯಾಕೆ ಜಮೀರ್‌ ಮನೆ ಮೇಲೆ ದಾಳಿ ಮಾಡಿಸಿರಬಾರದು?'

ಐಎಂಎ ಸಂತ್ರಸ್ತರಿಗೆ ನ್ಯಾಯ ಸಿಗಬೇಕು:

ಈ ದಾಳಿಗೂ ಐಎಂಎ ವಿಚಾರಕ್ಕೂ ಸಂಬಂಧವಿಲ್ಲ, ನನ್ನ ಆಸ್ತಿ ವಿಚಾರವಾಗಿ ಇ.ಡಿ. ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ. ಐಎಂಎ ಪ್ರಕರಣದಲ್ಲಿ ನಷ್ಟಅನುಭವಿಸಿರುವ 40 ಸಾವಿರ ಜನರಿಗೂ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಹಿಂದೆ ಹೇಳಿದ್ದರು. ಇದು ನಮ್ಮ ಪಕ್ಷದ ನಿಲುವೂ ಆಗಿದೆ ಎಂದರು.