Asianet Suvarna News Asianet Suvarna News

ಮಾ. 21ಕ್ಕೆ 10,000 ಫಲಾನುಭವಿಗಳಿಗೆ ಮನೆ ಹಂಚಿಕೆ: ಸಚಿವ ಸೋಮಣ್ಣ

ಬೆಂಗಳೂರು ನಗರದಲ್ಲಿ 2360 ಮನೆಗಳು ಮತ್ತು ರಾಜ್ಯದ ವಿವಿಧೆಡೆ 7746 ಮನೆಗಳನ್ನು ಹಸ್ತಾಂತರಿಸಲಾಗುವುದು. ಬೆಂಗಳೂರಲ್ಲಿ ಯಲಹಂಕ, ಗೋವಿಂದರಾಜ ನಗರ, ಮುದ್ದಯ್ಯನಪಾಳ್ಯ, ಆನೇಕಲ್‌, ಕೆ.ಆರ್‌.ಪುರದಲ್ಲಿನ ಮನೆಗಳ ಹಸ್ತಾಂತರ ಮಾಡಿದರೆ, ಶಹಾಪುರ, ಚಿತ್ತಾಪುರ, ಹುಬ್ಬಳ್ಳಿ, ಉಡುಪಿ, ಶಿರಾ, ಬಂಗಾರಪೇಟೆ, ಮಂಡ್ಯ ಸೇರಿದಂತೆ ಮೊದಲಾದ ಕಡೆಗಳಲ್ಲಿನ ಮನೆಗಳ ಹಸ್ತಾಂತರ ಮಾಡಲಾಗುವುದು: ವಸತಿ ಸಚಿವ ವಿ.ಸೋಮಣ್ಣ 

Distribution of Houses to 10000 Beneficiaries on March 21st Says V Somanna grg
Author
First Published Mar 15, 2023, 10:43 AM IST | Last Updated Mar 15, 2023, 10:43 AM IST

ಬೆಂಗಳೂರು(ಮಾ.15):  ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 10 ಸಾವಿರಕ್ಕೂ ಹೆಚ್ಚು ಮನೆಗಳನ್ನು ಇದೇ ತಿಂಗಳ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ 2360 ಮನೆಗಳು ಮತ್ತು ರಾಜ್ಯದ ವಿವಿಧೆಡೆ 7746 ಮನೆಗಳನ್ನು ಹಸ್ತಾಂತರಿಸಲಾಗುವುದು. ಬೆಂಗಳೂರಲ್ಲಿ ಯಲಹಂಕ, ಗೋವಿಂದರಾಜ ನಗರ, ಮುದ್ದಯ್ಯನಪಾಳ್ಯ, ಆನೇಕಲ್‌, ಕೆ.ಆರ್‌.ಪುರದಲ್ಲಿನ ಮನೆಗಳ ಹಸ್ತಾಂತರ ಮಾಡಿದರೆ, ಶಹಾಪುರ, ಚಿತ್ತಾಪುರ, ಹುಬ್ಬಳ್ಳಿ, ಉಡುಪಿ, ಶಿರಾ, ಬಂಗಾರಪೇಟೆ, ಮಂಡ್ಯ ಸೇರಿದಂತೆ ಮೊದಲಾದ ಕಡೆಗಳಲ್ಲಿನ ಮನೆಗಳ ಹಸ್ತಾಂತರ ಮಾಡಲಾಗುವುದು ಎಂದು ಹೇಳಿದರು.

ಸೋಮಣ್ಣ ಕಾಂಗ್ರೆಸ್‌ಗೆ ಬರ್ತೀನಿ ಅಂದಿಲ್ಲ, ನಾನೂ ಕರೆದಿಲ್ಲ: ಡಿಕೆಶಿ

ಪ್ರಧಾನಮಂತ್ರಿ ಆವಾಸ್‌ ಯೋಜನೆಯಿಂದ 5,24,426 ಮನೆಗಳನ್ನು ನಿರ್ಮಿಸಿ ಅರ್ಹರಿಗೆ ನೀಡಲಾಗುತ್ತಿದೆ. ಇದಕ್ಕಾಗಿ 8,381 ಕೋಟಿ ರು. ವೆಚ್ಚ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಐದು ಸಾವಿರ ಕೋಟಿ ರು.ಗಿಂತ ಹೆಚ್ಚು ಅನುದಾನ ನೀಡಿದ್ದು, ಎರಡು ಲಕ್ಷ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ನೀಡಲಾಗಿದೆ. ಈ ತಿಂಗಳಾಂತ್ಯಕ್ಕೆ ಏಳು ಲಕ್ಷ ಫಲಾನುಭವಿಗಳನ್ನು ಗುರುತಿಸುವ ಕೆಲಸ ನಡೆಯಲಿದೆ. ಐದು ಸಾವಿರಕ್ಕೂ ಹೆಚ್ಚು ಎಕರೆ ಜಾಗವನ್ನು ಗುರುತಿಸಿ ಮನೆ ನಿರ್ಮಿಸಬೇಕಾಗಿದೆ ಎಂದರು.

ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಘೋಷಣೆ ಮಾಡಿ ಮನೆಗಳನ್ನು ನಿರ್ಮಿಸದಿರುವುದರಿಂದ ಹೊಸದಾಗಿ ನಿಮಿಸುವ ಅವಕಾಶ ನಮಗೆ ಸಿಗಲಿಲ್ಲ. ಆದರೆ, ಹಿಂದಿನ ಅವಧಿಯಲ್ಲಿನ ಬಾಕಿ ಮನೆಗಳನ್ನು ನಿರ್ಮಿಸುವ ಮೂಲಕ ಐತಿಹಾಸಿಕ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮೂರು ಲಕ್ಷ ಮನೆ ಮಾಲೀಕರಿಗೆ ಹಕ್ಕು ಪತ್ರ ನೀಡಿ ಮನೆಗಳ ಮಾಲೀಕರೆಂದು ಘೋಷಣೆ ಮಾಡಲಾಗಿದೆ. ಮೊದಲು ಒಂದು ಲಕ್ಷ ರು.ಠೇವಣಿ ಇದ್ದು, ಇದನ್ನು 50 ಸಾವಿರ ರು. ಗೆ ಇಳಿಸಲಾಗಿದೆ. ಠೇವಣಿ ಪಾವತಿಸಿದವರಿಗೆ ಮನೆ ಪೂರ್ಣಗೊಂಡ ಬಳಿಕ ಮನೆಯ ಕೀ ನೀಡಲಾಗುತ್ತದೆ. ಒಂದು ವೇಳೆ ಆ ಮನೆ ಬೇಡ ಎಂದಾದರೆ ಠೇವಣಿ ಹಣವನ್ನು ವಾಪಸ್‌ ನೀಡಲಾಗುವುದು ಎಂದು ತಿಳಿಸಿದರು.

ಇನ್ನು, ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ 54,476 ಬಹುಮಹಡಿ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಈ ಪೈಕಿ 46,830 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಾಗಿ ಕಂದಾಯ ಇಲಾಖೆಯಿಂದ 1182 ಎಕರೆ ಜಮೀನು ಮಂಜೂರಾಗಿದ್ದು, ವಾಸಯೋಗ್ಯ 553 ಎಕರೆ ಜಮೀನನ್ನು ಕಂದಾಯ ಇಲಾಖೆಯಿಂದ ನಿಗಮಕ್ಕೆ ಹಸ್ತಾಂತರಿಸಿಕೊಂಡು ಒಟ್ಟು 78 ಸ್ಥಳಗಳಲ್ಲಿ ವಿವಾದ ರಹಿತ 493 ಎಕರೆ ಜಾಗದಲ್ಲಿ 1ಬಿಎಚ್‌ಕೆ 52,735 ಮನೆಗಳು ಮತ್ತು ಆರು ಸಾವಿರ ಎರಡು ಬಿಎಚ್‌ಕೆ ಮೆನಗಳ ನಿರ್ಮಾಣ ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios