ಅಕ್ರಮ ಆಸ್ತಿ ಪ್ರಕರಣ ಮತ್ತೆ ಸಂಕಷ್ಟ ; ಡಿಕೆಶಿ ವಾದ ಒಪ್ಪದ ಹೈಕೋರ್ಟ್
ಮ್ಮ ವಿರುದ್ಧ ದಾಖಲಿಸಿರುವ ಅಕ್ರಮ ಆಸ್ತಿ ಗಳಿಕೆ ದೂರುಗಳು ದುರುದ್ದೇಶ ಪೂರಿತ ಮತ್ತು ರಾಜಕೀಯ ಪ್ರೇರಿತವಾಗಿದೆ, ಸಿಬಿಐ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಮಾರ್ಗಸೂಚಿ ಪಾಲಿಸಿಲ್ಲ ಎಂಬ ಡಿ.ಕೆ. ಶಿವಕುಮಾರ್ ಅವರ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಬೆಂಗಳೂರು (ಅ.20): ತಮ್ಮ ವಿರುದ್ಧ ದಾಖಲಿಸಿರುವ ಅಕ್ರಮ ಆಸ್ತಿ ಗಳಿಕೆ ದೂರುಗಳು ದುರುದ್ದೇಶ ಪೂರಿತ ಮತ್ತು ರಾಜಕೀಯ ಪ್ರೇರಿತವಾಗಿದೆ, ಸಿಬಿಐ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಮಾರ್ಗಸೂಚಿ ಪಾಲಿಸಿಲ್ಲ ಎಂಬ ಡಿ.ಕೆ. ಶಿವಕುಮಾರ್ ಅವರ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಸಿಬಿಐನ ಎಫ್‌ಐಆರ್ ಮತ್ತು ತನಿಖೆಯನ್ನು ರದ್ದುಪಡಿಸುವಂತೆ ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠ ಆದೇಶಿಸಿದೆ.
ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್..ಡ್ಯಾಶ್..: ಡಿಕೆಶಿಗೆ ತಿವಿದ ಮಾಜಿ ಸಚಿವ ಸಿ.ಟಿ. ರವಿ
ಕೋರ್ಟ್ ಆದೇಶದ ವಿವರಗಳು:
ಅರ್ಜಿದಾರರು ಸಲ್ಲಿಸಿರುವ ದಾಖಲೆಗಳು ಪರಿಶೀಲನೆಯಲ್ಲಿವೆ. ದೊಡ್ಡ ಪ್ರಮಾಣದಲ್ಲಿ ನಗದು ವಹಿವಾಟು ನಡೆದಿದೆ. ಅರ್ಜಿದಾರರಿಂದ ಕೆಲವು ಅನುಮಾನಾಸ್ಪದ ವಹಿವಾಟು ನಡೆದಿದೆ. ಅರ್ಜಿದಾರರು ಮತ್ತವರ ಕುಟುಂಬ ಸದಸ್ಯರಿಗೆ ಸಂಬಂಧಿಸಿ 98 ಬ್ಯಾಂಕ್ ಖಾತೆಗಳು ಪರಿಶೀಲನೆಯಲ್ಲಿವೆ. ವಹಿವಾಟುಗಳ ವಿಶ್ಲೇಷಣೆಗೆ ಸಿಬಿಐ ಚಾರ್ಟರ್ಡ್ ಅಕೌಂಟಂಟ್ ನೆರವು ಪಡೆದುಕೊಂಡಿದೆ. ದಾಖಲೆಗಳ ಪ್ರಕಾರ ತನಿಖೆಯು ಅಂತಿಮ ಹಂತದಲ್ಲಿದ್ದು, ಅರ್ಜಿದಾರರು ಅಸಂಖ್ಯಾತ ದಾಖಲೆಗಳನ್ನು ಸಲ್ಲಿಸಿರುವುದರಿಂದ ಕಡಿಮೆ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಲು ತನಿಖಾಧಿಕಾರಿಗೆ ಕಷ್ಟಸಾಧ್ಯ. ಹಾಗಾಗಿ, ತನಿಖೆ ಪೂರ್ಣಗೊಳಿಸಲಾಗಿದೆ ಎಂಬ ಅರ್ಜಿದಾರರ ವಾದ ಒಪ್ಪಿ, ಎಫ್‌ಐಆರ್ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ದುರುದ್ದೇಶಪೂರ್ವಕ ಮತ್ತು ರಾಜಕೀಯ ಪ್ರೇರಿತವಾಗಿ ದೂರು ದಾಖಲಿಸಲಾಗಿದೆ ಎಂಬ ಅರ್ಜಿದಾರರ ವಾದ ಒಪ್ಪದ ಹೈಕೋರ್ಟ್, ಶಿವಕುಮಾರ್ ಅವರ ಮನೆ ಹಾಗೂ ಅವರಿಗೆ ಸೇರಿದ ಇತರೆ ಪ್ರದೇಶಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, 8 ಕೋಟಿ ರು. ಹಣ ಜಪ್ತಿ ಮಾಡಿದೆ. ಮನೆಯಲ್ಲಿ 41 ಲಕ್ಷ ರು. ಮತ್ತು ಹಲವು ದಾಖಲೆಗಳನ್ನು ಸಂಗ್ರಹಿಸಿದೆ. ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ ಬಳಿಕ ನಾಲ್ಕು ದೂರುಗಳನ್ನು ವಿಶೇಷ ನ್ಯಾಯಾಲಯದ ಮುಂದೆ ದಾಖಲಿಸಿದೆ. ಅದರಲ್ಲಿ ಕೆಲವು ಕ್ರಿಮಿನಲ್ ಕೇಸುಗಳನ್ನು ಮ್ಯಾಜಿಸ್ಟ್ರೇಟ್ ಕೊರ್ಟ್ ರದ್ದು ಮಾಡಿದ್ದು, ಆ ಕೇಸುಗಳು ಸದ್ಯ ಸುಪ್ರೀಂ ಕೋರ್ಟ್ ಮುಂದಿದೆ. ಒಂದು ಕೇಸಿನಲ್ಲಿನ ಆರೋಪ ಕೈಬಿಡಬೇಕೆಂಬ ಮನವಿ ತಿರಸ್ಕಾರವಾಗಿದ್ದು, ಅದು ಸಹ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ. ಆದಾಯ ತೆರಿಗೆ ಇಲಾಖೆ ವರದಿ ಆಧರಿಸಿ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದೆ. ಅದರಲ್ಲಿ ಅರ್ಜಿದಾರರು ಬಂಧನವಾಗಿ, ಜಾಮೀನು ಮೇಲೆ ಜೈಲಿನಿಂದ ಹೊರಬಂದಿದ್ದು, ಆ ಪ್ರಕರಣದ ವಿಚಾರಣೆ ಪ್ರಕ್ರಿಯೆ ಈಗಲೂ ನಡೆಯುತ್ತಿದೆ. ಜಾರಿ ನಿರ್ದೇಶನಾಲಯ ವರದಿ ಆಧರಿಸಿ ಭಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಾಸಿಕ್ಯೂಷನ್ ಕೈಗೆತ್ತಿ ಗೊಳ್ಳಲಾಗಿತ್ತು. ಅದರ ತನಿಖೆ ಹಂತದಲ್ಲಿ ಆದಾಯ ಮೀರಿ ಆಸ್ತಿ ಗಳಿಕೆ ಹೊಂದಿರುವುದು ಪತ್ತೆಯಾಗಿದ್ದು, ಅದನ್ನು ಆಧರಿಸಿ ಪ್ರಾಸಿಕ್ಯೂಷನ್‌ಗೆ ರಾಜ್ಯ ಸರ್ಕಾರ 2019ರ ಸೆ.25ರಂದು ಅನುಮತಿ ನೀಡಿದೆ. ಇದರಿಂದ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಹಾಗಾಗಿ, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿವೆ. ಇದರಿಂದ ಅದನ್ನು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶಪೂರಿತವಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂಬುದಾಗಿ ಪರಿಗಣಿಸಿ ಎಫ್‌ಐಆರ್ ರದ್ದುಪಡಿಸಲಾಗದು ಎಂದು ಪೀಠ ಹೇಳಿದೆ.
ಡಿಸಿಎಂ ಡಿಕೆಶಿವಕುಮಾರ್‌ಗೆ ಬಿಗ್ ಶಾಕ್: ಅಕ್ರಮ ಆಸ್ತಿ ಪ್ರಕರಣ ಸಿಬಿಐ ತನಿಖೆಗೆ ಮುಂದುವರೆಸಲು ಹೈಕೋರ್ಟ್ ಅಸ್ತು
ಸಿಬಿಐ ಪ್ರಾಥಮಿಕ ತನಿಖೆಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್, ಸಿಬಿಐ ಮಾರ್ಗಸೂಚಿಗಳನ್ನು ಶಾಸನಸಭೆಯಿಂದ ರೂಪುಗೊಂಡ ಶಾಸನವಲ್ಲ. ಇದು ಸಿಬಿಐನ ಆಂತರಿಕ ಮಾರ್ಗದರ್ಶನಕ್ಕಾಗಿ ಇರುವ ಆಡಳಿತಾತ್ಮಕ ಆದೇಶಗಳ ಸಂಕಲನವಾಗಿದೆ ಎಂದು ಹೇಳಿದೆ. ಸಿಬಿಐ ಎಫ್‌ಆರ್ ದಾಖಲಿಸಲು ಮೂಲಗಳ ವರದಿ (ಸೋರ್ಟ್ ರಿಪೋಟ್) ಇಲ್ಲವಾಗಿದೆ ಎಂಬ ಶಿವಕುಮಾರ್ ವಾದವನ್ನು ಒಪ್ಪದ ಹೈಕೋರ್ಟ್, ಸಿಬಿಐ ಅಧಿಕಾರಿಯು ತಾನು ನಡೆಸಿದ ಪ್ರಾಥಮಿಕ ವಿಚಾರಣೆಯ ಮೇಲಲ್ಲದೇ, ದಾಳಿ ವೇಳೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಸಂಗ್ರಹಿಸಿದ ದಾಖಲೆಗಳನ್ನು ಪರಿಗಣಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಹಾಗಾಗಿ, ಈ ಹಂತದಲ್ಲಿ ಸಿಬಿಐ ನಡೆಸಿದ ಪ್ರಾಥಮಿಕ ವಿಚಾರಣೆಯು ಸರಿಯಲ್ಲ ಎಂದು ನ್ಯಾಯಾಲಯ ತೀರ್ಮಾನಕ್ಕೆ ಬರಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.