ಕನ್ನಡ ಸಂಘಟನೆಗಳಿಂದ ಇಂದು ಬೆಳಗಾವಿ ಚಲೋ : MES ನಿಷೇಧಕ್ಕೆ 2 ದಿನ ಟೈಂ  ಮರಾಠಿ ಪುಂಡರ ವಿರುದ್ಧ ಗಡಿ ನಾಡಿನಲ್ಲಿ ಶಕ್ತಿ ಪ್ರದರ್ಶನ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬೆಂಗಳೂರಿಂದ ಪಯಣ

ಬೆಂಗಳೂರು (ಡಿ.20): ರಾಜ್ಯದಲ್ಲಿ ಎಂಇಎಸ್‌ (MES) ನಿಷೇಧಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಒಟ್ಟಾಗಿ ನಡೆಸುತ್ತಿರುವ ‘ಬೆಳಗಾವಿ ಚಲೋ’ (Belagavi) ಇಂದು ಬೆಳಗ್ಗೆ ಬೆಳಗಾವಿ ತಲುಪಲಿದೆ. ಕನ್ನಡಿಗರ ವಿರುದ್ಧ ಎಂಇಎಸ್‌ ಪುಂಡಾಟ ನಡೆದ ನೆಲದಲ್ಲಿಯೇ ಸಾವಿರಾರು ಕನ್ನಡ ಹೋರಾಟಗಾರರು ಬೃಹತ್‌ ರಾರ‍ಯಲಿ ನಡೆಸಿ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ. ಮಧ್ಯಾಹ್ನದ ಬಳಿಕ ‘ಸುವರ್ಣ ಸೌಧ’ಕ್ಕೆ ಮುತ್ತಿಗೆ ಹಾಕಿ ಎಂಇಎಸ್‌ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಲಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಕನ್ನಡ ವಾಟಾಳ್‌ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಕರವೇ ಮುಖ್ಯಸ್ಥ ಪ್ರವೀಣ್‌ ಶೆಟ್ಟಿನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಮೈಸೂರು ಬ್ಯಾಂಕ್‌ (Mysuru Bank) ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ರೈಲ್ವೆ ನಿಲ್ದಾಣದ ಬಳಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ಬೆಳಗಾವಿ ಚಲೋಗೆ ಚಾಲನೆ ನೀಡಿದರು. ಇನ್ನು ಕರವೇ ಟಿ.ಎ.ನಾರಾಯಣಗೌಡರ (Narayana Gowda) ನೇತೃತ್ವದಲ್ಲಿ ಸುಮಾರು 50 ವಾಹನಗಳಲ್ಲಿ ಸಾವಿರಾರು ಹೋರಾಟಗಾರರು ಭಾನುವಾರ ರಾತ್ರಿ ಬೆಳಗಾವಿಯತ್ತ ಸಾಗಿದರು.

ಬೆಳಿಗ್ಗೆ ಹೊರಟ ರಾರ‍ಯಲಿಗೆ ಮಧ್ಯಾಹ್ನ 1ಕ್ಕೆ ನೆಲಮಂಗಲ ಟೋಲ್‌ ಬಳಿ ಬೆಂಗಳೂರು (Bengaluru) ಸುತ್ತಮುತ್ತಲ ಭಾಗಗಳ ಹೋರಾಟಗಾರೆಲ್ಲಾ ಸೇರಿದರು. ಬಳಿಕ ತುಮಕೂರು (Tumakuru), ಚಿತ್ರದುರ್ಗ, ದಾವಣಗೆರೆ, ಹಾವೇರಿ ಮಾರ್ಗವಾಗಿ ಸಾಗಿದ ರಾರ‍ಯಲಿಗೆ ಜಿಲ್ಲಾ ಹೋರಾಟಗಾರರು, ಮುಖಂಡರು ಜತೆಗೂಡಿದ್ದಾರೆ. ಎಲ್ಲಾ ಹೋರಾಟಗಾರರು ಬೆಳಗಿನ ಜಾವ ಬೆಳಗಾವಿ ತಲುಪಲಿದ್ದಾರೆ.

ಆಗ್ರಹ:  ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ, ರಾಜ್ಯದಲ್ಲಿ ಎಂಇಎಸ್‌ ನಿಷೇಧಿಸಬೇಕು. ಈವರೆಗೂ ಯಾವುದೇ ದಿಟ್ಟಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಪುಂಡರು ದಾಳಿ ಮಾಡಿದ ಬೆಳಗಾವಿಗೆ ತೆರಳಿ ರಾಜ್ಯದ ಹೋರಾಟಗಾರರ ಶಕ್ತಿ ಪ್ರದರ್ಶನ ಮಾಡುತ್ತೇವೆ. ಬಳಿಕ ಅಧಿವೇಶನ ನಡೆಯುತ್ತಿರುವ ಸುವರ್ಣ ಸೌಧಕ್ಕೆ ತೆರಳಿ ಮುತ್ತಿಗೆ ಹಾಕಿ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ರಾಜ್ಯಾದ್ಯಂತ ಹೋರಾಟಗಾರರು ಬೆಳಗಾವಿಗೆ ಬರಲಿದ್ದಾರೆ ಎಂದು ತಿಳಿಸಿದರು.

10000 ಜನರು ಭಾಗಿ

ಸೋಮವಾರ ಬೆಳಿಗ್ಗೆ ಹತ್ತು ಸಾವಿರಕ್ಕೂ ಹೆಚ್ಚು ಕನ್ನಡ (Kannada) ಸೇನಾನಿಗಳು ಬೆಳಗಾವಿ ತಲುಪಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಹೊರಟು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು.

-ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ

ಸರ್ಕಾರಕ್ಕೆ ಗಡುವು ನೀಡಿದ ವಾಟಾಳ್

ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆ(Sangolli Rayanna Statue) ವಿರೂಪಗೊಳಿಸಿ ಸರ್ಕಾರಿ ವಾಹನಗಳನ್ನು ಜಖಂಗೊಳಿಸಿ ಅಟ್ಟಹಾಸ ಮೆರೆದಿರುವ ಎಂಇಎಸ್ (MES) ಮತ್ತು ಶಿವಸೇನೆಯ ಕಿಡಿಗೇಡಿ ಕೃತ್ಯಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಕನ್ನಡ ಧ್ವಜಕ್ಕೆ(Kannada Flag) ಬೆಂಕಿ ಇಟ್ಟಿದ್ದಲ್ಲದೇ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವುದು ಕನ್ನಡಿಗರು ಕೆರಳಿ ಕೆಂಡವಾಗಿದ್ದು, ರಾಜ್ಯದಲ್ಲಿ ಎಂಇಎಸ್ ನಿಷಧಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ.

ಎಂಇಎಸ್ ಸಂಘಟನೆಯನ್ನು ಎರಡು ದಿನದೊಳಗೆ ನಿಷೇಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ರಾಯಣ್ಣ ಪ್ರತಿಮೆ ಭಗ್ನ ಗೊಳಿ ಸಿರುವುದು ಸೇರಿದಂತೆ ನಿರಂತರ ನಾಡದ್ರೋಹಿ ಕೃತ್ಯ ವೆಸಗುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕರವೇ ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ಮುಂತಾದವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿದ ಮುಖಂಡರು ಎರಡು ದಿನದೊಳಗೆ ಎಂಇಎಸ್ ಸಂಘಟನೆಯನ್ನು ನಿಷೇಸಬೇಕು ಇಲ್ಲದಿದ್ದರೆ ಕನ್ನಡಪರ ಸಂಘಟನೆಗಳೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.

ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮೈಸೂರು ಬ್ಯಾಂಕ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟಗಾರ. ನಮ್ಮ ದೇಶದ ಆಸ್ತಿ, ಅವರ ಪ್ರತಿಮೆಯನ್ನು ವಿರೂಪಗೊಳಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ಎಂಇಎಸ್‍ನವರು ಧಕ್ಕೆ ತಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ದಿನದೊಳಗೆ ಈ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು. ಪ್ರವೀಣ್‍ಕುಮಾರ್ ಶೆಟ್ಟಿ, ಸಾ.ರಾ.ಗೋವಿಂದು, ಮಂಜುನಾಥ್ ದೇವು, ಗಿರೀಶ್ ಗೌಡ ಸೇರಿದಂತೆ ವಿವಿಧ ಮುಖಂಡರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ನಾವೆಲ್ಲರೂ ನಾಡದ್ರೋಹಿಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.