MES Violence : ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್, ಡಿಕೆಶಿ : ಸಿ.ಟಿ ರವಿ

  • ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್ ಇದೆ
  • ಸಂಘರ್ಷ ಉಂಟು ಮಾಡಿ ರಾಜಕೀಯ ದುರ್ಲಾಭ ಪಡೆಯುವ ಷಡ್ಯಂತ್ರ 
DK Shivakumar Congress Leaders Behind MES Violence says CT Ravi snr

  ಚಿಕ್ಕಮಗಳೂರು  (ಡಿ.20):  ಎಂಇಎಸ್ (MES) ಪುಂಡಾಟಿಕೆ ಹಿಂದೆ ಕಾಂಗ್ರೆಸ್ (Congress) ಇದೆ.  ಸಂಘರ್ಷ ಉಂಟು ಮಾಡಿ ರಾಜಕೀಯ ದುರ್ಲಾಭ ಪಡೆಯುವ ಷಡ್ಯಂತ್ರ ನಡೆಸಿದ್ದಾರೆ. ಡಿ. ಕೆ ಶಿವಕುಮಾರ್ (DK Shivakumar) ಅವರೇ ಈ ಪ್ರಕರಣದ ಪ್ರೊಡ್ಯೂಸರ್, ಡೈರೆಕ್ಟರ್ ಅನ್ನೋದು ಬಹಳ ಸ್ಪಷ್ಟ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ   ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. 

ಚಿಕ್ಕಮಗಳೂರಿನಲ್ಲಿಂದು ಮಾತನಾಡಿದ ಸಿಟಿ ರವಿ ಕಾಂಗ್ರೆಸ್ (Congress) ನಾಯಕರು ಹಾಗೂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದ್ದು, ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಡಬೇಕಾದರೆ ಎಂಇಎಸ್ ಜೊತೆ ಇದ್ದಿದ್ದು ಕಾಂಗ್ರೆಸ್ (Congress) ಕಾರ್ಯಕರ್ತರು. ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದು ಕೂಡ ಕಾಂಗ್ರೆಸ್ ಕಾರ್ಯಕರ್ತರು.  ಡಿ.ಕೆ ಶಿವಕುಮಾರ್, ಜಮೀರ್ ಅಹ್ಮದ್ ಕಟ್ಟಾ ಬೆಂಬಲಿಗರಿಂದಲೇ ಕೃತ್ಯ ನಡೆದಿದೆ ಎಂದರು. 

ಸಂಗೊಳ್ಳಿ ರಾಯಣ್ಣ (Sangolli rayanna), ಬಸವೇಶ್ವರ ಪ್ರತಿಮೆಗೆ ಅಪಮಾನ ಕೂಡ ಕಾಂಗ್ರೆಸ್, ಎಂಇಎಸ್ ಕಾರ್ಯಕರ್ತರು ಮಾಡಿದ್ದಾರೆ.  ಜಾತಿ ಸಂಘರ್ಷ ಭಾಷಾ ಸಂಘರ್ಷವನ್ನು ಹುಟ್ಟು ಹಾಕುವುದೇ ಇವರ ಉದ್ದೇಶ.  ಹಾಗಾಗಿಯೇ ಎಂಇಎಸ್ ಸಂಘಟನೆಯನ್ನು ಕೆಪಿಸಿಸಿ ಅಧ್ಯಕ್ಷರು ಸಮರ್ಥನೆ ಮಾಡಿದ್ದಾರೆ.  ಈ ಷಡ್ಯಂತ್ರವನ್ನು ಬಯಲಿಗೆಳೆಯಬೇಕೆಂದು ಸಿಎಂ, ಗೃಹ ಸಚಿವರನ್ನ ಆಗ್ರಹ ಮಾಡುತ್ತೇನೆ ಎಂದರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ.

ಎಂಇಎಸ್ ನಿಷೇಧಕ್ಕೆ ಆಗ್ರಹ :  ಬೆಳಗಾವಿಯಲ್ಲಿ(Belagavi) ಮಹಾರಾಷ್ಟ್ರ ಏಕೀಕರಣ ಸಮಿತಿ (MES), ಶಿವಸೇನೆ  ಕಾರ್ಯಕರ್ತರ ಪುಂಡಾಟ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಹಾಗೂ ಮಹಾರಾಷ್ಟ್ರದಲ್ಲಿ(Maharastra) ಕನ್ನಡಿಗರ(Kannadiga) ಮೇಲಿನ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತ ಭಾನುವಾರ ಕನ್ನಡಪರ ಸಂಘಟನೆಗಳು(Pro kannada organisation) ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದವು.

ಬೆಂಗಳೂರು(Bengaluru), ಬೆಳಗಾವಿ(Belagavi) ಸೇರಿದಂತೆ ಎಲ್ಲೆಡೆ ಬೀದಿಗಿಳಿದು ಪ್ರತಿಭಟನೆ, ರ್ಯಾಲಿ, ರಸ್ತೆ ತಡೆ ನಡೆಸಿದ ಕನ್ನಡಪರ ಹೋರಾಟಗಾರರು ಎಂಇಎಸ್‌ ನಿಷೇಧಕ್ಕೆ ಆಗ್ರಹಿಸಿದರು. ಜತೆಗೆ, ಕರ್ನಾಟಕ, ಕನ್ನಡಿಗರ ವಿರುದ್ಧ ಉದ್ಧಟತನದ ಹೇಳಿಕೆ ನೀಡಿದ ಶಿವಸೇನೆ(Shiv sena), ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ(uddhav thackeray) ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿದರು. ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಜಯ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಕನ್ನಡ ನೆಲದಲ್ಲಿ ಎಂಇಎಸ್‌ ಪುಂಡಾಟ ಮೆರೆಯುತ್ತಿದ್ದರೂ ಕಟು ಶಬ್ದಗಳಿಂದ ಅದನ್ನು ಖಂಡಿಸದ ರಾಜಕಾರಣಿಗಳ ವಿರುದ್ಧವೂ ತೀವ್ರ ಕಿಡಿಕಾರಿದವು.

ಬೆಳಗಾವಿಯಲ್ಲಿ ಮುಂದುವರಿದ ಆಕ್ರೋಶ:
ಎಂಇಎಸ್‌ ಹಾಗೂ ಶಿವಸೇನೆ ಕಾರ್ಯಕರ್ತರ ಪುಂಡಾಟದಿಂದ ಉದ್ವಿಗ್ನಗೊಂಡಿದ್ದ ಬೆಳಗಾವಿಯಲ್ಲಿ ಭಾನುವಾರವೂ ಹಲವು ಪ್ರತಿಭಟನೆಗಳು ನಡೆದವು. ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ನಡುವೆಯೂ ಕನ್ನಡ ರಕ್ಷಣಾ ವೇದಿಕೆ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಸಂಗೊಳ್ಳಿ ರಾಯಣ್ಣ(Sangolli Rayanna Statue) ಪ್ರತಿಮೆ ಭಗ್ನಗೊಳಿಸಿದ ಸ್ಥಳವಾದ ಆನಗೋಳಕ್ಕೆ ಪ್ರತಿಭಟನಾ ರಾರ‍ಯಲಿ ನಡೆಸಲು ಯತ್ನಿಸಿದ್ದು, ಇದಕ್ಕೆ ಪೊಲೀಸರು ಅಡ್ಡಿ ಪಡಿಸಿದರು. ಈ ವೇಳೆ 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು. ಮುನ್ನೆಚ್ಚರಿಕಾ ಕ್ರಮವಾಗಿ ಗುಂಪು ಸೇರಿದವರ ಮೇಲೆ ಲಘು ಲಾಠಿ ಬೀಸಿ ಚದುರಿಸಿದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು. ಎಂಇಎಸ್‌ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕನ್ನಡಪರ ಹೋರಾಟಗಾರರ ಮೇಲೆಯೇ ಪೊಲೀಸರು ದಬ್ಬಾಳಿಕೆ ನಡೆಸುತ್ತಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಜಿಲ್ಲೆಯ ರಾಯಬಾಗ, ಕಾಗವಾಡದಲ್ಲೂ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

Latest Videos
Follow Us:
Download App:
  • android
  • ios