ಬೆಂಗಳೂರು ನಗರದ ಅಭಿವೃದ್ಧಿ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ಒಂದು ವರ್ಷದಲ್ಲಿ ನಗರವನ್ನು ಅಭಿವೃದ್ಧಿಪಡಿಸುವುದಾಗಿ ಸವಾಲು ಹಾಕಿದ್ದಾರೆ. ಬೆಂಗಳೂರು ಸುರಂಗ ರಸ್ತೆ ಯೋಜನೆಯ ವೆಚ್ಚದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.14): ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಮಳೆಯಿಂದಾಗಿ ರಸ್ತೆಗಳು ಮುಳುಗಡೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೇವರೇ ಬಂದರೂ ಬೆಂಳೂರನ್ನು ಸರಿ ಮಾಡುವುದಕ್ಕೆ ಆಗೊಲ್ಲ ಎಂದಿದ್ದರು. ಆದರೆ, ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ನನಗೆ ಇದ್ದಿದ್ದರೆ ನಾನು 1 ವರ್ಷದಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಮಾಡುತ್ತಿದ್ದೆನು ಎಂದು ಸಂಸದ ತೇಜಸ್ವಿ ಸೂರ್ಯ ಸವಾಲು ಹಾಕಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಇತ್ತೀಚೆಗೆ ಹೇಳಿದ್ದರು. ದೇವರೇ ಕೆಳಗೆ ಬಂದರೂ ಬೆಂಗಳೂರನ್ನ ಸರಿ ಮಾಡಲು ಸಾಧ್ಯವಿಲ್ಲ ಅಂತ. ಬೆಂಗಳೂರನ್ನು ಸರಿ ಮಾಡುವುದಕ್ಕೆ ದೇವರು ಕೆಳಗೆ ಬರಬೇಕಿಲ್ಲ. ನಗರವನ್ನು ಸರಿ ಮಾಡುವ ನಾಯಕತ್ವ, ಇಚ್ಚಾಶಕ್ತಿ ಇದ್ದರೆ ಸಾಕು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಇರುವ ಅಧಿಕಾರ, ನನ್ನ ಬಳಿ ಇದ್ದರೆ ಕೇವಲ ಒಂದೇ ವರ್ಷದಲ್ಲಿ ಸರಿ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಸಂದ ತೇಜಸ್ವಿ ಸೂರ್ಯ ಸವಾಲು ಹಾಕಿದರು.

ಅಮೇರಿಕಾದ ಅಧ್ಯಕ್ಷ ಟ್ರಂಪ್ ಭೇಟಿಗೆ ತೇಜಸ್ವಿ ಹೋಗಿದ್ದರು. ಅಲ್ಲಿಂದ ಹೊರಕ್ಕೆ ಕಳುಹಿಸಿದರು ಎನ್ನುವ ಆರೋಪದ ಬಗ್ಗೆ ಮಾತನಾಡಿದ ತೇಜಸ್ವಿ ಸೂರ್ಯ ಅವರು, ಕಾಂಗ್ರೆಸ್ ನಾಯಕರ ಆರೋಪ ಕಾಗಕ್ಕ ಗುಬ್ಬಕ್ಕನ ಕಥೆ. ನಾನು ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದಿರೋದು. ಅವರ ಆರೋಪಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಅವರು ಯಾವುದೇ ವಿಚಾರವನ್ನು ತೆಗೆದುಕೊಂಡು ಆರೋಪ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಸೀರಿಯಸ್ ಆಗಿರುವ ರಾಜ್ಯ ಮತ್ತು ಬೆಂಗಳೂರು ನಗರದ ಕುರಿತಾದ ಗಂಭೀರ ಇರುವ ವಿಷಯದ ಮೇಲೆ ರಾಜಕೀಯ ಮಾಡಿ. ಅದೇನು ಅಂತ ಆರೋಪ ಮಾಡ್ತೀರೋ ಎಂದು ಟೀಕೆ ಮಾಡಿದರು.

ಡ್ರಗ್ಸ್ ಕೇಸ್ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ಬಂಧನ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್‌ನವರು, ಕಾಂಗ್ರೆಸ್ ಮಂತ್ರಿಗಳ ಆಪ್ತರು ಈ ರೀತಿ ವ್ಯವಹಾರದಲ್ಲಿ ಸಿಲುಕಿರೋದು ಮೊದಲೇನಲ್ಲ. ಇದೀಗ ಡ್ರಗ್ಸ್ ಕೇಸ್ ಮುಚ್ಚಿಹಾಕಿಸೋ ಕೆಲಸ‌ ಮಾಡುತ್ತಿದ್ದಾರೆ. ಅದನ್ನ ಮುಚ್ಚಿಹಾಕದಂತೆ ನಾವು ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.

ಬೆಂಗಳೂರು ಸುರಂಗ ರಸ್ತೆಗೆ ದುಬಾರಿ ವೆಚ್ಚ:

ರಾಜ್ಯದ 120 ಕಿ.ಮೀ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಚಿವಾಲಯವು 8,480 ಕೋಟಿ ರೂ. ಖರ್ಚು ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ ದೇಶದ ಪ್ರತಿಷ್ಠಿತ 9.02 ಕಿ.ಮೀ. ಉದ್ದದ ಅಟಲ್ ಸುರಂಗ ಮಾರ್ಗವನ್ನು 3,309 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ, ಬೆಂಗಳೂರಿನಲ್ಲಿ 18 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡಲು 18,500 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಲೆಕ್ಕ ತೋರಿಸುತ್ತಿದೆ. ಇದು ಎಲ್ಲ ಯೋಜನೆಗಳಿಗಿಂತ ದುಬಾರಿ ಆಗಿದ್ದು, ಇದರಿಂದ ಹೆಚ್ಚಿನ ಜನರಿಗೆ ಉಪಯೋಗ ಆಗುವುದಿಲ್ಲ. ಈ ಹಣದಲ್ಲಿ ಮೆಟ್ರೋ ಮಾರ್ಗವನ್ನೇ ನಿರ್ಮಾಣ ಮಾಡಬಹುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.