ಡಿಕೆಶಿ ರಾಜೀನಾಮೆಗೆ ಬಿಜೆಪಿ ಒತ್ತಾಯ; ಬಿಜೆಪಿ ಷಡ್ಯಂತ್ರಕ್ಕೆ ಕೋರ್ಟ್‌ನಲ್ಲೇ ಉತ್ತರ ಕೊಡುವೆ ಎಂದ ಡಿಕೆಶಿ!
ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಪ್ರಮುಖ ಪ್ರತಿಪಕ್ಷ ಬಿಜೆಪಿ ಮುಖಂಡರು ಶಿವಕುಮಾರ್ ರಾಜಿನಾಮೆಗೆ ಒತ್ತಾಯಿಸಿದ್ದಾರೆ.
ಬೆಂಗಳೂರು (ಅ.20): ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಪ್ರಮುಖ ಪ್ರತಿಪಕ್ಷ ಬಿಜೆಪಿ ಮುಖಂಡರು ಶಿವಕುಮಾರ್ ರಾಜಿನಾಮೆಗೆ ಒತ್ತಾಯಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಸಿಬಿಐ ಪ್ರಕರಣ ವಜಾ ಮಾಡಬೇಕು ಎಂದು ಶಿವಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ ತಡೆಯಾಜ್ಞೆ ತೆರವು ಮಾಡಿದೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದರೆ ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಪೆಸಿಎಂ ಆರೋಪ ಮಾಡಿದ್ದರು. ಈಗ ಉಪಮುಖ್ಯಮಂತ್ರಿ ಆಗಿರುವ ಶಿವಕುಮಾರ್ ಮೇಲೆ ಬಂದಿರುವ ಆರೋಪದ ಬಗ್ಗೆ ಮುಕ್ತ ತನಿಖೆ ಆಗಬೇಕಿದೆ. ಹೀಗಾಗಿ, ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎನ್ನುವುದು ನಮ್ಮ ಪಕ್ಷದ ಆಗ್ರಹ ಎಂದರು.
ಅಕ್ರಮ ಆಸ್ತಿ ಪ್ರಕರಣ ಮತ್ತೆ ಸಂಕಷ್ಟ ; ಡಿಕೆಶಿ ವಾದ ಒಪ್ಪದ ಹೈಕೋರ್ಟ್
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಶಿವಕುಮಾರ್ ವಿರುದ್ಧದ ಆರೋಪದ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ. ಅವರು ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇನೆ ಎಂದಿದ್ದರು. ಅವರಿಗೆ ನೈತಿಕತೆ ಹಾಗೂ ಪ್ರಾಮಾಣಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಅವರು ನಿರ್ದೋಷಿ ಎಂಬುದು ಸಾಬೀತಾದಲ್ಲಿ ಉಪಮುಖ್ಯಮಂತ್ರಿ ಆಗಲಿ ಅಥವಾ ಮುಖ್ಯಮಂತ್ರಿಯೇ ಆಗಲಿ. ನಮ್ಮದೇನೂ ತಕರಾರಿಲ್ಲ ಎಂದು ಹೇಳಿದರು.
ಪಕ್ಷದ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಪಡೆಯಬೇಕು. ಸಿಬಿಐ ತನಿಖೆ ಮುಂದುವರೆಯುವ ಕಾರಣಕ್ಕೆ ಶಿವಕುಮಾರ್ ಅವರು ತಡಮಾಡದೆ ರಾಜೀನಾಮೆ ಸಲ್ಲಿಸಬೇಕು. ಉನ್ನತ ಹುದ್ದೆಯಲ್ಲಿರುವ ಶಿವಕುಮಾರ್ ಅವರು ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕುವ ಎಲ್ಲ ಸಾಧ್ಯತೆ- ಸಂದರ್ಭಗಳಿವೆ. ಅವರು ಪ್ರಭಾವಿ ವ್ಯಕ್ತಿಯಾದ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆ ಎದ್ದು ಕಾಣುತ್ತದೆ ಎಂದರು.
ಶಿವಕುಮಾರ್ ಅವರು ರಾಜೀನಾಮೆ ಕೊಡದಿದ್ದರೆ ಸಿಎಂ ಅವರ ರಾಜೀನಾಮೆ ಪಡೆಯಲಿ. ಇಲ್ಲವಾದರೆ ನಾವು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ. ಇವತ್ತಿನ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡದಿದ್ದರೆ ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಕೊಟ್ಟು ಒತ್ತಾಯಿಸಲಿದ್ದೇವೆ ಎಂದು ವಿವರಿಸಿದ
ಬಿಜೆಪಿ ಷಡ್ಯಂತ್ರಕ್ಕೆ ಕೋರ್ಟ್‌ನಲ್ಲಿ ಉತ್ತರ ಕೊಡುವೆ: ಡಿಕೆಶಿ
ಬೆಂಗಳೂರು: ನನ್ನ ವಿರುದ್ದ ಬಿಜೆಪಿ ನಾಯಕರು ಏನೇ ಷಡ್ಯಂತ್ರ ಮಾಡಿದರೂ ನ್ಯಾಯಾಲ ಯದ ತೀರ್ಪು ಮತ್ತು ನನ್ನ ಆಸ್ತಿಯ ವಿವರ ಎಲ್ಲವೂ ಉತ್ತರ ನೀಡುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದ ಕುರಿತಂತೆ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇ. 90 ರಷ್ಟು ತನಿಖೆ ಪೂರ್ಣಗೊಳಿಸಿದ್ದೇವೆ ಎಂದು ಸಿಬಿಐ ಹೇಳಿದೆ. ಆದರೆ, ನನ್ನದು ಹಾಗೂ ನನ್ನ ಕುಟುಂಬದವರ ಆಸ್ತಿ ಯಾವುದು ಎಂಬ ಬಗ್ಗೆ ವಿವರವನ್ನು ಸಿಬಿಐ ಹೇಳಬೇಕಿದೆ. ಅದಕ್ಕಾಗಿ ನನ್ನನ್ನು ಕರೆಸು ಮತ್ತು ನನ್ನಿಂದ ಮಾಹಿತಿಯನ್ನೂ ಪಡೆದಿಲ್ಲ. ಹೀಗಿರುವಾಗ ಶೇ. 90ರಷ್ಟು ತನಿಖೆ ಹೇಗೆ ಪೂರ್ಣಗೊಂಡಿದೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ಡಿಕೆ ಸಾಹೇಬರಿಗೆ ಏನಾದರೂ ಆದ್ರೆ ನಾವು ಸುಮ್ನಿರಲ್ಲ; ಪ್ರಾಣ ಕೊಡಲು ಸಿದ್ಧ: ಪ್ರದೀಪ್ ಈಶ್ವರ್ ಎಚ್ಚರಿಕೆ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ದುರುದ್ದೇಶ ಪೂರ್ವಕವಾಗಿ, ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ತನಿಖೆಗೆ ಆದೇಶ ನೀಡಿದರು. ಆದರೆ, ಸಿಬಿಐ ದಾಖಲಿಸಿರುವ ಎಫ್‌ಐಆರ್ ಸರಿಯಿಲ್ಲ ಎಂದು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದೆ. ಈಗ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ನನಗೆ ನ್ಯಾಯಾಲಯದ ಮೇಲೆ ಗೌರವ, ನಂಬಿಕೆಯಿದೆ. ನನ್ನ ವಿರುದ್ಧ ಷಡ್ಯಂತ್ರಕ್ಕೆ ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತೇನೆ. ಎಲ್ಲದಕ್ಕೂ ಕಾನೂನು ಚೌಕಟ್ಟಿನಲ್ಲೇ ಹೋರಾಟ ಮಾಡುತ್ತೇನೆ ಎಂದು ಹೇಳಿದರು.